BBMP's New Scheme: ಬೀದಿ ನಾಯಿಗಳಿಗೆ 'ಚಿಕನ್ ರೈಸ್' ಭಾಗ್ಯ: ಬಿಬಿಎಂಪಿ ಹೊಸ ಯೋಜನೆ!

Kannadaprabha News, Ravi Janekal |   | Kannada Prabha
Published : Jul 10, 2025, 04:14 AM IST
BBMP

ಸಾರಾಂಶ

ಬೆಂಗಳೂರಿನ ಬೀದಿ ನಾಯಿಗಳಿಗೆ ಬಿಬಿಎಂಪಿಯಿಂದ ದಿನಕ್ಕೊಂದು ಹೊತ್ತು ಚಿಕನ್ ರೈಸ್ ಭಾಗ್ಯ. ಈ ಯೋಜನೆಗೆ ವಾರ್ಷಿಕ 2.88 ಕೋಟಿ ರೂ. ವೆಚ್ಚ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು ಜು(.10): ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಅದೃಷ್ಟ ಖುಲಾಯಿಸಿದ್ದು, ಶೀಘ್ರದಲ್ಲಿ ದಿನಕ್ಕೊಂದು ಬಾರಿ ಬಿಸಿ ಬಿಸಿ ‘ಚಿಕನ್‌ ರೈಸ್‌’ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಇತ್ತೀಚೆಗೆ ಬಿಬಿಎಂಪಿಯು ‘ಕುಕುರ್‌ ತಿಹಾರ್‌’ ಎಂಬ ಪರಭಾಷೆ ಹೆಸರಿಟ್ಟುಕೊಂಡು ರಾಜಧಾನಿ ಬೀದಿ ನಾಯಿಗಳಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಹಾರ ನೀಡುವ ಯೋಜನೆ ಹಾಕಿಕೊಂಡಿತ್ತು. ಪರಭಾಷೆ ಹೆಸರಿನಲ್ಲಿ ಆರಂಭಿಸಿದ ಯೋಜನೆಗೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೂ ಯೋಜನೆ ಶುರುವಾದ ಕೆಲವೇ ದಿನಗಳಲ್ಲಿ ಮಕಾಡೆ ಮಲಗಿತ್ತು. ಆದರೂ ಸುಮ್ಮನಾಗದ ಬಿಬಿಎಂಪಿಯ ಅಧಿಕಾರಿಗಳು ಇದೀಗ ತೆರಿಗೆದಾರರ ಹಣದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ಕೆ ಮುಂದಾಗಿದೆ. ಅದಕ್ಕಾಗಿ ವಾರ್ಷಿಕ ಬರೋಬ್ಬರಿ 2.88 ಕೋಟಿ ರು. ವೆಚ್ಚದ ‘ಚಿಕನ್‌ ರೈಸ್’ ಭಾಗ್ಯದ ಯೋಜನೆ ರೂಪಿಸಿದೆ.

ಈಗಾಗಲೇ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಸಾರ್ವಜನಿಕ ಸ್ಥಳದಲ್ಲಿ ನಿರ್ಭೀತವಾಗಿ ಓಡಾಟ ನಡೆಸುವುದು ಕಷ್ಟಕರವಾದ ಪರಿಸ್ಥಿತಿ ಇದೆ. ಇತ್ತೀಚೆಗಷ್ಟೇ ಲಾಲ್‌ಬಾಗ್‌ನಲ್ಲಿ 72 ವರ್ಷ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಬೀದಿ ನಾಯಿಗಳನ್ನು ನಿಯಂತ್ರಿಸುವ ಕ್ರಮ ವಹಿಸದ ಪಾಲಿಕೆ ಅಧಿಕಾರಿಗಳು, ಬೀದಿ ನಾಯಿಗಳನ್ನು ಪೋಷಣೆಗೆ ಮುಂದಾಗಿರುವುದು ಜನಾಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

367 ಗ್ರಾಂ ಚಿಕನ್ ರೈಸ್‌ಗೆ 22.42 ರು. ವೆಚ್ಚ

ದಿನಕ್ಕೆ ಒಂದು ಬಾರಿ ಬೀದಿನಾಯಿಗೆ ಆಹಾರ ನೀಡುವುದಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ರತಿ ನಾಯಿಗೆ 22.42 ರು. ವೆಚ್ಚ ಮಾಡಲಾಗುತ್ತಿದೆ. 15 ಕೆ.ಜಿ ಇರುವ ನಾಯಿಗೆ ದಿನಕ್ಕೆ 465 ರಿಂದ 750 ಕ್ಯಾಲೋರಿ ಅಗತ್ಯವಿದೆ ಎಂಬ ಲೆಕ್ಕಾಚಾರದಲ್ಲಿ 750 ಕ್ಯಾಲೋರಿ ಮೆನು ಸಿದ್ಧಪಡಿಸಲಾಗಿದೆ.

ಶೇ.50 ರಿಂದ 60 ರಷ್ಟು ಕಾರ್ಬೋಹೈಡ್ರೇಟ್‌ಗೆ 100 ಗ್ರಾಂ ರೈಸ್‌, ಶೇ.15 ರಿಂದ 20 ರಷ್ಟು ಪ್ರೋಟೀನ್‌ಗೆ 150 ಗ್ರಾಂ ಚಿಕನ್‌, ಶೇ.10 ರಿಂದ 15 ರಷ್ಟು ಕೊಬ್ಬಿಗೆ 10 ಗ್ರಾಂ ಎಣ್ಣೆ, ವಿಟಮಿನ್‌ ಮತ್ತು ಮಿನರಲ್ಸ್‌ಗೆ 100 ಗ್ರಾಂ ತರಕಾರಿ, 5 ಗ್ರಾಂ ಉಪ್ಪು ಹಾಗೂ 2.5 ಗ್ರಾಂ ಅರಿಶಿಣ ಬಳಕೆಯ 367 ಗ್ರಾಂ ತೂಕದ ಚಿಕನ್‌ ರೈಸ್‌ ನೀಡುವುದಕ್ಕೆ ತೀರ್ಮಾನಿಸಿದೆ.

5 ಸಾವಿರ ನಾಯಿಗೆ ಮಾತ್ರ ಚಿಕನ್‌ ರೈಸ್‌:

ಬಿಬಿಎಂಪಿಯ ಎಂಟು ವಲಯದ ಪೈಕಿ ತಲಾ 400 ರಿಂದ 500 ಬೀದಿ ನಾಯಿಗಳಿಗೆ ಮಾತ್ರ ಪ್ರತಿ ದಿನ ಚಿಕನ್‌ ರೈಸ್‌ ಭಾಗ್ಯ ಸಿಗಲಿದೆ. ಈ ಪ್ರಕಾರ ದಿನಕ್ಕೆ 5 ಸಾವಿರ ಬೀದಿ ನಾಯಿಗಳಿಗೆ ಮಾತ್ರ ಚಿಕನ್‌ ರೈಸ್‌ ಭಾಗ್ಯ ದೊರೆಯಲಿದೆ. ಪ್ರತಿ ವಲಯದಲ್ಲಿ ಚಿಕನ್‌ ರೈಸ್‌ ಪೂರೈಕೆಗೆ 100 ರಿಂದ 125 ಸ್ಥಳ ಗುರುತಿಸಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಯು ಚಿಕನ್‌ ರೈಸ್‌ ಸಿದ್ಧಪಡಿಸಿ ಗುರುತಿಸಿದ ಎಲ್ಲಾ ಸ್ಥಳಗಳಿಗೆ ತಲಾ ಒಂದು ನಾಯಿಗೆ 367 ಗ್ರಾಂನಂತೆ ವಿತರಣೆ ಮಾಡಿ, ಬೀದಿ ನಾಯಿಗಳು ಆಹಾರ ತಿಂದು ಮುಗಿಸಿದ ಬಳಿಕ ಆ ಸ್ಥಳ ಸ್ವಚ್ಛಗೊಳಿಸಬೇಕೆಂದು ಷರತ್ತು ವಿಧಿಸಿದೆ.

ಸಾರ್ವಜನಿಕರ ಸಹಭಾಗಿತ್ವಕ್ಕೂ ಅವಕಾಶ:

ನಗರದಲ್ಲಿ ಪ್ರತಿ ದಿನ ಸುಮಾರು 500 ಅಧಿಕ ಪ್ರಾಣಿ ಪ್ರಿಯರು ತಮ್ಮ ವ್ಯಾಪ್ತಿಯಲ್ಲಿ 5 ರಿಂದ 10 ಬೀದಿ ನಾಯಿಗಳಂತೆ ಸುಮಾರು 25 ಸಾವಿರ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಬಿಬಿಎಂಪಿಯು ನೇಮಿಸುವ ಏಜೆನ್ಸಿಗಳಿಗೆ ಸಾರ್ವಜನಿಕರು ಹಣ ಕೊಟ್ಟು ಇನ್ನಷ್ಟು ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕೆ ಸಹಭಾಗಿತ್ವ ವಹಿಸುವುದಕ್ಕೂ ಇದರಿಂದ ಅವಕಾಶ ದೊರೆಯಲಿದೆ. ಆಹಾರ ನೀಡುವುದರಿಂದ ನಾಯಿಗಳ ಉಪಟಳ ಕಡಿಮೆ ಮಾಡಬಹುದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳ ಸಮರ್ಥನೆಯಾಗಿದೆ.

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯೊಂದು ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವ ಯೋಜನೆ ಆರಂಭಿಸಿರುವ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗುತ್ತಿದೆ. ನಗರದಲ್ಲಿ 2.80 ಲಕ್ಷ ಬೀದಿ ನಾಯಿಗಳಿದ್ದು, ಈ ಪೈಕಿ ಶೇ.2 ರಷ್ಟು ಬೀದಿ ನಾಯಿಗಳಿಗೆ ಬಿಬಿಎಂಪಿ ಹಣದಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿದೆ.

- ಸುರಳ್ಕರ್ ವಿಕಾಸ್ ಕಿಶೋರ್‌, \Bವಿಶೇಷ ಆಯುಕ್ತರು, ಬಿಬಿಎಂಪಿ ಪಶುಪಾಲನೆ ವಿಭಾಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌