
ಬೆಂಗಳೂರು(ಜು.16): ಕರ್ನಾಟಕದ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದು ಭಾರೀ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ ಪರೋಕ್ಷವಾಗಿ ಸರ್ಕಾರ ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತಿದೆ ಅಂತೆಲ್ಲಾ ಆರೋಪ ಕೇಳಿಬಂದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ, ಬೆಳಗಾಗುವುದರೊಳಗೆ ಆದೇಶವನ್ನು ವಾಪಸ್ ಪಡೆದುಕೊಂಡಿದೆ.
ಈ ಮೂಲಕ ಬೊಮ್ಮಾಯಿ ಸರ್ಕಾರ ನಗೆಪಾಟಲಿಗಿಡಾಗಿದೆ. ಇನ್ನೊಂದು ಅಚ್ಚರಿ ಸಂಗತಿ ಏನಂದ್ರೆ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಎಂದು ಹೊರಡಿಸಿದ್ದ ಆದೇಶ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ಬಂದಿಲ್ಲವಂತೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೇ ಒಪ್ಪಿಕೊಂಡಿದ್ದಾರೆ.
ಕಚೇರಿಯಲ್ಲಿ ಚಿತ್ರೀಕರಣ ನಿಷೇಧ ಆದೇಶ ವಾಪಸ್ ಪತ್ರದಲ್ಲಿ ಕನ್ನಡವನ್ನೇ ಕೊಂದ ಅಧಿಕಾರಿಗಳು!
ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ
ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಚಿತ್ರೀಕರಣ ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಿ ನೌಕರರು ಬಹಳ ದಿನದಿಂದ ಹೇಳುತ್ತಿದ್ದರು. ಪಾಪ ಅವರು ಹೇಳುವುದರಲ್ಲೂ ಅರ್ಥವಿದೆ. ಕೆಲವು ಹೆಣ್ಣು ಮಕ್ಕಳದೆಲ್ಲ ಫೋಟೋ ತೆಗೆದು, ತೊಂದರೆಯಾಗಿತ್ತು. ಹೀಗಾಗಿ ಅವರು ನಿಷೇಧ ಆದೇಶ ಮಾಡಿದ್ದರು ಎಂದು ಬೊಮ್ಮಾಯಿ ಸಮಜಾಯಿಷಿ ನೀಡಿದರು.
ಯಾವುದನ್ನು ಮುಚ್ಚಿಡುವಂತ ಪ್ರಶ್ನೆಯೇ ಇಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಮೊದಲು ಇದ್ದ ರೀತಿಯ ನಿಯಮ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ನಿಷೇಧ ಆದೇಶವನ್ನು ವಾಪಾಸ್ ಪಡೆದ ಬಗ್ಗೆ ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿ ಗಮನಕ್ಕೆ ಇರದೇ ಆದೇಶ ಹೇಗೆ ಹೊರಡಿಸಲಾಯ್ತು? ಎನ್ನುವ ಪ್ರಶ್ನೆ ಹಾಗೂ ಚರ್ಚೆಗಳು ಶುರುವಾಗಿದೆ. ಹಾಗಾದ್ರೆ, ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿಯೇ. ಅವರಿಗೆ ಸರ್ಕಾರದ ನಡೆಯುತ್ತಿರುವ ಕಾರ್ಯಚಟುವಟಿಕೆಗಳು ತಿಳಿದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿಸುತ್ತಿದ್ದಾರೆ. ಇನ್ನು ಪ್ರಮುಖವಾಗಿ ಈ ಆದೇಶ ಸಿಎಂ ಗಮನಕ್ಕೆ ಇಲ್ಲ ಅಂದ ಮೇಲೆ.ಅಧಿಕಾರಿಗಳು ಯಾರ ಮಾತು ಕೇಳಿ ಆದೇಶ ಮಾಡಿದ್ದಾರೆ? ಇದರ ಹಿಂದಿರುವ ಕಾಣದ ಕೈ ಯಾವುದು ಎನ್ನುವ ಅನುಮಾನಗಳು ಉದ್ಭವಿಸಿವೆ.
ವಾಪಸ್ ಪಡೆದ ಆದೇಶ ಪ್ರತಿಯಲ್ಲೂ ತಪ್ಪು-ತಪ್ಪು
ಮೊದಲು ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಆದರೆ ಈ ಆದೇಶದಲ್ಲಿ ವಿಪರೀತ ತಪ್ಪುಗಳು ಇದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅದು ಭಾರಿ ಟ್ರೋಲ್ ಆಗತೊಡಗಿದೆ.
ಮೊದಲ ಆದೇಶವನ್ನು ಹಿಂದಕ್ಕೆ ಪಡೆದು ಮಧ್ಯರಾತ್ರಿ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಇದ್ದ 3-4 ವಾಕ್ಯಗಳಲ್ಲಿಯೇ ವಿಪರೀತ ತಪ್ಪುಗಳು ನುಸುಳಿಕೊಂಡಿವೆ. ನಡಾವಳಿಯು ನಡವಳಿ ಆಗಿದ್ದರೆ, ಪ್ರಸ್ತಾವನೆ ಎನ್ನುವ ಬದಲು ಪ್ರಸತ್ತಾವನೆ, ಮೇಲೆ ಬದಲು ಮೇಲೇ, ಭಾಗ ಬದಲು ಬಾಗ, ಕರ್ನಾಟಕ ಬದಲು ಕರ್ನಾಟಾ, ಆಡಳಿತ ಬದಲು ಆಡಳಿದ ಎಂಬೆಲ್ಲಾ ತಪ್ಪುಗಳು ಆಗಿವೆ. ಇದು ಜಾಲತಾಣದಲ್ಲಿ ಭಾರಿ ಟ್ರೋಲ್ ಆದ ಬೆನ್ನಲ್ಲೇ ಬೆಳಗ್ಗೆ ಅದರ ತಿದ್ದುಪಡಿ ಆದೇಶವನ್ನು ಸರ್ಕಾರ ಪುನಃ ಹೊರಡಿಸಿದ್ದು ತಪ್ಪುಗಳನ್ನು ಸರಿಪಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ