
ಬೆಂಗಳೂರು (ಜ.19): ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' 12ನೇ ಆವೃತ್ತಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ 'ಗಿಲ್ಲಿ' ನಟ (ಶ್ರೀ ನಟರಾಜ್) ಅಭೂತಪೂರ್ವ ವಿಜಯ ಸಾಧಿಸಿದ್ದಾರೆ. ಹಳ್ಳಿಯ ಸೊಗಡನ್ನು ಉಳಿಸಿಕೊಂಡು, ನಿಷ್ಕಲ್ಮಶ ಮನಸ್ಸಿನಿಂದ ಕನ್ನಡಿಗರೆಲ್ಲರ ಮನೆಮಾತಾಗಿದ್ದ ಗಿಲ್ಲಿ ಅವರಿಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ಹರಿದು ಬರುತ್ತಿದೆ.
ಗಿಲ್ಲಿ ನಟನ ಈ ಮಹತ್ತರ ಸಾಧನೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವರು, ಮಂಡ್ಯದ ಮಣ್ಣಿನ ಮಗನ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. 'ಹಳ್ಳಿಯ ರೈತನ ಮಗನಾಗಿ ಹುಟ್ಟಿ, ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ ಮತ್ತು ಹೆಸರು ಬರಲಿ' ಎಂದು ಸಚಿವರು ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಫಿನಾಲೆಯಲ್ಲಿ ಪ್ರಬಲ ಪೈಪೋಟಿ ನೀಡಿದ ಕುಮಾರಿ ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರ ಸಾಧನೆಯನ್ನು ಸಹ ಗುರುತಿಸಿರುವ ಹೆಚ್‌ಡಿ ಕುಮಾರಸ್ವಾಮಿ ಅವರು, ರಕ್ಷಿತಾ ಶೆಟ್ಟಿ ಅವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಇಬ್ಬರೂ ಪ್ರತಿಭೆಗಳು ತಮ್ಮ ಶ್ರಮ ಮತ್ತು ಸಂಯಮದ ಮೂಲಕ ಜನರ ಪ್ರೀತಿಯನ್ನು ಗಳಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಗ್ರಾಮೀಣ ಪ್ರತಿಭೆಯ ಗೆಲುವಿಗೆ ಮಂಡ್ಯ ಮಂದಿ ಸಂಭ್ರಮ
ಮಳವಳ್ಳಿಯ ಸಾಮಾನ್ಯ ರೈತನ ಮಗನಾಗಿ ಬಿಗ್ ಬಾಸ್ ಅಖಾಡಕ್ಕಿಳಿದ ಗಿಲ್ಲಿ ನಟ, ತಮ್ಮ ಮುಗ್ಧತೆಯಿಂದಲೇ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಈಗ ಸ್ವತಃ ಕೇಂದ್ರ ಸಚಿವರೇ ಅಭಿನಂದನೆ ಸಲ್ಲಿಸಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮಂಡ್ಯ ಜಿಲ್ಲೆಯಾದ್ಯಂತ ಗಿಲ್ಲಿ ನಟನ ಗೆಲುವನ್ನು ಹಬ್ಬದಂತೆ ಆಚರಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ