Water Projects in Karnataka: ಕೇಂದ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಜಲಾಗ್ರಹ

Published : Apr 06, 2022, 04:34 AM IST
Water Projects in Karnataka: ಕೇಂದ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಜಲಾಗ್ರಹ

ಸಾರಾಂಶ

*   ಮೇಕೆದಾಟು ಜಾರಿಗಾಗಿ ಕೇಂದ್ರಕ್ಕೆ ಸಿಎಂ ಮೊರೆ *   ಡಿಪಿಆರ್‌ಗೆ ಒಪ್ಪಿಗೆ, ಕಳಸಾ ಯೋಜನೆಗೆ ಸಮ್ಮತಿ ಕೋರಿಕೆ *   ಕೇಂದ್ರ ಜಲಶಕ್ತಿ ಸಚಿವರಿಂದ ಸಕಾರಾತ್ಮಕವಾಗಿ ಸ್ಪಂದನೆ  

ನವದೆಹಲಿ(ಏ.06): ರಾಜ್ಯ ರಾಜಧಾನಿ ಬೆಂಗಳೂರು(Bengaluru) ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ(Government of Karnataka) ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಯ(Mekedatu Project) ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ. ಇದೇ ವೇಳೆ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಬೇಕು ಎಂಬ ರಾಜ್ಯದ ಮನವಿಗೂ ಕೇಂದ್ರ ಸಚಿವರಿಂದ ಸಕಾರಾತ್ಮಕವಾಗಿ ಸ್ಪಂದನೆ ದೊರಕಿದೆ.

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್‌ ಎರಡು ಹಂತಗಳಲ್ಲಿ ಪಾದಯಾತ್ರೆ ನಡೆಸಿತ್ತು. ಈ ನಡುವೆ ಯೋಜನೆಗೆ ಸಂಬಂಧಿಸಿ ಎರಡು ರಾಜ್ಯಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ತಿಳಿಸಿದ್ದರು. ಇದು ಪ್ರತಿಪಕ್ಷಗಳಾದ ಕಾಂಗ್ರೆಸ್‌(Congress) ಮತ್ತು ಜೆಡಿಎಸ್‌(JDS) ಕಣ್ಣು ಕೆಂಪಗಾಗಿಸಿತ್ತು. ನಂತರದ ಬೆಳವಣಿಗೆಯಲ್ಲಿ ಕಳೆದ ತಿಂಗಳಷ್ಟೇ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ನಡೆಸಿ ಅಭಿಪ್ರಾಯಗಳನ್ನು ಪಡೆದಿದ್ದರು. ಇದೀಗ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಮೇಕೆದಾಟು ಡಿಪಿಆರ್‌ಗೆ ಒಪ್ಪಿಗೆ ನೀಡುವಂತೆ ಒತ್ತಡ ಹೇರಿದ್ದಾರೆ.

ಮೇಕೆದಾಟು ಅಣೆಕಟ್ಟು ಯೋಜನೆ ವಿರುದ್ಧ ಮೋದಿಗೆ ತಮಿಳುನಾಡು ಸಿಎಂ ದೂರು

ಗಜೇಂದ್ರ ಸಿಂಗ್‌ ಶೆಖಾವತ್‌ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮೇಕೆದಾಟು, ಮಹದಾಯಿ(Mahadayi), ಕೃಷ್ಣಾ(Krishna) ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವೇಳೆ ಮೇಕೆದಾಟು ವಿಚಾರವಾಗಿ ಡಿಪಿಆರ್‌ಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆಯಾಗಿದ್ದು ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಜೊತೆಗೆ ನಾವು ನ್ಯಾಯಸಮ್ಮತವಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಹೆಚ್ಚುವರಿ ನೀರನ್ನು ಬಿಡಲಾಗಿದೆ ಎಂದು ಹೇಳಿದರು.

ಕೃಷ್ಣಾ ಅಧಿಸೂಚನೆಗೆ ಅವಕಾಶ:

ಇನ್ನು ಕೃಷ್ಣಾ ನ್ಯಾಯಾಧಿಕರಣದ ಐ ತೀರ್ಪಿನ ಬಗ್ಗೆ ಕಾನೂನಾತ್ಮಕವಾಗಿ ಅಧಿಸೂಚನೆ ಹೊರಡಿಸಲು ಅವಕಾಶ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ಅಧಿಸೂಚನೆ ಹೊರಡಿಸುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟಿಗೆ ಅಫಿಡವಿಟ್‌ ಸಲ್ಲಿಕೆ ಮಾಡಿದೆ. ಕೃಷ್ಣಾ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದಿದೆ. ಈ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ(Karnataka) ಮತ್ತು ಮಹಾರಾಷ್ಟ್ರದ(Maharashtra) ಇಬ್ಬರು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದರು. ಹೊಸ ನ್ಯಾಯಮೂರ್ತಿಗಳ ನೇಮಕವಾದ ಕೂಡಲೇ ನಮಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ತಿಳಿಸಿದ್ದಾರೆ.

ಇಂದು ನಿರ್ಮಲಾ ಭೇಟಿ:

ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಣಕಾಸು ಇಲಾಖೆಯ ಬಳಿ ಇದ್ದು ಬುಧವಾರ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಇದನ್ನೂ ಒತ್ತಾಯಿಸುವೆ ಎಂದು ತಿಳಿಸಿದರು. ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಈಗಾಗಲೇ ಮನವಿ ಮಾಡಿದ್ದೇವೆ. ಜಲಶಕ್ತಿ ಇಲಾಖೆಯಲ್ಲಿ ಈ ಯೋಜನೆಗೆ ಅನುಮತಿ ದೊರೆತಿದೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ಮೇಲೆ ಸಂಪುಟಕ್ಕೆ ಹೋಗಲಿದೆ. ಬಳಿಕ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ ಎಂದರು.

Kodihalli Chandrashekar: ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ಕೇಂದ್ರ ಸಚಿವ ಶೆಖಾವತ್‌ ಭೇಟಿ ವೇಳೆ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಭಗವಂತ ಖೂಬಾ, ಸಚಿವರಾದ ಗೋವಿಂದ ಕಾರಜೋಳ, ವಿ.ಸುನಿಲ್‌ ಕುಮಾರ್‌, ಮುರುಗೇಶ್‌ ನಿರಾಣಿ, ಸಂಸದ ಪ್ರತಾಪ ಸಿಂಹ, ಶಿವಕುಮಾರ್‌ ಉದಾಸಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಮತ್ತು ಇತರರು ಉಪಸ್ಥಿತರಿದ್ದರು.

ಕೇಂದ್ರ ಇಂಧನ ಸಚಿವರ ಭೇಟಿ ಮಾಡಿದ ಸಿಎಂ

ಕೇಂದ್ರ ಜಲಶಕ್ತಿ ಸಚಿವ ಶೆಖಾವತ್‌ ಭೇಟಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂಧನ ಮಂತ್ರಿಗಳ ಭೇಟಿ ವೇಳೆ ಗ್ರೀನ್‌ ಕಾರಿಡಾರ್‌ಗೆ ಸಂಬಂಧಿಸಿ ಚರ್ಚೆಯಾಯಿತು ಎಂದಷ್ಟೇ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ