* ಪಂಚಮಸಾಲಿಗಳ 2 A ಮೀಸಲಾತಿ ಹೋರಾಟಕ್ಕೆ 2 ತಿಂಗಳ ಬ್ರೇಕ್....!
* ಸಿಎಂ ಭರವಸೆಗೆ ಓಕೆ ಎಂದ ಮೀಸಲಾತಿ ಹೋರಾಟಗಾರರು..
* ಅಗಸ್ಟ್ 22 ರವರೆಗೆ ಕಾದು ನೋಡಲು ರೆಡಿಯಾದ ಪಂಚಮಸಾಲಿಗಳು..
ಬೆಂಗಳೂರು, (ಜೂನ್.22): ರಾಜ್ಯ ಸರ್ಕಾರಕ್ಕೆ ಬಿಸಿತುಪ್ಪದಂತಾಗಿರುವ ಪಂಚಮಸಾಲಿಗಳ ಮೀಸಲಾತಿ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಲು ವಿಳಂಬವಾಗುತ್ತಿದೆ ಅನ್ನೋ ಕಾರಣಕ್ಕೆ ಸಿಟ್ಟಾಗಿರುವ ಪಂಚಮಸಾಲಿ ಸಮೂದಾಯದವರು ಹೋರಾಟವನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶಿಗ್ಗಾಂವ್ ನಲ್ಲಿರುವ ಬೊಮ್ಮಾಯಿ ನಿವಾಸದ ಮುಂದೆ ಹೋರಾಟ ನಡೆಸಲು ಮುಂದಾಗಿದ್ದರಿಂದ ಎಚ್ಚೆತ್ತುಕೊಂಡ ಸಿಎಂ ಬೊಮ್ಮಾಯಿ ಹೋರಾಟಗಾರರನ್ನು ಒಂದಷ್ಟು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ನಿವಾಸದ ಮುಂದೆ ಹೋರಾಟಗಾರರ ಧರಣಿ ನಡೆಯೋದು ಖಚಿತವಾಗ್ತಾ ಇದ್ದ ಹಾಗೆ ಸಂಧಾನ ಸೂತ್ರವೊಂದನ್ನು ಸಿಎಂ ಸಿದ್ಧಪಡಿಸಿದ್ರು. ತಮ್ಮ ಸಂಪುಟದ ಹಿರಿಯ ಸಹದ್ಯೋಗಿ ಸಿ.ಸಿ.ಪಾಟೀಲ್ ಅವರನ್ನು ಕರೆದು ಸಂಧಾನ ಸಭೆ ಮಾಡಲು ಸೂಚನೆ ನೀಡಿದ್ರು. ಸಿಎಂ ಸೂಚನೆಯಂತೆ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ಸಚಿವರ ಸರ್ಕಾರಿ ನಿವಾಸದಲ್ಲಿ ಸಂಧಾನ ಸಭೆ ಕರೆಯಲಾಗಿತ್ತು.. ಸಭೆಗೆ ಹಾಜರಾಗಿದ್ದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಸಮೂದಾಯದ ಮುಖಂಡರು ಮೀಸಲಾತಿ ಸಂಬಂಧ ಸರ್ಕಾರದಿಂದ ಸೂಕ್ತ ಭರವಸೆಗಾಗಿ ಪಟ್ಟು ಹಿಡಿದ್ರು. ಆದರೆ ಸಿಎಂ ಮನೆ ಮುಂದಿನ ಧರಣಿಯನ್ನು ಕೈಬಿಟ್ಟು ಮಾತುಕತೆಗೆ ಬರುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದರಿಂದ ಸಭೆಯನ್ನು ಮುಂದೂಡಲಾಯ್ತು..
ಪಂಚಮಸಾಲಿ ಮೀಸಲಾತಿ: 2 ಎ ಮೀಸಲಾತಿಯಿಂದ ಸರ್ಕಾರಕ್ಕೇನು ಸಮಸ್ಯೆ.?
ಸಭೆ ಮುಂದೂಡಿದ ಬಳಿಕ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಚಿವ ಸಿ.ಸಿ.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸಹಿತ ಪ್ರಮುಖ ನಾಯಕರು, ಧರಣಿ ಕೈಬಿಡಲು ನಿರಾಕರಿಸಿದ ವಿಚಾರ ತಿಳಿಸಿದ್ರು. ಆದ್ರೆ ಸಮಸ್ಯೆ ಬಗೆಹರಿಸಲು 2 ತಿಂಗಳ ಕಾಲಾವಕಾಶ ನೀಡಲು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದರಿಂದ ಅನಿವಾರ್ಯವಾಗಿ ಧರಣಿ ಮುಂದೂಡಲು ತಿರ್ಮಾನಿಸಲಾಯ್ತು..
ನಂತರ ನಡೆದ ಎರಡನೇಯ ಸುತ್ತಿನ ಸಭೆಯಲ್ಲಿ ಧರಣಿಯನ್ನು ಅಗಸ್ಟ್ 22 ರವರೆಗೆ ಕೈಬಿಡಲು ತಿರ್ಮಾನ ಮಾಡಲಾಯ್ತು. ಒಂದೊಮ್ಮೆ ಸಿಎಂ ಮಾತಿನಂತೆ 2 ತಿಂಗಳಲ್ಲಿ ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರದಿದ್ದರೆ, ಅಗಸ್ಟ್ 23 ರಿಂದ ಹೋರಾಟ ಆರಂಭಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಪಂಚಮಸಾಲಿ ಮೀಸಲಾತಿ ಕಿಚ್ಚು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗುತ್ತಾ ಬಿಜೆಪಿ.?
ಎರಡು ತಿಂಗಳ ಅವಧಿಯೊಳಗೆ ಹಿಂದುಳಿದ ವರ್ಗಗಳ ಆಯೋಗವು ಪಂಚಮಸಾಲಿಗಳ ಸರ್ವೇ ನಡೆಸಬೇಕು. ಶೀಘ್ರವೇ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಅನ್ನೋ ಬೇಡಿಕೆಯನ್ನು ಪಂಚಮಸಾಲಿಗಳ ಸಮೂದಾಯದ ನಾಯಕರು ಆಗ್ರಹಿಸಿದ್ದಾರೆ. ಒಂದೊಮ್ಮೆ ಬೇಡಿಕೆ ಈಡೇರದಿದ್ದರೆ, ಮತ್ತೊಂದು ಸುತ್ತಿನ ಹೋರಾಟಕ್ಕೂ ಕರೆ ನೀಡಲಾಗಿದೆ. ಒಟ್ಟಿನಲ್ಲಿ ಬಿಸೋ ದೊಣ್ಣೆಯಿಂದ ಸದ್ಯಕ್ಕೆ ಸರ್ಕಾರ ಬಚಾವ್ ಆದಂತಾಗಿದೆ. ಈ ಮೂಲಕ ಪಂಚಮಸಾಲಿಗಳ ಮೀಸಲಾತಿ ಹೋರಾಟಕ್ಕೂ 2 ತಿಂಗಳು ಬ್ರೇಕ್ ಬಿದ್ದಂತಾಗಿದೆ.