ಕೊರೋನಾ ನೆಗೆಟಿವ್‌ ವರದಿ ಇದ್ದರೂ ಆಸ್ಪತ್ರೆಯಲ್ಲಿ ಪಾಸಿಟಿವ್‌ ಟ್ರೀಟ್ಮೆಂಟ್‌!

By Kannadaprabha News  |  First Published Aug 8, 2020, 9:00 AM IST

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲು| ಬಿಬಿಎಂಪಿ ವರದಿಯಲ್ಲಿ ನೆಗೆಟಿವ್‌| ಪಾಸಿಟಿವ್‌ ಇದೆ ಎಂದು ಚಿಕಿತ್ಸೆ ನೀಡಿದ ಬ್ಯಾಪ್ಟಿಸ್ಟ್‌ ಆಸ್ಪತ್ರೆ|  ಚಿಕಿತ್ಸೆಗಾಗಿ 4 ಲಕ್ಷ ಶುಲ್ಕ|


ಬೆಂಗಳೂರು(ಆ.08):  ಬಿಬಿಎಂಪಿ ಆಸ್ಪತ್ರೆಯಲ್ಲಿ ಕೊರೋನಾ ನೆಗೆಟಿವ್‌ ವರದಿ ಬಂದಿದ್ದರೂ ಸೋಂಕು ತಗುಲಿರುವುದಾಗಿ ಹೇಳಿ ಚಿಕಿತ್ಸೆಗಾಗಿ ಸುಮಾರು 2.5 ಲಕ್ಷಗಳನ್ನು ಪಡೆದಿದ್ದಲ್ಲದೇ ಮತ್ತೆ 1.5 ಲಕ್ಷ ಪಾವತಿಸುವಂತೆ ಬೇಡಿಕೆ ಇಟ್ಟಿರುವ ಘಟನೆ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ನಡೆದಿದೆ.

ಗುಟ್ಟಹಳ್ಳಿಯ ಸುಮಾರು 52 ವರ್ಷದ ವ್ಯಕ್ತಿಗೆ ಜುಲೈ 16ರಂದು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬಿಬಿಎಂಪಿ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಎಂದು ವರದಿ ನೀಡಲಾಗಿತ್ತು. ಜುಲೈ 21ರಂದು ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಂದೇ ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಿದ್ದರು.

Tap to resize

Latest Videos

ಸೆರಂನಿಂದ 10 ಕೋಟಿ ಅಗ್ಗದ ಲಸಿಕೆ!

ಎಕ್ಸರೇ ತೆಗೆದಿದ್ದ ವೈದ್ಯರು, ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ತಿಳಿಸಿ ನಾಲ್ಕು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದರು. ಬಳಿಕ ಜುಲೈ 25ರಂದು ಕೊರೋನಾ ಪರೀಕ್ಷೆಗೆ ಸ್ವಾಬ್‌ ಪಡೆದಿದ್ದ ವೈದ್ಯರು ಪಾಸಿಟಿವ್‌ ಎಂದು ಮಾಹಿತಿ ನೀಡಿದ್ದರು. ಆದರೆ ವರದಿಯ ಪ್ರತಿ ನೀಡಿರಲಿಲ್ಲ. ಆದರೆ, ಬಿಬಿಎಂಪಿಯಿಂದ ಕೊರೋನಾ ನೆಗೆಟಿವ್‌ ಎಂದು ಸಂಬಂಧಿಕರ ಫೋನ್‌ಗೆ ಸಂದೇಶ ಬಂದಿದೆ. ಆದರೂ, ಆಸ್ಪತ್ರೆ ಸಿಬ್ಬಂದಿ ಕೊರೋನಾ ಸೋಂಕು ದೃಢ ಪಟ್ಟಿದೆ ಎಂದು ತಿಳಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ. ಕೊರೋನಾ ಸೋಂಕು ಇಲ್ಲ ಎಂದರೂ ಚಿಕಿತ್ಸೆ ನೀಡಲು ಕೊರೋನಾ ವಾರ್ಡ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ. ಜೊತೆಗೆ, ಪಾಸಿಟಿವ್‌ ಎಂಬುದಾಗಿ ವರದಿ ನೀಡಿದ್ದಾರೆ ಎಂದು ಸೋಂಕಿತರ ಪುತ್ರಿ ಆರೋಪಿಸಿದ್ದಾರೆ.

ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ನೀಡಿರುವ ವರದಿಯನ್ನು ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಪರಿಶೀಲನೆಗೆ ಒಳಪಡಿಸಿದ್ದು, ಕೊರೋನಾ ಸೋಂಕು ತಗುಲಿಲ್ಲ, ಈ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಬೇಸತ್ತಿರುವ ಸೋಂಕಿತರ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರುವುದಕ್ಕೆ ಮುಂದಾಗಿದ್ದಾರೆ.

2.5 ಲಕ್ಷ ಪಾವತಿ:

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ 1 ಲಕ್ಷಗಳನ್ನು ಪಾವತಿ ಮಾಡಲಾಗಿದೆ. ಚಿಕಿತ್ಸೆಗಾಗಿ ಒಟ್ಟು 4 ಲಕ್ಷವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಟ್ಟು 2.5 ಲಕ್ಷ ಪಾವತಿಸಲಾಗಿದೆ. ಜೊತೆಗೆ ಬಾಕಿ 1.5 ಲಕ್ಷಗಳನ್ನು ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮಲ್ಲಿ ಅಷ್ಟುಹಣ ಇಲ್ಲ. ಆದ್ದರಿಂದ ಹಣ ಪಾವತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸೋಂಕಿತರ ಪುತ್ರಿ ‘ಕನ್ನಡ ಪ್ರಭ’ಕ್ಕೆ ಮಾಹಿತಿ ನೀಡಿದರು.
 

click me!