* ಪಾಲಿಕೆಯಿಂದ ವಂಶವಾಹಿ ಪರೀಕ್ಷೆ
* ಸೋಂಕು ಹೆಚ್ಚಿರುವ ಪ್ರದೇಶಗಳ 150 ಮಂದಿಯ ಮಾದರಿ ಸಂಗ್ರಹ
* ಇನ್ನೊಂದು ವಾರದಲ್ಲೇ ವರದಿ
* ಸ್ಥಳೀಯರಲ್ಲಿ ರೂಪಾಂತರಿ ಪತ್ತೆಯಾದರೆ ಕಠಿಣ ನಿಯಮ
* ಕ್ರಿಸ್‌ಮಸ್, ಹೊಸವರ್ಷ ಆಚರಣೆಗೆ ಬ್ರೇಕ್?
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಡಿ.16): ರಾಜಧಾನಿಯಲ್ಲಿ ಒಮಿಕ್ರೋನ್ ರೂಪಾಂತರಿ ಸಮುದಾಯಕ್ಕೆ ಹಬ್ಬಿದೆಯೇ ಎಂಬುದನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಸೋಂಕು ಹೆಚ್ಚಿರುವ ಪ್ರದೇಶಗಳ ಸ್ಥಳೀಯ ಸೋಂಕಿತರ ವಂಶವಾಹಿ ಮಾದರಿಯನ್ನು ಪರೀಕ್ಷೆಗೆ ಕಳುಸಿದ್ದು, ವರದಿ ಸದ್ಯದಲ್ಲಿ ಬರಲಿದೆ.
ಒಂದು ವೇಳೆ ಈ ಪರೀಕ್ಷೆಯ ಮೂಲಕ ಸ್ಥಳೀಯರಲ್ಲಿಯೂ ರೂಪಾಂತರಿ ಪಸರಿಸಿದೆ ಎಂದು ದೃಢಪಟ್ಟರೆ ಬೆಂಗಳೂರಿನಲ್ಲಿ ಮತ್ತಷ್ಟುಬಿಗಿ ಕ್ರಮ ಜಾರಿಗೊಳಿಸುವ ಸಾಧ್ಯತೆಗಳಿವೆ. ಅದರಲ್ಲೂ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಬೀಳಬಹುದು.
Omicron variant : ಬೆಂಗಳೂರಿನ ಒಮಿಕ್ರೋನ್ ಸೋಂಕಿತ ಗುಣಮುಖ
ಈವರೆಗೂ ವಿದೇಶದಿಂದ ಬಂದವರು ಅಥವಾ ಅವರ ಸಂಪರ್ಕ ಹೊಂದಿ ಸೋಂಕು ಧೃಢಪಟ್ಟವರಿಗೆ ಮಾತ್ರ ವಂಶವಾಹಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಒಮಿಕ್ರೋನ್ ರಾಜ್ಯದಲ್ಲಿ ಕಾಣಿಸಿಕೊಂಡು 10 ದಿನಗಳಾಗಿದ್ದು, ಸ್ಥಳೀಯ ಮಟ್ಟದಲ್ಲಿ ಈಗಾಗಲೇ ಪಸರಿಸಿದೆಯೇ ಎಂಬ ಅನುಮಾನ ತಜ್ಞರಲ್ಲಿದೆ. ಅಲ್ಲದೆ, ಒಮಿಕ್ರೋನ್ ದೃಢಪಟ್ಟನಂತರ (ಹಿಂದಿನ ತಿಂಗಳಿಗೆ ಹೋಲಿಸಿದರೆ) ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆ ಸೋಂಕು ಹೊಸ ಪ್ರಕರಣಗಳು ಹೆಚ್ಚಿರುವ ಮತ್ತು ಒಮಿಕ್ರೋನ್ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನಲ್ಲಿಯೇ ಸಮುದಾಯಕ್ಕೆ ಒಮಿಕ್ರೋನ್ ಹರಡಿದೆಯೇ ಎಂದು ಸ್ಥಳೀಯ ಸೋಂಕಿತರಿಗೂ ವಂಶವಾಹಿ ಪರೀಕ್ಷೆ ನಡೆಸಿ ಖಚಿತಪಡಿಸಿಕೊಳ್ಳಲಾಗುತ್ತಿದೆ.
150 ಮಾದರಿ ವಂಶವಾಹಿ ಪರೀಕ್ಷೆ
ಸದ್ಯ ನಗರದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ 100 ಕಂಟೈನ್ಮೆಂಟ್ ವಲಯಗಳಿವೆ. ಅಲ್ಲದೆ, ಅಪಾರ್ಟ್‌ಮೆಂಟ್, ಖಾಸಗಿ ಸಂಸ್ಥೆ, ವಸತಿ ಶಾಲೆಗಳಲ್ಲಿ ನಿರಂತರ ಸೋಂಕು ವರದಿಯಾದ ಹಿನ್ನೆಲೆ ಕೊರೋನಾ ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಇಲ್ಲಿನ ಸೋಂಕಿತರಲ್ಲಿ ಆಯ್ದ 15-20 ಮಂದಿಯ ಮಾದರಿಯನ್ನು ಕಳೆದ ಐದು ದಿನಗಳಿಂದ ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಈವರೆಗೂ 150 ಸೋಂಕಿತರ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಗೆ ಕನಿಷ್ಠ ಏಳು ದಿನ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ| ಬಾಲಸುಂದರ್ ತಿಳಿಸಿದ್ದಾರೆ.
Omicron Variant ಲಸಿಕೆ ಪರಿಣಾಮ ಬೀರಲ್ಲ, ಬೂಸ್ಟರ್ ಅಗತ್ಯವಿಲ್ಲ, ಎಚ್ಚರ ತಪ್ಪಿದರೆ ಓಮಿಕ್ರಾನ್ ಅಪಾಯ!
ಡೆಲ್ಟಾ ಕಲಿಸಿಕೊಟ್ಟ ಪಾಠ
ಈ ಹಿಂದೆ ತಂತ್ರಜ್ಞಾನ ಮೂಲಸೌಕರ್ಯ ಕೊರತೆಯಿಂದ ಕೊರೋನಾ ವೈರಸ್‌ನ ಡೆಲ್ಟಾರೂಪಾಂತರಿಯನ್ನು ಪತ್ತೆ ಹಚ್ಚುವುದರೊಳಗೆ ಎರಡನೇ ಅಲೆ ಮುಕ್ತಾಯ ಹಂತಕ್ಕೆ ಬಂದಿತ್ತು. ಅಷ್ಟೆರಲ್ಲಾಗಲೇ ಸೋಂಕು ಎಲ್ಲಾ ಪ್ರದೇಶವನ್ನು ಆಕ್ರಮಿಸಿ ಲಕ್ಷಾಂತರ ಮಂದಿಗೆ ತಗುಲಿ, ಸಾವಿರಾರು ಮಂದಿ ಸಾವಿಗೀಡಾಗಿದ್ದರು. ಅದರಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ. ಪ್ರಸ್ತುತ ರೂಪಾಂತರಿ ಪರೀಕ್ಷೆಗೆ ರಾಜ್ಯದಲ್ಲಿಯೇ ಮೂರು ಪ್ರಯೋಗಾಲಯಗಳಿವೆ. ಸದ್ಯ ಪತ್ತೆಯಾಗಿರುವ ಒಮಿಕ್ರೋನ್ ರೂಪಾಂತರಿಯನ್ನು ಆರಂಭದ ದಿನಗಳಲ್ಲಿಯೆ ಸಮುದಾಯಕ್ಕೆ ಹರಡಿದೆಯೇ ಎಂದು ಪತ್ತೆಯಾದರೆ ಅಗತ್ಯ ಸಿದ್ಧತೆ ಮತ್ತು ಕಠಿಣ ಕ್ರಮ ಜಾರಿಗೊಳಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಸಮುದಾಯ ಪರೀಕ್ಷೆಗೆ ಇತರೆ ಕಾರಣಗಳಿವು
*ವಿಶ್ವ ಮಹಾನಗರಗಳ ಪೈಕಿ ಬೆಂಗಳೂರು ನೇರ ಸಂಪರ್ಕ ಹೊಂದಿದೆ. ಒಮಿಕ್ರೋನ್ ಹೆಚ್ಚಿರುವ ದೇಶಗಳಿಂದ ನಿತ್ಯ 500ಕ್ಕೂ ಅಧಿಕ ಪ್ರಯಾಣಿಕರು ಬರುತ್ತಲೇ ಇದ್ದಾರೆ.
*ವಿದೇಶದಿಂದ ಬಂದ ಅದರಲ್ಲೂ ಒಮಿಕ್ರೋನ್ ಹೆಚ್ಚಿರುವ ದೇಶಗಳಿಂದ ಬಂದದರ ಆರೂವರೆ ಸಾವಿರ ಪ್ರಯಾಣಿಕರ ಪೈಕಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ (ಶೇ.70ರಷ್ಟು) ಬೆಂಗಳೂರಿನಲ್ಲಿಯೇ ಹೋಂ ಕ್ವಾರಂಟೈನ್ ಇದ್ದಾರೆ. ಇವರಿಂದಲೂ ಸೋಂಕು ಹರಡುವ ಸಾಧ್ಯತೆಗಳಿವೆ.
*ಹೋಂ ಕ್ವಾರಂಟೈನ್‌ನಲ್ಲಿರುವವರ ಕೆಲ ದಿನಗಳ ಬಳಿಕ ಕೆಲವರಲ್ಲಿ ಕೊರೋನಾ ಸೋಂಕು, ಒಬ್ಬರಲ್ಲಿ ಒಮಿಕ್ರೋನ್ ರೂಪಾಂತರಿ ಪತ್ತೆಯಾಗುತ್ತಿದೆ.
*ವಿಶ್ವಸಂಸ್ಥೆಯು ಒಮಿಕ್ರೋನ್ ರೂಪಾಂತರಿಯು ವೇಗವಾಗಿ ಹರಡುವ ಶಕ್ತಿ ಹೊಂದಿದೆ ಎಂದು ತಿಳಿಸಿರುವುದು.
*ಸ್ಥಳೀಯವಾಗಿ ರೂಪಾಂತರಿ ಒಮಿಕ್ರೋನ್ ಹರಡಿದ್ದರೆ ಅಗತ್ಯ ಕ್ರಮ ಮುಂದಾಗಲು ಅನುಕೂಲ.
Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್, ತಪ್ಪು ಅಭಿಪ್ರಾಯ ಬೇಡ, WHO ಎಚ್ಚರಿಕೆ!
ಕೊರೋನಾ ಹೊಸ ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಸೋಂಕು ದೃಢಪಟ್ಟವರಿಗೂ ವಂಶವಾಹಿ ಪರೀಕ್ಷೆಗೆ ಕ್ರಮಕೈಗೊಳ್ಳಲಾಗಿದೆ. ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 150 ಮಾದರಿಗಳನ್ನು ಕಳುಹಿಸಿ ಕೊಡಲಾಗಿದ್ದು, ಈ ವಾರದಲ್ಲಿಯೇ ವರದಿ ಬರಲಿದೆ.
-ಡಾ. ತ್ರಿಲೋಕ್ ಚಂದ್ರ, ವಿಶೇಷ ಆಯುಕ್ತರು (ಆರೋಗ್ಯ), ಬಿಬಿಎಂಪಿ.