ಕರ್ನಾಟಕಕ್ಕೆ ಮತ್ತೆರಡು ಡಿಫೆನ್ಸ್ ಕಾರಿಡಾರ್ ಕೊಡಿ; ರಕ್ಷಣಾ ಸಚಿವರಿಗೆ ಬೇಡಿಕೆಯಿಟ್ಟ ಸಿಎಂ ನಿಯೋಗ!

Published : Jul 09, 2025, 06:59 PM IST
Rajnath Singh Meet Siddaramaiah Team

ಸಾರಾಂಶ

ಕರ್ನಾಟಕಕ್ಕೆ ಎರಡು ಪ್ರತ್ಯೇಕ ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದ ಬಲಿಷ್ಠತೆಯನ್ನು ಪರಿಗಣಿಸಿ ಈ ಕೋರಿಕೆ ಮಾಡಲಾಗಿದೆ.

ನವದೆಹಲಿ (ಜು.09): ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ಸರಕಾರವು ಎರಡು ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ನಿಯೋಗವು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದೆ.

ಕೇಂದ್ರ ಸರಕಾರವು 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿದೆ. ಆದರೆ, ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ.75ರಷ್ಟು ಪಾಲು ಹೊಂದಿದೆ. ಜಾಗತಿಕವಾಗಿ 3ನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಸಂಪಾದಿಸಿದೆ. ಹೀಗಾಗಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಿಗೆ ಒಂದೊಂದು ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿದರೆ, ಇದು ಮೇಕ್‌ ಇನ್‌ ಇಂಡಿಯಾ ಉಪಕ್ರಮಕ್ಕೂ ಬಲ ತುಂಬುತ್ತದೆ ಎಂದು ಸಿದ್ದರಾಮಯ್ಯ ಮನದಟ್ಟು ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪಾಟೀಲ ಅವರು ಕೂಡ ಪೂರಕ ಮಾಹಿತಿ ಒದಗಿಸಿದರು.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ವಿಜಯಪುರ 3 ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳಾದ ಬಾಲೂ ಫೋರ್ಜ್‌, ಏಕಸ್‌, ಬಿಕಾರ್‌ ಏರೋಸ್ಪೇಸ್‌, ವಾಲ್‌ಚಂದ್‌ ನಗರ್‌ ಇಂಡಸ್ಟ್ರೀಸ್‌ ಮುಂತಾದವು ನೆಲೆಯೂರಿವೆ. ಜತೆಗೆ ಬೆಳಗಾವಿಯಲ್ಲಿ 250 ಎಕರೆಯಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್‌ ಉತ್ಪಾದನೆಯ ವಿಶೇಷ ಆರ್ಥಿಕ ವಲಯವು ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ಈ ಸಂದರ್ಭದಲ್ಲಿ ಗಮನಕ್ಕೆ ತರಲಾಗಿದೆ.

ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಾದ ಸಾರ್ವಜನಿಕ ವಲಯದ ಎಚ್‌ಎಎಲ್‌, ಕಾಲಿನ್ಸ್‌ ಏರೋಸ್ಪೇಸ್‌, ಡೈನಮ್ಯಾಟಿಕ್‌ ಟೆಕ್ನಾಲಜೀಸ್‌, ಸೆಂಟಮ್, ಸಾಸ್ಮೋಸ್‌, ಬೆಲ್ಲಾಟ್ರಿಕ್ಸ್‌ ಮುಂತಾದವು ಇವೆ. ಇವುಗಳೊಂದಿಗೆ ಟಿಎಎಸ್‌ಎಲ್‌ ತನ್ನ ಅಂತಿಮ ಜೋಡಣಾ ಘಟಕವನ್ನು ಆರಂಭಿಸುತ್ತಿದೆ. ಏರ್‌ ಇಂಡಿಯಾ ಮತ್ತು ಇಂಡಿಗೋ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ.

ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಇದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ಕ್ರಾಫ್ಟ್‌ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ.67ರಷ್ಟಿದೆ. ಇವೆಲ್ಲವನ್ನೂ ಪರಿಗಣಿಸಿ, ಕರ್ನಾಟಕ ರಾಜ್ಯಕ್ಕೆ ಇನ್ನೂ 2 ಡಿಫೆನ್ಸ್‌ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗವು ಒತ್ತಾಯಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಇಂಧನ ಸಚಿವ ಕೆ ಜೆ ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಇದ್ದರು. ಮನವಿ ಸ್ವೀಕರಿಸಿದ ರಾಜನಾಥ್‌ ಸಿಂಗ್‌, ಇವುಗಳನ್ನು ಸೂಕ್ತವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ