ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಪೂರ್ಣ: ನಾಳೆಯಿಂದ ಮತದಾರ ಪಟ್ಟಿ ಕಾರ್ಯ

By Kannadaprabha NewsFirst Published Aug 19, 2020, 9:58 AM IST
Highlights

ಸೆ.10ಕ್ಕೆ ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಪೂರ್ಣ ಹಿನ್ನೆಲೆ| ಮರು ವಿಂಗಡಣೆಯಾದ ವಾರ್ಡ್‌ ಮತದಾರರ ಪಟ್ಟಿಗೆ ಸಿದ್ಧತೆ| ಅಧಿಕಾರ ಅವಧಿ ವಿಸ್ತರಣೆ ಕುರಿತು ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದು, ಕಾನೂನಿನಲ್ಲಿ ಅವಕಾಶವಿದ್ದರೆ ಸರ್ಕಾರ ಅಧಿಕಾರ ವಿಸ್ತರಣೆ ಮಾಡಲಿದೆ, ಇಲ್ಲವಾದರೆ ಆಡಳಿತ ಅಧಿಕಾರಿಯನ್ನು ನೇಮಿಸಲಿದೆ: ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌| 

ಬೆಂಗಳೂರು(ಆ.19): ಬಿಬಿಎಂಪಿಯ 198 ವಾರ್ಡ್‌ಗಳ ಮತದಾರ ಪಟ್ಟಿ ಸಿದ್ಧಪಡಿಸುವ ಕಾರ್ಯ ಆ.20ರಿಂದ ಆರಂಭಗೊಳ್ಳಲಿದ್ದು, ನ.30ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.10ಕ್ಕೆ ಬಿಬಿಎಂಪಿ ಹಾಲಿ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮರು ವಿಂಗಡನೆಯಾದ ವಾರ್ಡವಾರು ಮತದಾರ ಪಟ್ಟಿಸಿದ್ಧಪಡಿಸುವ ಸಂಬಂಧ ಸುತ್ತೋಲೆ ಹೊರಡಿಸಿದೆ. ಅಂತಿಮ ಮತದಾರ ಪಟ್ಟಿಪ್ರಕಟಿಸಿದ ನಂತರ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಆ.20ರಿಂದ ಆ.26ರ ವರೆಗೆ ಮತದಾರ ಪಟ್ಟಿಸಿದ್ಧಪಡಿಸುವ ಕುರಿತು ಅಧಿಕಾರಿಗಳಿಗೆ ತರಬೇತಿ, ಆ.26ರಿಂದ ಸೆ.14 ವರೆಗೆ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಪರಿಶೀಲನೆ, ಸೆ.15 ಮತ್ತು ಅ.7ರವರೆಗೆ ಮತದಾರ ಪಟ್ಟಿಮುದ್ರಣ, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆ ನಡೆಯಲಿದೆ. ಅಕ್ಟೋಬರ್‌ 8ರಂದು ವಾರ್ಡ್‌ವಾರು ಮತದಾರ ಪಟ್ಟಿಬಿಡುಗಡೆ ಮಾಡಲಾಗುವುದು. ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಅ.27ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು. ನಂತರ ಪರಿಷ್ಕರಿಸಿ ನ.30ರಂದು ಅಂತಿಮ ಮತದಾರ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.  ಸದ್ಯ 2020ರ ಜನವರಿ ಮತ್ತು ಫೆಬ್ರವರಿಯ ಮತದಾರ ಪಟ್ಟಿಅನುಗುಣವಾಗಿ ಮರು ವಿಂಗಡೆಯಾದ 198 ವಾರ್ಡ್‌ಗಳಿಗೆ ಅನುಸಾರವಾಗಿ ಮತದಾರ ಪಟ್ಟಿಸಿದ್ಧಪಡಿಸಲಾಗುವುದು. ಹೊಸದಾಗಿ ಮತದಾರ ಪಟ್ಟಿಗೆ ಹೆಸರು ನೋಂದಣಿ, ಸ್ಥಳ ಬದಲಾವಣೆ ಹಾಗೂ ಲೋಪ ದೋಷ ಸರಿಪಡಿಸಿಕೊಳ್ಳುವುದಕ್ಕೆ ಮತ್ತು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದಕ್ಕೆ ಚುನಾವಣೆ ಅಧಿಸೂಚನೆ ನಂತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೆ ಅವಕಾಶವಿರಲಿದೆ ಎಂದು ತಿಳಿಸಿದರು.

ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಚಿಂತನೆ

‘ಅಧಿಕಾರ ಅವಧಿ ವಿಸ್ತರಣೆ ಸರ್ಕಾರ ನಿರ್ಧರಿಸುತ್ತದೆ’

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಸೆ.10ಕ್ಕೆ ಪೂರ್ಣಗೊಳ್ಳಲಿರುವುದರಿಂದ ಅವಧಿ ವಿಸ್ತರಣೆ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ. ಇಲ್ಲವಾದರೆ ಸರ್ಕಾರವು ಪಾಲಿಕೆಗೆ ಆಡಳಿತ ಅಧಿಕಾರಿ ನೇಮಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ಅಧಿಕಾರ ಅವಧಿ ವಿಸ್ತರಣೆ ಕುರಿತು ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದು, ಕಾನೂನಿನಲ್ಲಿ ಅವಕಾಶವಿದ್ದರೆ ಸರ್ಕಾರ ಅಧಿಕಾರ ವಿಸ್ತರಣೆ ಮಾಡಲಿದೆ. ಇಲ್ಲವಾದರೆ ಆಡಳಿತ ಅಧಿಕಾರಿಯನ್ನು ನೇಮಿಸಲಿದೆ ಎಂದು ತಿಳಿಸಿದರು.
ಕಳೆದ 2015ರ ಆ.22ರಂದು ಚುನಾವಣೆ ನಡೆಸಲಾಗಿತ್ತು. ಆ.25ರಂದು ಫಲಿತಾಂಶ ಪ್ರಕಟವಾಗಿತ್ತು. ಸೆ.10ರಂದು ಮೇಯರ್‌, ಉಪಮೇಯರ್‌ ಆಯ್ಕೆ ಹಾಗೂ ಸದಸ್ಯರ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗಾಗಿ, ಹಾಲಿ ಕೌನ್ಸಿಲ್‌ ಸದಸ್ಯರು ಸೆ.10ರವರೆಗೆ ಕೌನ್ಸಿಲ್‌ ಸಭೆ ನಡೆಸುವ, ನಿರ್ಣಯ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಾನೂನು ವಿಭಾಗದಿಂದ ಸಲಹೆ ಕೇಳಲಾಗಿದೆ ಎಂದು ಹೇಳಿದರು.
 

click me!