Bengaluru: ಅಂಡರ್‌ ಪಾಸ್‌ ಪರಿಶೀಲನೆ ನಿಲ್ಲಿಸಿದ ಬಿಬಿಎಂಪಿ!

By Kannadaprabha NewsFirst Published Jun 5, 2023, 6:45 AM IST
Highlights

  ಕೆ.ಆರ್‌.ಸರ್ಕಲ್‌ನ ಅಂಡರ್‌ಪಾಸ್‌ನ ದುರಂತ ಸಂಭವಿಸಿ ಬರೋಬ್ಬರಿ ಎರಡು ವಾರ ಕಳೆದರೂ ಬಿಬಿಎಂಪಿಯು ನಗರದ ಅಂಡರ್‌ ಪಾಸ್‌ಗಳ ಸುರಕ್ಷತೆಯ ಪರಿಶೀಲನೆ ಕಾರ್ಯ ಪೂರ್ಣಗೊಳಿಸಿಲ್ಲ. ಮತ್ತೊಂದೆಡೆ ಸಮಸ್ಯೆ ಇರುವ ಅಂಡರ್‌ ಪಾಸ್‌ಗಳಲ್ಲಿ ಕನಿಷ್ಠ ದುರಸ್ತಿ ಕಾರ್ಯವನ್ನೂ ಬಿಬಿಎಂಪಿ ಕೈಕೊಂಡಿಲ್ಲ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು ಜೂ.5) :  ಕೆ.ಆರ್‌.ಸರ್ಕಲ್‌ನ ಅಂಡರ್‌ಪಾಸ್‌ನ ದುರಂತ ಸಂಭವಿಸಿ ಬರೋಬ್ಬರಿ ಎರಡು ವಾರ ಕಳೆದರೂ ಬಿಬಿಎಂಪಿಯು ನಗರದ ಅಂಡರ್‌ ಪಾಸ್‌ಗಳ ಸುರಕ್ಷತೆಯ ಪರಿಶೀಲನೆ ಕಾರ್ಯ ಪೂರ್ಣಗೊಳಿಸಿಲ್ಲ. ಮತ್ತೊಂದೆಡೆ ಸಮಸ್ಯೆ ಇರುವ ಅಂಡರ್‌ ಪಾಸ್‌ಗಳಲ್ಲಿ ಕನಿಷ್ಠ ದುರಸ್ತಿ ಕಾರ್ಯವನ್ನೂ ಬಿಬಿಎಂಪಿ ಕೈಕೊಂಡಿಲ್ಲ.

ಕಳೆದ ಮೇ 21ರಂದು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್‌. ವೃತ್ತದ ಅಂಡರ್‌ ಪಾಸ್‌ನಲ್ಲಿ ಭಾರೀ ಪ್ರಮಾಣ ನೀರು ತುಂಬಿಕೊಂಡಿತ್ತು. ಈ ವೇಳೆ ಕಾರಿನಲ್ಲಿ ಚಲಿಸುತ್ತಿದ್ದ ಭಾನುರೇಖಾ ಎಂಬ ಯುವತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದಾದ ಬೆನ್ನಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿರುವ ಎಲ್ಲಾ ಅಂಡರ್‌ ಪಾಸ್‌ಗಳ ಸುರಕ್ಷತೆ ಪರಿಶೀಲನೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು.

ಬೆಂಗಳೂರು: ವರ್ಷಾಂತ್ಯಕ್ಕೆ ಬಿಬಿಎಂಪಿಗೆ ಚುನಾವಣೆ?

ಈ ದುರಂತ ಸಂಭವಿಸಿ ಇದೀಗ ಬರೋಬ್ಬರಿ 14 ದಿನ ಕಳೆದಿವೆ. ಮುಂಗಾರು ಬೇರೆ ಆರಂಭಗೊಳ್ಳಲಿದೆ. ಆದರೂ ಅಂಡರ್‌ ಪಾಸ್‌ಗಳ ಸುರಕ್ಷತೆ ಬಗ್ಗೆ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸದೇ ಬಿಬಿಎಂಪಿ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ.

12 ಅಂಡರ್‌ ಪಾಸ್‌ ಪರಿಶೀಲನೆ ಇಲ್ಲ:

ನಗರದಲ್ಲಿ 18 ರೈಲ್ವೆ ಅಂಡರ್‌ ಪಾಸ್‌ ಹಾಗೂ ಬಿಬಿಎಂಪಿ 35 ಅಂಡರ್‌ ಪಾಸ್‌ಗಳು ಸೇರಿದಂತೆ ಒಟ್ಟು 53 ಅಂಡರ್‌ ಪಾಸ್‌ಗಳಿವೆ. ಈ ಅಂಡರ್‌ ಪಾಸ್‌ಗಳ ಪೈಕಿ ದುರಂತ ಸಂಭವಿಸಿದ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ ಸೇರಿದಂತೆ 41 ಅಂಡರ್‌ ಪಾಸ್‌ಗಳ ಪರಿಶೀಲನೆ ನಡೆಸಲಾಗಿದೆ. 33 ಅಂಡರ್‌ ಪಾಸ್‌ಗಳ ವರದಿ ಸಲ್ಲಿಕೆ ಮಾಡಲಾಗಿದೆ. ಇನ್ನೂ 8 ಅಂಡರ್‌ ಪಾಸ್‌ಗಳ ವರದಿ ಸಿದ್ಧಪಡಿಸಬೇಕಿದೆ. 12 ಅಂಡರ್‌ ಪಾಸ್‌ಗಳ ಪರಿಶೀಲನಾ ಕಾರ್ಯವನ್ನು ನಡೆಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರಸ್ತಿ ಕಾರ್ಯವೂ ಮರೀಚಿಕೆ

ಇನ್ನು ಕೆ.ಆರ್‌.ಸರ್ಕಲ್‌, ಲೀ ಮೆರಿಡಿಯನ್‌ ಹಾಗೂ ಕಾವೇರಿ ಜಂಕ್ಷನ್‌ ಅಂಡರ್‌ ಪಾಸ್‌ನಲ್ಲಿ ಸಣ್ಣ ಮಳೆಗೂ ನೀರು ತುಂಬಿಕೊಳ್ಳುವ ಸ್ಥಿತಿ ಇದೆ. ಈ ಅಂಡರ್‌ ಪಾಸ್‌ಗಳನ್ನು ಮಳೆಗಾಲದಲ್ಲಿ ಬಳಕೆ ಮಾಡುವುದಕ್ಕೆ ಯೋಗ್ಯವಾಗಿಲ್ಲ. ಅಂಡರ್‌ ಪಾಸ್‌ನಲ್ಲಿ ಬಿದ್ದ ನೀರು ಹೊರ ಹೋಗುವುದಕ್ಕೆ ಸಾಕಷ್ಟುಸಮಸ್ಯೆ ಇದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದರೂ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ ಹೊರತುಪಡಿಸಿ ಕಾವೇರಿ ಜಂಕ್ಷನ್‌ ಮತ್ತು ಲೀ ಮೆರಿಡಿಯನ್‌ ಅಂಡರ್‌ ಪಾಸ್‌ನಲ್ಲಿ ಕನಿಷ್ಠ ಪಕ್ಷ ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡದೇ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. 

 

ಬೆಂಗಳೂರು: 5 ದಿನದಲ್ಲಿ ಬಿಲ್‌ ಪಾವತಿಸದಿದ್ದರೆ ಕೆಲಸ ಸ್ಥಗಿತ, ಬಿಬಿಎಂಪಿಗೆ ಗುತ್ತಿಗೆದಾರರ ಎಚ್ಚರಿಕೆ

ನಗರದಲ್ಲಿರುವ ಅಂಡರ್‌ ಪಾಸ್‌ಗಳ ಪರಿಶೀಲನಾ ಕಾರ್ಯವನ್ನು ಶೇ.80ರಷ್ಟುಪೂರ್ಣಗೊಳಿಸಲಾಗಿದೆ. ಉಳಿದ ಪರಿಶೀಲನಾ ಕಾರ್ಯವನ್ನು ಜೂನ್‌ 5ರ ಒಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಕೆ ಮಾಡಲಾಗುವುದು.

-ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌, ಬಿಬಿಎಂಪಿ

ಪರಿಶೀಲನೆ ಮುಗಿದ ಅಂಡರ್‌ ಪಾಸ್‌ಗಳು

ಲೀ ಮೆರಿಡಿಯನ್‌ ಅಂಡರ್‌ಪಾಸ್‌, ಕಾವೇರಿ ಜಂಕ್ಷನ್‌, ಕೆ.ಆರ್‌.ಸರ್ಕಲ್‌, ಮೇಖ್ರಿ ಸರ್ಕಲ್‌, ಯಲಹಂಕ ರೈಲ್ವೆ ಅಂಡರ್‌ ಪಾಸ್‌, ಸಿಎನ್‌ಆರ್‌ ರಾವ್‌ ವೃತ್ತದ ಅಂಡರ್‌ ಪಾಸ್‌, ನ್ಯೂಬಿಇಎಲ್‌ ಜಂಕ್ಷನ್‌ ಅಂಡರ್‌ ಪಾಸ್‌, ಗಂಗಮ್ಮ ಗುಡಿ ವೃತ್ತದ ಅಂಡರ್‌ ಪಾಸ್‌, ಆರ್‌ಎಂವಿ ಲೇಔಟ್‌ಯ ರೈಲ್ವೆ ಅಂಡರ್‌ ಪಾಸ್‌, ಆನಂದನಗರ ಅಂಡರ್‌ ಪಾಸ್‌, ನಾಯಂಡÜಹಳ್ಳಿ ರೈಲ್ವೆ ಅಂಡರ್‌ ಪಾಸ್‌, ದಂಡು ಪ್ರದೇಶ ಅಂಡರ್‌ ಪಾಸ್‌ (ಕಂಟೋನ್ಮೆಂಟ್‌).

click me!