
ಬೆಂಗಳೂರು (ನ.22): ತೀವ್ರ ವಿವಾದಕ್ಕೆ ಗುರಿಯಾಗಿರುವ 'ಬಸವಮಂಟಪ' ಕೃತಿಯ ಲೇಖಕ ರವಿ ಹಂಜಗಿಮಠ್ (ರವಿ ಹಂಜ್) ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಾನೂನನ್ನು ದುರುಪಯೋಗಪಡಿಸಿಕೊಂಡು ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನಾನು ಕಟ್ಟಾ ವೀರಶೈವ ಲಿಂಗಾಯತ: ತಾನು ಕಟ್ಟಾ ವೀರಶೈವ ಲಿಂಗಾಯತನಾಗಿದ್ದು, ಬಸವಣ್ಣನವರ ಅನುಯಾಯಿಯಾಗಿದ್ದೇನೆ. ಬಿ.ಎಲ್. ರೈಸ್ ಅವರ 'ಮೈಸೂರು ಗೆಜೆಟೀಯರ್' ಆಧರಿಸಿ ಲೇಖನ ಬರೆದಿದ್ದೇನೆಯೇ ಹೊರತು ಯಾವುದೇ ಅಪರಾಧದ ಅಂಶಗಳಿಲ್ಲ. ಹೀಗಾಗಿ ಎಫ್‌ಐಆರ್ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ವೈಯಕ್ತಿಕ ದ್ವೇಷದ ದೂರು: ಬಸವ ಸಮಿತಿಯ ಅಕ್ರಮಗಳ ವಿರುದ್ಧ ತಾನು ಲೇಖನ ಬರೆದಿದ್ದೆ. ಆ ವೈಯಕ್ತಿಕ ದ್ವೇಷದಿಂದಾಗಿ ಅರವಿಂದ ಜತ್ತಿ ಅವರು ತಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪೊಲೀಸರ ಮೇಲೆ ಒತ್ತಡ: ಮುಖ್ಯಮಂತ್ರಿ ಹಾಗೂ ಸಚಿವರ ಹೇಳಿಕೆಗಳಿಂದಾಗಿ ಪೊಲೀಸರ ಮೇಲೆ ತೀವ್ರ ಒತ್ತಡವಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರಿಂದ ನ್ಯಾಯಸಮ್ಮತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ರವಿ ಹಂಜಗಿಮಠ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇದಕ್ಕೂ ಮುನ್ನ ನಿನ್ನೆ 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದ ರವಿ ಹಂಜ್, ರಾಜ್ಯ ಸರ್ಕಾರ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. "ನನ್ನ ಪುಸ್ತಕ ಮುಟ್ಟುಗೋಲಿಗೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ ಅಷ್ಟೇ, ಕಾನೂನಾತ್ಮಕವಾಗಿ ಇನ್ನೂ ನಿಷೇಧವಾಗಿಲ್ಲ. ಈಗಾಗಲೇ ಪುಸ್ತಕದ ಎಲ್ಲಾ ಪ್ರತಿಗಳು ಸೋಲ್ಡ್ ಔಟ್ ಆಗಿವೆ. ಒಂದೊಮ್ಮೆ ಮುಟ್ಟುಗೋಲು ಹಾಕಿದರೆ ಕೋರ್ಟ್‌ನಲ್ಲಿ ಹೋರಾಡಿ ಗೆಲ್ಲುತ್ತೇನೆ" ಎಂದಿದ್ದರು. ಅಲ್ಲದೆ, "ನಾನು ಬಸವಣ್ಣನವರನ್ನು ಅವಹೇಳನ ಮಾಡಿಲ್ಲ; ಹರಿಹರನ 'ಬಸವರಾಜ ದೇವರ ರಗಳೆ' ಹಾಗೂ ಪಾಲ್ಕುರಿಕೆ ಸೋಮನಾಥನ 'ಬಸವ ಪುರಾಣ'ದಲ್ಲಿರುವ ಅಂಶಗಳನ್ನೇ ಬರೆದಿದ್ದೇನೆ.
ಸರ್ಕಾರ ಕ್ರಮ ಕೈಗೊಳ್ಳುವುದಾದರೆ ಈ ಕೃತಿಗಳನ್ನೂ, ಪ್ರೊ. ಎಂ.ಎಂ. ಕಲ್ಬುರ್ಗಿ ಅವರ ಸಂಪಾದಿತ ಕೃತಿಗಳನ್ನೂ ಬ್ಯಾನ್ ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದವರನ್ನು ಹಾಗೂ ಬಸವಣ್ಣನವರನ್ನು ಕಾರ್ಲ್ ಮಾರ್ಕ್ಸ್‌ಗೆ ಹೋಲಿಸಿದವರನ್ನು ನಾನು 'ಲಿಂಗಾಹತಿಗಳು' ಎಂದಿದ್ದೇನೆಯೇ ಹೊರತು ಇಡೀ ಲಿಂಗಾಯತರನ್ನು ನಿಂದಿಸಿಲ್ಲ. ವೋಟ್ ಬ್ಯಾಂಕ್‌ಗಾಗಿ ರಾಜಕಾರಣಿಗಳು ನನ್ನ ಕೃತಿಯ ಒಂದು ಹಾಳೆಯನ್ನೂ ಓದದೆ ತರಾತುರಿಯಲ್ಲಿ ನಿಷೇಧದ ನಿರ್ಧಾರ ಕೈಗೊಂಡಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದರು.
ತಮ್ಮ ಮೇಲಿನ ಬೆದರಿಕೆ ಹಾಗೂ ವಿಮಾನ ನಿಲ್ದಾಣದ ಘಟನೆ ಬಗ್ಗೆಯೂ ಸ್ಪಷ್ಟನೆ ನೀಡಿದ್ದ ರವಿ ಹಂಜ್, "ನನ್ನ ವಿರುದ್ಧ ₹5 ಲಕ್ಷಕ್ಕೆ ಫತ್ವಾ ಹೊರಡಿಸಿದ್ದಾರೆ, ಆದರೆ ಸಿಎಂ ಆಗಲಿ, ಗೃಹ ಸಚಿವರಾಗಲಿ ಫತ್ವಾ ಹೊರಡಿಸಿದವರನ್ನು ಬಂಧಿಸಿ ಎಂದು ಹೇಳಿಲ್ಲ. ಬೆದರಿಕೆ ಕರೆಗಳು ಬಂದಿದ್ದರಿಂದ ಆತ್ಮರಕ್ಷಣೆಗಾಗಿ ಅಮೆರಿಕಕ್ಕೆ ಹೋಗಿದ್ದೇನೆ ಎಂದು ಸುಳ್ಳು ಹೇಳಿದ್ದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಇದ್ದಿದ್ದರಿಂದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ನಾಲ್ಕು ದಿನ ದುಬೈಗೆ ತೆರಳಲು ಮುಂದಾಗಿದ್ದೆ ಎಂದು ತಿಳಿಸಿದರು.
ಏರ್‌ಪೋರ್ಟ್‌ನಲ್ಲಿ ಡಿಟೈನ್ ಮಾಡಿದ ತಕ್ಷಣ ಅಮೆರಿಕನ್ ಎಂಬಸಿ ನನ್ನ ನೆರವಿಗೆ ಬಂದು, ಗೌರವಪೂರ್ವಕವಾಗಿ ಚೆನ್ನೈಗೆ ಕರೆದೊಯ್ದು ಸುರಕ್ಷಿತವಾಗಿ ಇರಿಸಿದೆ. ಅಮೆರಿಕನ್ ಕಾನ್ಸುಲೇಟ್ ಕೇಂದ್ರ ಗೃಹ ಇಲಾಖೆಯ ಸಂಪರ್ಕದಲ್ಲಿದ್ದು, ರೆಡ್ ಅಲರ್ಟ್ ಮತ್ತು ಎಲ್‌ಓಸಿ (LOC) ತೆರವಿನ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕರ್ನಾಟಕ ಸರ್ಕಾರ ನಿಷ್ಕ್ರಿಯವಾಗಿದ್ದು, ನನಗೆ ಸೂಕ್ತ ಭದ್ರತೆ ಒದಗಿಸಿ, ಫತ್ವಾ ಹೊರಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಾನು ಕರ್ನಾಟಕಕ್ಕೆ ಬರುವುದಿಲ್ಲ ಮತ್ತು ವಿಚಾರಣೆಗೆ ಹಾಜರಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ