
ಬಳ್ಳಾರಿ: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯನ್ನು ಬಿಜೆಪಿ ನಾಯಕರು ವಿರೋಧಿಸಲು ಆರಂಭಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ, ಇದು ಧಾರ್ಮಿಕ ಆಚರಣೆಯೇ ಹೊರತು ಜಾತ್ಯಾತೀತ ಕಾರ್ಯಕ್ರಮ ಅಲ್ಲ ಎಂದಿದ್ದರು. ಇದೀಗ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್ ಲಾಡ್, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಅಹ್ವಾನಿಸಬಾರದೆಂದು ಸಂವಿಧಾನದಲ್ಲಿ ಇದೆಯಾ? ಎಲ್ಲದಕ್ಕೂ ವಿರೋಧ ಮಾಡ್ತಾ ಹೋದ್ರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದರು. ದೇಶದಲ್ಲಿ ಅತಿಹೆಚ್ಚು ದಾನ ಮಾಡುವ ದಾನಿ ಯಾರು ಎಂದು ಪ್ರಶ್ನಿಸಿದ ಸಂತೋಷ್ ಲಾಡ್, ಅಜೀಂ ಪ್ರೇಮ್ ಜೀ ಫೌಂಡೇಶನ್‌ನಿಂದ ಎರಡೂವರೆ ಲಕ್ಷ ಕೋಟಿ ರೂ. ಹಣ ದಾನ ನೀಡಲಾಗಿದೆ. ಹಾಗಾದ್ರೆ ಈ ದಾನ ನೀಡಿದವರು ಯಾವ ಸಮಾಜದವರು ಎಂದು ಬಿಜೆಪಿ ನಾಯಕರನ್ನು ಸಚಿವರು ಪ್ರಶ್ನೆ ಮಾಡಿದರು.
ಉಚಿತವಾಗಿ ಬಡವರಿಗೆ ಅನುಕೂಲಕ್ಕೆ ಹಣ ಕೊಟ್ಟವರು ಯಾವ ಸಮಾಜದವರು? ಸಂವಿಧಾನದಲ್ಲಿ ಯಾರು ಮಾಡಬಾರದು ಎಂದಿಲ್ಲ ಸರ್ಕಾರದ ತೀರ್ಮಾನ ಎಲ್ಲರೂ ಸ್ವಾಗತ ಮಾಡಬೇಕು. ಈ ರೀತಿಯಲ್ಲಿ ಮಾಡೋದು ಸರಿಯಲ್ಲ. ಅಬ್ದುಲ್ ಕಾಲಂ ರಾಷ್ಡಪತಿಯಾಗಿದ್ರು ನಾವು ವಿರೋಧ ಮಾಡಿದ್ವಾ? ಕಲಾಂ ಹಿಂದು ವಿರೋಧಿಯಲ್ಲ ಎಂದು ಸಮರ್ಥನೆ ಮಾಡ್ತಾರೆ. ಹಾಗಾದ್ರೆ ಬಾನು ಮುಷ್ತಾಕ್ ಹಿಂದೂ ವಿರೋಧಿನಾ ಎಂದು ಬಿಜೆಪಿಯವರನ್ನು ಸಂತೋಷ್ ಲಾಡ್ ಪ್ರಶ್ನಿಸಿದರು.
ಪಾಕಿಸ್ತಾನ ಕೇಕ್ ತಿನ್ನೋಕ್ಕೆ ಯಾಕೆ ಹೋಗ್ತೀರಾ? ವಿಧಾನಸೌಧದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ್ದು ಉಪಮುಖ್ಯಮಂತ್ರಿಗಳ ವೈಯಕ್ತಿಕ ವಿಚಾರ ಎಂದು ಆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಪ್ರದರ್ಶನ ಮಾಡ್ತಿದೆ. ಮೊದಲು ಎಸ್ಐಟಿ ಸ್ವಾಗತ ಎಂದ್ರು ಈಗ ಧಾರ್ಮಿಕ ಸ್ಥಳಕ್ಕೆ ಅಪಮಾನ ಎನ್ನುತ್ತಿದ್ದಾರೆ. ಎಸ್ಐಟಿ ಮಾಡಿದಾಗ ಆತಂಕವಿತ್ತು. ಒಂದಷ್ಟು ಅನುಮಾನದಿಂದಲೇ ನೋಡುವಂತಿತ್ತು. ಕಾನೂನಾತ್ಮಕವಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಕಳೇಬರ ಸಿಗದಿದ್ದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಬಿಜೆಪಿ ಮಾಡ್ತಿದೆ. ಒಂದು ವೇಳೆ ಹೆಣಗಳು ಸಿಕ್ಕಿದ್ರೆ ಬಿಜೆಪಿ ಏನು ಮಾಡುತ್ತಿತ್ತು? ಮೊದಲೇ ಎಸ್‌ಐಟಿ ರಚನೆಯನ್ನು ಬಿಜೆಪಿ ವಿರೋಧ ಮಾಡಬೇಕಿತ್ತು. ಅಲ್ಲಿ ಯಾವುದೇ ಕಳೇಬರ ಸಿಗದಿದ್ದಾಗ ಬಿಜೆಪಿ ರಾಜಕೀಯ ಮಾಡಲು ಮುಂದಾಗಿದೆ ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಷಡ್ಯಂತ್ರ ಇರೋದಕ್ಕೆ ತನಿಖೆ ಮಾಡಲಾಯಿತು. ನಮ್ಮ ತನಿಖೆಯಂದ ಧರ್ಮಸ್ಥಳಕ್ಕೆ ಒಳ್ಳೆಯ ಹೆಸರು ಬಂತು. ಕೋರ್ಟ್ ಕೂಡ ತನಿಖೆ ಮಾಡಲು ಸೂಚನೆ ನೀಡಿತ್ತು. ಸ್ಥಳೀಯ ಪೊಲೀಸರಿಗೆ ತನಿಖೆ ನೀಡಿದ್ರೆ ಒಳ್ಳೆಯದಲ್ಲ ಎಂದು ಎಸ್ಐಟಿಗೆ ನೀಡಲಾಗಿದೆ. ಈಗ ಬಿಜೆಪಿಯವರು ಪ್ರಕರಣವನ್ನ ಸಿಬಿಐಗೆ ನೀಡಿ ಅಂತಾರೆ. ಎಸ್ಐಟಿ ವಿಚಾರಣೆಯಲ್ಲಿ ಎಲ್ಲಾರೂ ಸಿಕ್ತಾರೆ. ಕಾನೂನು ಕ್ರಮ ಖಂಡಿತವಾಗಿ ಆಗುತ್ತದೆ. ಸೋಶಿಯಲ್ ಮೀಡಿಯಾದ ಅಪಪ್ರಚಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಸರ್ಕಾರದ ಪರವಾಗಿದ್ದೇನೆ ಎಂದು ಸಂತೋಷ್ ಲಾಡ್ ಹೇಳಿದರು.
ಸಂಡೂರಿನಲ್ಲಿ ನುಲಿಯ ಚಂದಯ್ಯನವರ 918ನೇ ಜಯಂತಿಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಂತೋಷ್ ಲಾಡ್, ಅಖಿಲ ಕರ್ನಾಟಕ ಕುಳುವ ಮಹಾಸಂಘವತಿಯಿಂದ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಅಲೆಮಾರಿ ಜನಾಂಗದವರು ಪರ ನಾನಿದ್ದೇನೆ. ಸಮುದಾಯಕ್ಕೆ ಬೇಕಾದ ಅನುಕೂಲ ಮಾಡಿಕೊಡುವೆ. ಸಮಯಕ್ಕೆ ಸ್ವಾಮಿಗಳ ನೇಮಕ ಮಾಡುವ ಬೇಡಿಕೆ ಇದೆ ಅದನ್ನು ಮಾಡಲು ಬೇಕಾದ ವ್ಯವಸ್ಥೆ ಮಾಡುವೆ ಎಂದರು ಅಲ್ಲದೇ ಅಲೆಮಾರಿ ನಿಮಗದ ಅಧ್ಯಕ್ಷೆ ಪಲ್ಲವಿ ಪರ ಮುಂದಿನ ಬಾರಿ ಟಿಕೆಟ್ ಕೇಳ್ತೇನೆ ಎಂದರು. ಶೈಕ್ಷಣಿಕವಾಗಿ ಸಮುದಾಯದ ಜನರು ಮುಂದೆ ಬಂದ್ರೇ ಉನ್ನತ ಶಿಕ್ಷಣ ಕೊಡಿಸುವ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ