'ವದಂತಿಗಳಿಗೆ ಕಿವಿಕೊಡಬೇಡಿ, ಮಾಸ್ಕ್‌ ಧರಿಸುವುದು ಕಡ್ಡಾಯ'

By Kannadaprabha NewsFirst Published Aug 27, 2020, 7:29 AM IST
Highlights

ಮಾಸ್ಕ್‌ ಧರಿಸದಿದ್ದರೆ ದಂಡ ಖಚಿತ: ಬಿಬಿಎಂಪಿ ಆಯುಕ್ತ ಸ್ಪಷ್ಟನೆ| ಸದ್ಯಕ್ಕೆ ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೋಟೆಲ್‌ ಕ್ವಾರಂಟೈನ್‌ ಪದ್ಧತಿ ಕೈಬಿಡಲಾಗಿದ್ದು, ಮನೆಯಲ್ಲೇ ಕ್ವಾರಂಟೈನ್‌ಗೆ ಸೂಚನೆ| ಬೆಂಗಳೂರು ನಗರದಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸಾಕಷ್ಟು ಅವಕಾಶವಿದ್ದು, ಉಚಿತ ಸೇವೆ ಸಹ ಲಭ್ಯ| 

ಬೆಂಗಳೂರು(ಆ.27): ನಗರದಲ್ಲಿ ಸಾರ್ವಜನಿಕರಿಗೆ ಮಾಸ್ಕ್‌ ಧರಿಸುವುದರಿಂದ ಯಾವುದೇ ವಿನಾಯಿತಿ ನೀಡಿಲ್ಲ. ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. 

ಮಾಸ್ಕ್‌ ಧರಿಸುವ ಕುರಿತು ವಿನಾಯಿತಿ ನೀಡಲಾಗಿದೆ ಎಂಬ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಯುಕ್ತರು, ನಗರದಲ್ಲಿ ವಾಯುವಿಹಾರ ಮಾಡುವಾಗ, ಕಾರು ಹಾಗೂ ಬೈಕ್‌ ಚಾಲನೆ ವೇಳೆ ಮಾಸ್ಕ್‌ ಧರಿಸುವಂತಿಲ್ಲ ಎನ್ನುವ ವದಂತಿಗೆ ಕಿವಿಗೊಡಬೇಡಿ, ಈ ರೀತಿಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮನೆಯಿಂದ ಹೊರ ಬಂದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ತಪ್ಪಿದರೆ ದಂಡ ವಿಧಿಸುವ ನಿಯಮ ಈಗಲೂ ಜಾರಿಯಲ್ಲಿದೆ ಎಂದರು.

ದ್ವಿಚಕ್ರ ವಾಹನ ಸವಾರರು ಹಾಗೂ ಕಾರಿನಲ್ಲಿ ಹೋಗುವವರಿಗೆ ಮಾಸ್ಕ್‌ ಧರಿಸಲು ವಿನಾಯ್ತಿ ನೀಡಲಾಗಿದೆ ಎಂಬುದು ಸುಳ್ಳು. ಈ ರೀತಿಯ ಯಾವುದೇ ಆದೇಶವಾಗಿಲ್ಲ. ಮಾರ್ಷಲ್‌ಗಳು ದಂಡ ವಿಧಿಸಬಾರದು ಎಂದೂ ಆದೇಶ ಮಾಡಿಲ್ಲ ಎಂದರು.

ಕೇಂದ್ರ ಒಪ್ಪಿದರೆ ಸೆಪ್ಟೆಂಬರ್‌ನಲ್ಲಿ ಮೆಟ್ರೋ ಸಂಚಾರ ಶುರು: ಸಚಿವ ಸುಧಾ​ಕ​ರ್‌

ಬೆಳಗಿನ ವಾಯು ವಿಹಾರ ಮಾಡುವವರು ಮಾಸ್ಕ್‌ ಧರಿಸಿ ನಡಿದರೆ ಉಸಿರು ಕಟ್ಟಿದಂತೆ ಆಗಲಿದೆ. ಆದ್ದರಿಂದ ವಾಕಿಂಗ್‌ ಮಾಡುವಾಗ ಮಾಸ್ಕ್‌ ಧರಿಸುವುದರಿಂದ ವಿನಾಯ್ತಿ ನೀಡಬೇಕು, ಕಾರಿನಲ್ಲಿ ಹೋಗುವಾಗ ಗಾಜು ಮುಚ್ಚಿದ್ದರೂ ಮಾಸ್ಕ್‌ ಧರಿಸಬೇಕೇ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಸಂಬಂಧ ಟಾಸ್ಕ್‌ ಪೋರ್ಸ್‌ನ ತಜ್ಞರಿಂದ ವಿವರಣೆ ಕೇಳಲಾಗಿತ್ತು. ಆದರೆ, ಯಾರಿಗೂ ವಿನಾಯಿತಿ ನೀಡಿಲ್ಲ ಎಂದು ತಿಳಿಸಿದರು.

'ಸೋಂಕಿತರ ಮನೆ ಮುಂದೆ ಭಿತ್ತಿ ಪತ್ರಕ್ಕೆ ಅಂಟಿಸದಿರುವ ಬಗ್ಗೆ ತೀರ್ಮಾನವಾಗಿಲ್ಲ’

ನಗರದಲ್ಲಿ ಕೊರೋನಾ ಸೋಂಕಿತರ ಮನೆಯ ಮುಂದೆ ‘ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಮನೆಗೆ ಭೇಟಿ ನೀಡಬೇಡಿ’ ಎಂಬ ಎಚ್ಚರಿಕೆ ಭಿತ್ತಿಪತ್ರ ಅಳವಡಿಸದಿರುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದರು.

ಟಾಸ್ಕ್‌ ಪೋರ್ಸ್‌ನಿಂದ ಎಚ್ಚರಿಕೆ ಭಿತ್ತಿಪತ್ರ ಕೈಬಿಡುವ ಬಗ್ಗೆ ನಿರ್ದೇಶನ ಬಂದಿಲ್ಲ. ಟಾಸ್ಕ್‌ಪೋರ್ಸ್‌ ನೇರವಾಗಿ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ಇಲ್ಲಿಯವರೆಗೆ ಪಾಲಿಕೆಗೆ ಈ ಸಂಬಂಧ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ, ಎಚ್ಚರಿಕೆ ಭಿತ್ತಿಪತ್ರ ಹಾಕುವುದನ್ನು ಮುಂದುವರಿಸಲಿದ್ದೇವೆ. ಟಾಸ್ಕ್‌ ಫೋರ್ಸ್‌ ಸಮಿತಿಯ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಸದ್ಯಕ್ಕೆ ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೋಟೆಲ್‌ ಕ್ವಾರಂಟೈನ್‌ ಪದ್ಧತಿ ಕೈಬಿಡಲಾಗಿದ್ದು, ಮನೆಯಲ್ಲೇ ಕ್ವಾರಂಟೈನ್‌ಗೆ ಸೂಚನೆ ನೀಡಲಾಗುತ್ತಿದೆ. ಅಲ್ಲದೆ ನಗರದಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸಾಕಷ್ಟುಅವಕಾಶವಿದ್ದು, ಉಚಿತ ಸೇವೆ ಸಹ ಲಭ್ಯವಿದೆ. ಇದನ್ನು ಅಗತ್ಯವಿರುವವರು ಬಳಸಿಕೊಳ್ಳಬಹುದು ಎಂದರು.

ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?

"

click me!