Women's Day 'ಮಹಿಳಾ ದಿನ'ದ ವಿಶೇಷ: `ಅಸ್ಮಿತೆ’ ವ್ಯಾಪಾರ ಮೇಳಕ್ಕೆ ಸಿಎಂ ಚಾಲನೆ

By Suvarna NewsFirst Published Mar 7, 2022, 5:49 PM IST
Highlights

* ಮಹಿಳಾ ದಿನ' ಹಿನ್ನೆಲೆ, `ಅಸ್ಮಿತೆ’ ವ್ಯಾಪಾರ ಮೇಳಕ್ಕೆ ಸಿಎಂ ಚಾಲನೆ
* ವಿಧಾನಸೌಧದಲ್ಲಿ `ಅಸ್ಮಿತೆ’ ವ್ಯಾಪಾರ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ
* ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಮೂರು ದಿನಗಳ `ಅಸ್ಮಿತೆ’ ವ್ಯಾಪಾರ ಮೇಳ

ಬೆಂಗಳೂರು, (ಮಾ.08): ಅಂತಾರಾಷ್ಟ್ರೀಯ ಮಹಿಳಾ ದಿನದ (Women's Day) ಹಿನ್ನೆಲೆಯಲ್ಲಿ ಆಯೋಜಿಸಿರುವ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಮೂರು ದಿನಗಳ `ಅಸ್ಮಿತೆ’ ವ್ಯಾಪಾರ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸೋಮವಾರ ಉದ್ಘಾಟಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿರುವ ಈ ಮೇಳವು ಬುಧವಾರದವರೆಗೆ ನಡೆಯಲಿದ್ದು, ಒಟ್ಟು 75 ಮಳಿಗೆಗಳಿಗೆ ಅವಕಾಶ ಕೊಡಲಾಗಿದೆ. ಮೇಳಕ್ಕೆ ಉಚಿತ ಪ್ರವೇಶಾವಕಾಶವಿದೆ.

Latest Videos

International Women's Day 2022: ಮಹಿಳಾ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿ

ಮೇಳದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿರುವ 70ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳಿವೆ. ಇವುಗಳಲ್ಲಿ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳು, ಸೆಣಬು ಮತ್ತು ಬಟ್ಟೆಯ ಚೀಲಗಳು, ಬಾಳೆನಾರಿನ ಉತ್ಪನ್ನಗಳು, ಬಗೆಬಗೆಯ ಬೊಂಬೆಗಳು, ಜೇನುತುಪ್ಪ, ಸಾಂಬಾರ ಪದಾರ್ಥಗಳು, ಲಾವಂಚದ ಉತ್ಪನ್ನಗಳು, ಕೊಲ್ಲಾಪುರಿ ಚಪ್ಪಲಿ, ಲಂಬಾಣಿ ಕಸೂತಿ, ಯೋಗ ಮ್ಯಾಟ್, ಕಂಬಳಿ ಮುಂತಾದವು ಸೇರಿವೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2022 ರ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ವ್ಯಾಪಾರ ಮೇಳಕ್ಕೆ ಮುಖ್ಯಮಂತ್ರಿ ಅವರು ಚಾಲನೆ ನೀಡಿ, ಮೇಳದಲ್ಲಿ ಭಾಗಿಯಾದ ಮಳಿಗೆಗಳಿಗೆ ಭೇಟಿನೀಡಿ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಪರಿಶೀಲಿಸಿ ಅವರಿಗೆ ಶುಭಕೋರಿದರು.
1/2 pic.twitter.com/yYEr01CJ8u

— CM of Karnataka (@CMofKarnataka)

ಜತೆಯಲ್ಲಿ ಜೀವನೋಪಾಯ ಸಂವರ್ಧನೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸರ್ಕಾರದ ಮನನ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜೀವನೋಪಾಯ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಮಂಜುಶ್ರೀ ಈ ಸಂದರ್ಭದಲ್ಲಿ ಇದ್ದರು.

ಕಳೆದ ವರ್ಷ ಬೆಳಗಾವಿಯಲ್ಲಿ ಏರ್ಪಡಿಸಿದ್ದ (ಡಿ.15ರಿಂದ 20ರವರೆಗೆ) ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಅಸ್ಮಿತೆ’ಯಲ್ಲಿ ದಾಖಲೆಯ ಸುಮಾರು 60 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ.

ಸೆಣಬಿನ ಬ್ಯಾಗುಗಳನ್ನು ಮಾಡುವ ವಿಜಯಪುರ ಎನ್.ಆರ್.ಎಲ್.ಎಂ.ನ ಯಶೋಧಾ ಸ್ವಸಹಾಯ ಗುಂಪು ಎಲ್ಲಕ್ಕಿಂತ ಹೆಚ್ಚು ರೂ. 1,26,900 ವ್ಯಾಪಾರ ನಡೆಸಿದ್ದವು. ನಂತರದ ಸ್ಥಾನದಲ್ಲಿ, ಕಾಟನ್ ಬ್ಯಾಗುಗಳು ಮತ್ತು ಕ್ವಿಲ್ಟ್ ಗಳನ್ನು ಮಾಡುವ ಬೆಳಗಾವಿಯ ಮಾತಾ ಸಾವಿತ್ರಿ ಬಾಯಿ ಸ್ವಸಹಾಯ ಸಂಘ ರೂ 1,19,558, ವುಡ್ ಇನ್ ಲೇಗಳನ್ನು ಮಾಡುವ ಮೈಸೂರಿನ ಚಾಮುಂಡೇಶ್ವರಿ ಸ್ವಸಹಾಯ ಸಂಘ ರೂ 1,13,830, ಇಳಕಲ್ ಸೀರೆಗಳನ್ನು ಮಾಡುವ ಶ್ರೀ ರೇವಣ್ಣಸಿದ್ದೇಶ್ವರ ಸ್ವಸಹಾಯ ಸಂಘ ರೂ 1,00,026 ಹಾಗೂ ಆಭರಣ ಮತ್ತು ಪೇಟಿಂಗ್ ಗಳನ್ನು ಮಾಡುವ ಬೆಳಗಾವಿಯ ಜನವಾಣಿ ಮಾತಾ ಸ್ವಸಹಾಯ ಸಂಘವು ರೂ 87,420 ಮೊತ್ತದ ವ್ಯಾಪಾರಗಳನ್ನು ಮಾಡಿದ್ದವು.

ರಾಜ್ಯ ಜೀವನೋಪಾಯ ಅಭಿಯಾನ (ನಗರ ಮತ್ತು ಗ್ರಾಮೀಣ), ಕೌಶಲಾಭಿವೃದ್ಧಿ- ಉದ್ಯಮಶೀಲತೆ – ಜೀವನೋಪಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಮೇಳವನ್ನು ನಡೆಸಲಾಗಿತ್ತು. ಬೇಕರಿ ಹಾಗೂ ಇತರೆ ಲಘು ತಿನಿಸುಗಳು, ಬಗೆಬಗೆಯ ಉಪ್ಪಿನಕಾಯಿಗಳು, ಹೈನು ತಿನಿಸುಗಳು, ಮಸಾಲೆ ಪದಾರ್ಥಗಳು, ಉಡುಪುಗಳು, ಸೀರೆಗಳು, ವಿವಿಧ ರೀತಿಯ ಹಾರಗಳು, ಚರ್ಮ ಹಾಗೂ ಕೂದಲು ಆರೈಕೆ ಉತ್ಪನ್ನಗಳು, ಸ್ಯಾನಿಟೇಷನ್ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳು ಹಾಗೂ ಕೈಕುಸುರಿ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು.

ಇಂಡಿಯಾ ನ್ಯಾನೋ ಸಮಾವೇಶಕ್ಕೆ ಚಾಲನೆ
ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ನ್ಯಾನೋ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ 12ನೇ ವರ್ಷದ ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ'ವನ್ನು ಸೋಮವಾರ ಉದ್ಘಾಟಿಸಿ, ಅವರು ಮಾತನಾಡಿದರು. ಈ ಸಮಾವೇಶವು ಬುಧವಾರದವರೆಗೆ ನಡೆಯಲಿದೆ.

ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿ.ವಿ.ಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಬಂದಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿಕರ ಅವಿಭಾಜ್ಯ ಅಂಗವಾಗಲಿದ್ದು, ನ್ಯಾನೋ ತಂತ್ರಜ್ಞಾನವು ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಜನಜೀವನವನ್ನು ಸುಧಾರಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸೂ ಆಗಿದೆ' ಎಂದು ಅವರು ನುಡಿದರು.

click me!