ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ; 14 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!

Published : Oct 30, 2026, 03:35 PM IST
Rain Alert

ಸಾರಾಂಶ

ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದ ಸುಳಿಗಾಳಿಯಿಂದಾಗಿ ನವೆಂಬರ್ 1 ರಿಂದ 5 ರವರೆಗೆ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಎಚ್ಚರಿಸಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದ್ದು, ಬೆಂಗಳೂರಿನಲ್ಲೂ ನವೆಂಬರ್ 2 ರಿಂದ ಮಳೆ ಆರಂಭವಾಗಲಿದೆ.

ಬೆಂಗಳೂರು (ಅ.30): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮಳೆ ಆರ್ಭಟ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ವಾಯುಭಾರ ಕುಸಿತದ ಎಫೆಕ್ಟ್:

ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು (Low Pressure Area) ತೀವ್ರಗೊಂಡು ವಾಯುವ್ಯ ದಿಕ್ಕಿನತ್ತ ಚಲಿಸಲಿದ್ದು, ಅಕ್ಟೋಬರ್ 31 ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿ (Depression) ಮಾರ್ಪಡಲಿದೆ. ನಂತರದ ಎರಡು ದಿನಗಳಲ್ಲಿ ಇದು ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸಲಿದೆ. ಇದರ ಜತೆಗೆ ಅರಬ್ಬಿ ಸಮುದ್ರದಿಂದ ಮಹಾರಾಷ್ಟ್ರ ಕರಾವಳಿಯವರೆಗೂ ಟ್ರಫ್ (ತೇವಾಂಶ ಭರಿತ ಮಾರುತಗಳ ಸಾಲು) ಸೃಷ್ಟಿಯಾಗಿರುವುದರಿಂದ ರಾಜ್ಯದಲ್ಲಿ ವ್ಯಾಪಕ ಮಳೆಗೆ ವಾತಾವರಣ ನಿರ್ಮಾಣವಾಗಿದೆ.

ಎಲ್ಲೆಲ್ಲಿ ಭಾರಿ ಮಳೆ? (ಜಿಲ್ಲಾವಾರು ಮುನ್ಸೂಚನೆ):

1. ಕರಾವಳಿ ಜಿಲ್ಲೆಗಳು (ನವೆಂಬರ್ 3 ರಿಂದ 5):

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನವೆಂಬರ್ 1 ಮತ್ತು 2 ರಂದು ಸಾಧಾರಣ ಮಳೆಯಾಗಲಿದ್ದು, ನವೆಂಬರ್ 3, 4 ಮತ್ತು 5 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ (Heavy Rain) ಸುರಿಯುವ ಸಾಧ್ಯತೆಯಿದೆ.

2. ದಕ್ಷಿಣ ಒಳನಾಡು ಮತ್ತು ಮಲೆನಾಡು (ನವೆಂಬರ್ 2 ರಿಂದ 5):

ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನವೆಂಬರ್ 2 ರಿಂದ 5 ರವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನವೆಂಬರ್ 2 ಮತ್ತು 3 ರಂದು ಗಾಳಿಯೊಂದಿಗೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

3. ಉತ್ತರ ಒಳನಾಡು (ನವೆಂಬರ್ 3 ಮತ್ತು 4):

ಕಲಬುರಗಿ, ಯಾದಗಿರಿ, ರಾಯಚೂರು, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನವೆಂಬರ್ 3 ಮತ್ತು 4 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಎಚ್ಚರಿಕೆ:

ನವೆಂಬರ್ 1 ರಿಂದ 3 ರವರೆಗೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಜೊತೆಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ (Gusty Winds) ಬೀಸುವ ಸಾಧ್ಯತೆ ಇರುವುದರಿಂದ ಕೃಷಿಕರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬೆಂಗಳೂರಿನ ಹವಾಮಾನ ಹೇಗಿರಲಿದೆ?:

ರಾಜಧಾನಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮುಖ್ಯವಾಗಿ ಒಣ ಹವೆ ಇರಲಿದ್ದು, ಮುಂಜಾನೆಯ ವೇಳೆ ಮಂಜು ಮುಸುಕಿದ ವಾತಾವರಣವಿರಲಿದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ. ಆದರೆ, ನವೆಂಬರ್ 2 ರಿಂದ ನಗರದಲ್ಲಿ ಮೋಡಕವಿದ ವಾತಾವರಣದೊಂದಿಗೆ ಮಳೆ ಆರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರದ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿ ನಾಯಕ ರೇಣುಕಾಚಾರ್ಯ ಪುತ್ರನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ, ಹೊನ್ನಾಳಿ ಸೊಸೆ ಯಾರು?
₹14 ಕೋಟಿ ವೆಚ್ಚದಲ್ಲಿ ಪಂಚ ಗ್ಯಾರಂಟಿಗಳ ಅಧ್ಯಯನ: ಸಚಿವ ಸಂಪುಟದಲ್ಲಿ ನಿರ್ಧಾರ, ಭವಿಷ್ಯದಲ್ಲಿ ಪರಿಷ್ಕರಣೆ ಸಾಧ್ಯತೆ