ಅಕ್ರಮ ಬಾಂಗ್ಲನ್ನರಿಗೂ ಸಿಗುತ್ತೆ ಪಡಿತರ!| ನುಸುಳಿಬಂದವರು ಈಗ ರಾಜ್ಯದ ಮತದಾರರು| ಇವರ ಬಳಿಯೂ ಇದೆ ಆಧಾರ್ ಕಾರ್ಡ್| ಹಣ ಕೊಟ್ಟರೆ ಇವರಿಗೆ ದಾಖಲೆಗಳೆಲ್ಲ ಲಭ್ಯ| ರಾಜಕಾರಣಿಗಳಿಗೆ ಮತಬ್ಯಾಂಕ್, ದಲ್ಲಾಳಿಗಳಿಗೆ ಹಣದ ಮೂಲ
ಬೆಂಗಳೂರು[ಜ.20]: ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದ ಬಾಂಗ್ಲಾದೇಶದ ನುಸುಳುಕೋರರು ಇದೀಗ ರಾಜ್ಯದ ಮತದಾರರಾಗಿದ್ದಾರೆ. ತಿಂಗಳು-ತಿಂಗಳು ಅವರ ಜೋಳಿಗೆಗೂ ಸರ್ಕಾರದ ಪಡಿತರ ಬೀಳುತ್ತದೆ. ದೇಶದ ನಾಗರಿಕ ಎನ್ನಿಸಿಕೊಳ್ಳಲು ಅವರ ಜೇಬಿನಲ್ಲಿ ಆಧಾರ್ ಕಾರ್ಡ್‌ಗಳು ಸಿಗುತ್ತವೆ.
ಹೌದು, ಹಣಕ್ಕಾಗಿ ಇಂತಹ ದಾಖಲೆಗಳನ್ನು ಒದಗಿಸಲು ಒಂದು ತಂಡವೇ ಸಕ್ರಿಯವಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಪ್ರಜೆಗಳಿಗೆ ಕೆಲ ಸ್ಥಳೀಯರು ಶ್ರೀರಕ್ಷೆಯಾಗಿ ನಿಂತಿರುವುದು ದೇಶದ ಆಂತರಿಕ ಭದ್ರತೆಗೆ ಆತಂಕ ಸೃಷ್ಟಿಸಿದೆ. ಸ್ಥಳೀಯ ರಾಜಕಾರಣಿಗಳು ಮತ ಬ್ಯಾಂಕ್‌ಗಾಗಿ ಬಾಂಗ್ಲಾ ಪ್ರಜೆಗಳನ್ನು ಬಳಸಿಕೊಂಡರೆ ಸ್ಥಳೀಯ ಖಾಸಗಿ ಸಂಸ್ಥೆಗಳು ತಮ್ಮ ವ್ಯವಹಾರದ ದೃಷ್ಟಿಯಿಂದ ಬಾಂಗ್ಲನ್ನರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.
ಅಕ್ರಮ ಬಾಂಗ್ಲನ್ನರಿಗೂ ಪಡಿತರ: ರಾಜಕಾರಣಿಗಳಿಗೆ ಮತಬ್ಯಾಂಕ್, ದಲ್ಲಾಳಿಗಳಿಗೆ ಹಣದ ಮೂಲ
ಕೆಲಸ ಅರಸಿ ರಾಜ್ಯ ಪ್ರವೇಶಿಸುವ ಬಾಂಗ್ಲಾ ನುಸುಳುಕೋರರು ಮೊದಲೆಲ್ಲ ಚಿಂದಿ ಆಯುತ್ತಿದ್ದರು. ಬಾಂಗ್ಲಾ ಪ್ರಜೆಗಳ ಕಾಯಕ ಕೂಡ ಕ್ರಮೇಣ ಬದಲಾಗಿದೆ. ಖಾಸಗಿ ಆಸ್ಪತ್ರೆಗಳು, ಕಂಪನಿಗಳು ಹಾಗೂ ಸುಲಭ ಶೌಚಾಲಯಗಳಲ್ಲಿ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿದ್ದರು. ನಂತರ ಹೋಟೆಲ್‌ಗಳಿಗೆ ಪ್ರವೇಶಿಸಿದ ಅವರು, ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಹಾಕಿ ಕಾಫಿ ಎಸ್ಟೇಟ್‌ನಲ್ಲಿದ್ದಾರೆ. ಖಾಸಗಿ ವಲಯದ ಭದ್ರತೆಯಲ್ಲಿಯೂ ಸಹ ಇದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ ಲಭಿಸಿದ ಬಳಿಕ ಅವರು ಚಾಲಕ ವೃತ್ತಿ ಆರಂಭಿಸಿದ್ದಾರೆ. ಎಲ್ಲಾ ದಾಖಲೆಗಳು ಸಿಕ್ಕ ಬಳಿಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು. ಇನ್ನು ಹಲವರು ಮನೆಗಳ್ಳತನ, ವೇಶ್ಯಾವಾಟಿಕೆ, ಕೊಲೆ ಹೀಗೆ ಅಪರಾಧ ಚಟುವಟಿಕೆ ಆರಂಭಿಸಿ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡಿದ್ದಾರೆ.
ಪಾಸ್‌ಪೋರ್ಟ್ ಕೂಡ ಸಿಗುತ್ತೆ:
ಆರು ತಿಂಗಳ ಹಿಂದೆ ಬೆಂಗಳೂರಿನ ಅಮೃತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಪ್ರಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದರು. ಆತನ ಬಳಿ ಪಾಸ್‌ಪೋರ್ಟ್, ಚುನಾವಣಾ ಗುರುತಿನ ಚೀಟಿ ಭಾರತದ ಎಲ್ಲಾ ದಾಖಲೆಗಳಿದ್ದವು. ಹಣ ಕೊಟ್ಟರೆ ಏಜೆಂಟ್‌ಗಳು ಈ ನಕಲಿ ದಾಖಲೆ ನೀಡಿ ಎಲ್ಲ ದಾಖಲೆಗಳನ್ನು ಮಾಡಿಸಿ ಕೊಡುತ್ತಾರೆ ಎಂಬುದನ್ನು ಬಾಯ್ಬಿಟ್ಟಿದ್ದ. ಇದೇ ರೀತಿ ಮಾರತ್‌ಹಳ್ಳಿಯಲ್ಲಿ ಎರಡು ವರ್ಷದ ಹಿಂದೆ 17 ಜನರನ್ನು ಬಂಧಿಸಲಾಗಿತ್ತು. ಇವರೆಲ್ಲರ ಬಳಿ ಚುನಾವಣಾ ಗುರುತಿನ ಚೀಟಿಗಳಿದ್ದವು.
ವರ್ಷಕ್ಕೊಮ್ಮೆ 10 ಲಕ್ಷ ರು. ಪಾವತಿ, ಅಕ್ರಮ ಬಾಂಗ್ಲನ್ನರಿಗೆ ಪೊಲೀಸರ ಶ್ರೀರಕ್ಷೆ!
ಈ ದಾಖಲೆಗಳನ್ನು ಒದಗಿಸಲು ದಲ್ಲಾಳಿಗಳ ಜಾಲವೇ ಕಾರ್ಯಪ್ರವೃತ್ತವಾಗಿದೆ. ಹಣ ಪಡೆದು ಇವರಿಗೆ ಬೇಕಾದ ದಾಖಲೆಗಳನ್ನು ಮಾಡಿಸಿಕೊಡುತ್ತಾರೆ. ವಿಪರ್ಯಾಸವೆಂದರೆ ಕೆಲ ತಿಂಗಳ ಹಿಂದೆ ಸೋಲದೇವನಹಳ್ಳಿಯಲ್ಲಿ ಬಂಧನಕ್ಕೆ ಒಳಗಾದ ಜೆಎಂಬಿ ಉಗ್ರನ ಬಳಿ ಕೂಡ ಭಾರತದ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದನ್ನು ಕಂಡು ಎನ್‌ಐಎ ಅಧಿಕಾರಿಗಳು ಬೆಚ್ಚಿಬಿದ್ದಿದ್ದರು.
ಅಪಾರ್ಟ್‌ಮೆಂಟ್‌ಗಳಿಗೆ ಇವರು ಅನಿವಾರ್ಯ!
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನುಸುಳುಕೋರರು ಇರುವೆಲ್ಲೆಡೆ ಬಹುಮಹಡಿಯ ಹತ್ತಾರು ಅಪಾರ್ಟ್‌ಮೆಂಟ್‌ಗಳಿವೆ. ಈ ಅಪಾರ್ಟ್‌ಮೆಂಟ್‌ಗಳ ಸೆಕ್ಯೂರಿಟಿ ಗಾರ್ಡ್ ಕೆಲಸ, ಫ್ಲ್ಯಾಟ್ ನಿವಾಸಿಗಳ ಅಡುಗೆ ಮನೆಯಿಂದ ಹಿಡಿದು ಕಾರು ಶುಚಿಗೊಳಿಸುವಂತಹ ಕೆಲಸಗಳವರೆಗೆ ಇವರು ನಾನಾ ಕೆಲಸಗಳನ್ನು ಮಾಡುತ್ತಾರೆ. ಕಡಿಮೆ ವೇತನಕ್ಕೆ ಕೆಲಸ ಮಾಡುವ ಇವರು, ಶ್ರಮದಾಯಕ ಕೆಲಸಗಳಿಗೂ ಸೈ ಎನ್ನುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗಿಂತ ಇವರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎನ್ನುತ್ತಾರೆ ಕಾಡುಬೀಸನಹಳ್ಳಿ ನಿವಾಸಿ ಹೇಮರಾಜ್.