ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ 100 ಹಾಸಿಗೆಯ ಆಸ್ಪತ್ರೆ ಸ್ಥಾಪನೆ ಹಾಗೂ ಬಿಬಿಎಂಪಿಯ ಎಂಟು ವಲಯಗಳಲ್ಲಿ ತಲಾ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಅ.22) : ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ 100 ಹಾಸಿಗೆಯ ಆಸ್ಪತ್ರೆ ಸ್ಥಾಪನೆ ಹಾಗೂ ಬಿಬಿಎಂಪಿಯ ಎಂಟು ವಲಯಗಳಲ್ಲಿ ತಲಾ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ.
undefined
ರಾಜಧಾನಿ ಬೆಂಗಳೂರು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ನಮ್ಮ ಕ್ಲಿನಿಕ್, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಅದರೊಂದಿಗೆ ಇದೀಗ ವಿಧಾನಸಭಾ ಕ್ಷೇತ್ರವಾರು ತಲಾ ಒಂದು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ ಮಾಡುವುದು ಹಾಗೂ ಪಾಲಿಕೆಯ 8 ವಲಯದಲ್ಲಿ ತಲಾ 1 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವ ಬಗ್ಗೆ ಬಿಬಿಎಂಪಿ ಆರೋಗ್ಯ ವಿಭಾಗದಿಂದ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
₹170 ಕೋಟಿ ವೆಚ್ಚ
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಈಗಾಗಲೇ ಪಶ್ಚಿಮ ವಲಯದ ಎಂಸಿ ಲೇಔಟ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದೆ. ಹಾಗಾಗಿ, ಉಳಿದ ಏಳು ವಲಯದಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ₹100 ಕೋಟಿ ಯೋಜನೆ ಸಿದ್ಧಪಡಿಸಿಲಾಗಿದೆ.
ಇನ್ನು ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ವಿಧಾನಸಭಾ ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇವೆ. ಉಳಿದ 21 ವಿಧಾನಸಭಾ ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ₹70 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದೆ.
ತಾಲೂಕು ಆಸ್ಪತ್ರೆ ಮಾದರಿ
ರಾಜ್ಯದ ಪ್ರತಿ ತಾಲೂಕಿನಲ್ಲಿ ತಾಲೂಕು ಸಾರ್ವಜನಿಕರ ಆರೋಗ್ಯ ಕೇಂದ್ರಗಳಿವೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಕಡೆ ಆಸ್ಪತ್ರೆಗಳಿಲ್ಲ. ಹೀಗಾಗಿ, ತಾಲೂಕು ಆಸ್ಪತ್ರೆ ಮಾದರಿಯಲ್ಲಿ ವಿಧಾನಸಭಾ ಕ್ಷೇತ್ರವಾರು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ನಬಾರ್ಡ್‌ನಿಂದ ಸಹಾಯಧನ:
ವಿಧಾನಸಭಾ ಕ್ಷೇತ್ರವಾರು 100 ಹಾಸಿಗೆ ಆಸ್ಪತ್ರೆ ಹಾಗೂ ವಲಯವಾರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಯೋಜನೆಗೆ ₹170 ಕೋಟಿ ಬೇಕಾಗಲಿದೆ. ರಾಜ್ಯ ಸರ್ಕಾರದ ಮೂಲಕ ನಬಾರ್ಡ್‌ಗೆ ಸಹಾಯಧನ ನೀಡುವಂತೆ ಕೋರಲಾಗಿದೆ. ಪ್ರಸ್ತಾವನೆ ಅನುಮೋದನೆಯಾಗಿ ಅನುದಾನ ಬಿಡುಗಡೆ ಬಳಿಕ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
100 ಹಾಸಿಗೆ ಆಸ್ಪತ್ರೆ ಇಲ್ಲದ ಕ್ಷೇತ್ರಗಳಿವು
ಆರ್.ಆರ್.ನಗರ, ಶಿವಾಜಿನಗರ, ಗಾಂಧಿನಗರ, ರಾಜಾಜಿನಗರ, ಕೆ.ಆರ್.ಪುರ, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ, ಸಿ.ವಿ.ರಾಮನ್ ನಗರ, ವಿಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ ಸ್ಥಾಪಿಸಬೇಕಿದೆ.
ತಾಲೂಕು ಆಸ್ಪತ್ರೆಗಳ ಮಾದರಿಯಲ್ಲಿ ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಜತೆಗೆ, ವಲಯವಾರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೂ ಪ್ರಸ್ತಾವನೆ ಸಲ್ಲಿಸಿದ್ದೇವೆ.
-ಡಾ। ತ್ರಿಲೋಕಚಂದ್ರ, ವಿಶೇಷ ಆಯುಕ್ತ, ಬಿಬಿಎಂಪಿ ಆರೋಗ್ಯ ವಿಭಾಗ.