₹14 ಕೋಟಿ ವೆಚ್ಚದಲ್ಲಿ ಪಂಚ ಗ್ಯಾರಂಟಿಗಳ ಅಧ್ಯಯನ: ಸಚಿವ ಸಂಪುಟದಲ್ಲಿ ನಿರ್ಧಾರ, ಭವಿಷ್ಯದಲ್ಲಿ ಪರಿಷ್ಕರಣೆ ಸಾಧ್ಯತೆ

Gowthami K   | Kannada Prabha
Published : Oct 30, 2026, 11:15 AM IST
Karnataka Congress Guarantee Schemes

ಸಾರಾಂಶ

ಪಂಚ ಗ್ಯಾರಂಟಿಗಳ ಮೌಲ್ಯಮಾಪನ ಮಾಡಲು 14 ಕೋಟಿ ರೂ. ವೆಚ್ಚದಲ್ಲಿ 'ಕೆ-ಮಾನಿಟರ್' ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸುಮಾರು 1 ಲಕ್ಷ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ಯೋಜನೆಯ ಉಪಯೋಗ ಹಾಗೂ ಅಗತ್ಯ ಬದಲಾವಣೆಗಳ ಬಗ್ಗೆ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅಗತ್ಯ ಸುಧಾರಣೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಬೆಂಗಳೂರು: ಸರ್ಕಾರದ ಬೊಕ್ಕಸದಿಂದ ವಾರ್ಷಿಕ 1 ಲಕ್ಷ ಕೋಟಿ ರು. ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಗ್ಯಾರಂಟಿ ಸೇರಿದಂತೆ ಎಲ್ಲಾ ಯೋಜನೆ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮೌಲ್ಯಮಾಪನ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬರೋಬ್ಬರಿ 14 ಕೋಟಿ ರು. ವೆಚ್ಚದಲ್ಲಿ ‘ಕೆ-ಮಾನಿಟರ್‌’ ಯೋಜನೆಯಡಿ ಎಲ್ಲಾ ಯೋಜನೆಗಳ ಮೌಲ್ಯಮಾಪನ ನಡೆಸಲಿದ್ದು, ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆಯೇ? ತಲುಪುತ್ತಿದ್ದರೆ ಫಲಾನುಭವಿಗೆ ಅನುಕೂಲ ಆಗುತ್ತಿದೆಯೇ? ಎಂಬ ಬಗ್ಗೆ ಅಧ್ಯಯನ ನಡೆಯಲಿದೆ.

ಬಳಿಕ ಅಧ್ಯಯನ ವರದಿ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮ ಹಾಗೂ ಯೋಜನೆಗಳಲ್ಲಿ ಪರಿಷ್ಕರಣೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಸಚಿವ ಕೃಷ್ಣ ಬೈರೇಗೌಡ, ‘ಗ್ಯಾರಂಟಿಗಳೂ ಸೇರಿದಂತೆ ಸರ್ಕಾರಿ ಯೋಜನೆಗಳು ರಾಜ್ಯದ ಎಷ್ಟು ಫಲಾನುಭವಿಗಳಿಗೆ ತಲುಪಿವೆ? ತಲುಪಿದ್ದರೂ ಅದರಿಂದಾದ ಪ್ರಯೋಜನಗಳು ಏನು? ಅವುಗಳ ಅನುಷ್ಠಾನದಲ್ಲಿ ಏನಾದರೂ ನ್ಯೂನತೆಗಳಿವೆಯೇ? ನಿಜವಾಗಲೂ ಆ ಯೋಜನೆ ಉಪಯೋಗ ಆಗುತ್ತಿದೆಯೇ ಅಥವಾ ಬದಲಾವಣೆ ಆಗಬೇಕೆ? ಎಂಬ ಬಗ್ಗೆ ಮೌಲ್ಯಮಾಪನ ಆಗಲಿದ್ದು, ವರದಿ ಆಧರಿಸಿ ಅಗತ್ಯಬಿದ್ದರೆ ಅವುಗಳ ಬದಲಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಎಷ್ಟು ವರ್ಷ ಎಂದು ಅದೇ ಕಾರ್ಯಕ್ರಮಗಳಿಗೆ ಹಣ ಹಾಕಬೇಕು. ಆ ಯೋಜನೆಗಳಿಂದ ಜನರಿಗೆ ಉಪಯೋಗ ಆಗುತ್ತಿದೆ ಅಥವಾ ಇಲ್ಲ ಎಂಬುದು ಗೊತ್ತಾಗಬೇಕಲ್ಲವೇ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಕ್ಷ ಫಲಾನುಭವಿಗಳ ಅಧ್ಯಯನ:

ಮೌಲ್ಯಮಾಪನದ ವೇಳೆ 1 ಲಕ್ಷ ಫಲಾನುಭವಿಗಳನ್ನು ಭೇಟಿ ಮಾಡಿ 60 ಸಾವಿರ ಫಲಾನುಭವಿಗಳ ಅಭಿಪ್ರಾಯಗಳನ್ನು ಪಡೆಯಲಾಗುವುದು.

‘ಪ್ರಜಾಸೇವೆ ಇಲಾಖೆಯು ಏಜೆನ್ಸಿ ಮೂಲಕ ಈ ಅಧ್ಯಯನ ನಡೆಸಲಿದೆ. ಜನರಿಗೆ ಯಾವ ಯೋಜನೆ ಬಗ್ಗೆ ಒಲವು ಇದೆ ಮತ್ತು ಯಾವುದರ ಬಗ್ಗೆ ಒಲವು ಇಲ್ಲ ಎಂಬುದು ಅಧ್ಯಯನ ವರದಿಯಿಂದ ಗೊತ್ತಾಗುತ್ತದೆ. ಅದನ್ನು ಆಧರಿಸಿ ಸುಧಾರಣೆ ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಅನುಷ್ಠಾನಕ್ಕೂ ಮೌಲ್ಯಮಾಪನಕ್ಕೂ ಸಂಬಂಧ ಇಲ್ಲ:

ಈಗಾಗಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಇದೆ ಅಲ್ಲವೇ ಎಂಬ ಪ್ರಶ್ನೆಗೆ, ‘ಅನುಷ್ಠಾನ ಪ್ರಾಧಿಕಾರಕ್ಕೂ ಮೌಲ್ಯಮಾಪನಕ್ಕೂ ಸಂಬಂಧ ಇಲ್ಲ. ಗ್ಯಾರಂಟಿಗಳು ನಮ್ಮ ಪ್ರಕಾರ ಶೇ. 95-96ರಷ್ಟು ಫಲಾನುಭವಿಗಳಿಗೆ ತಲುಪಿವೆ. ಮೌಲ್ಯಮಾಪನದ ಉದ್ದೇಶ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳು ಎಷ್ಟು ಉಪಯೋಗ ಆಗುತ್ತಿವೆಯೇ ಎಂಬುದನ್ನು ನೋಡುವುದಾಗಿದೆ’ ಎಂದು ಕೃಷ್ಣಬೈರೇಗೌಡ ಹೇಳಿದರು.

ಸರ್ಕಾರ ಮೊದಲೇ ಇದನ್ನು ಮಾಡಬೇಕಿತ್ತಲ್ಲವೇ ಎಂದು ಕೇಳಿದಾಗ, ‘ಈ ಮೊದಲು ಮೃತಪಟ್ಟವರು, ವಾಸ ಇಲ್ಲದವರ ಹೆಸರಿಗೆಲ್ಲ ಯೋಜನೆಗಳು ಹೋಗುತ್ತಿದ್ದವು. ಅಂತಹದ್ದನ್ನು ಗುರುತಿಸಿ ಸರಿಪಡಿಸಲಾಗಿದೆ. ಈಗ ಮೌಲ್ಯಮಾಪನ ಮಾಡುತ್ತಿದ್ದೇವೆ. ಎಲ್ಲ ಯೋಜನೆಗಳಿಗೆ ಕಣ್ಣುಮುಚ್ಚಿಕೊಂಡು ಖರ್ಚು ಮಾಡಿಕೊಂಡು ಇರಲು ಆಗುತ್ತದೆಯೇ?’ ಎಂದು ಮರುಪ್ರಶ್ನಿಸಿದರು.

ಈ ಮೌಲ್ಯಮಾಪನಕ್ಕೆ ಗಡುವು ಹಾಗೂ ಯಾವ್ಯಾವ ಯೋಜನೆಗಳ ಪರಿಶೀಲಿಸಬೇಕು ಎಂಬುದನ್ನು ಕೂಡ ಪ್ರಜಾಸೇವೆ ಇಲಾಖೆಯೇ ನಿಗದಿಪಡಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC, ಪಿಯುಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಜನಗಣತಿ ಇದ್ದರೂ ಮುಂದೂಡಿಕೆ ಇಲ್ಲ!
Karnataka News Live: ಹಾಸನಾಂಬೆ ಲಡ್ಡು ಪ್ರಾಸದ ₹100 ಬೆಲೆ - ಅಧಿಕಾರಿಗಳಿಗೆ ಬೈದು ₹60ಕ್ಕೆ ಇಳಿಸಿದ ಸಚಿವ ಶಿವಲಿಂಗೇಗೌಡ!