ಕುಖ್ಯಾತರಾಗಿರುವ 111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಗಾಗಲೇ ಕುಖ್ಯಾತ ರೌಡಿಗಳ ಪಟ್ಟಿಯನ್ನು ಡಿಸಿಪಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು(ಅ.31): ರಾಜಧಾನಿಯಲ್ಲಿ ಪಾತಕ ಲೋಕವನ್ನು ಬಗ್ಗು ಬಡಿಯಲು ಯೋಜಿಸಿರುವ ಪೊಲೀಸರು, ಅಪರಾಧ ಕೃತ್ಯಗಳ ಮೂಲಕ ನಾಗರಿಕ ಸಮುದಾಯದಲ್ಲಿ ಆತಂಕ ಸೃಷ್ಟಿಸಿ ಕುಖ್ಯಾತರಾಗಿರುವ 111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಮುಂದಾಗಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಗಾಗಲೇ ಕುಖ್ಯಾತ ರೌಡಿಗಳ ಪಟ್ಟಿಯನ್ನು ಡಿಸಿಪಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಅಯ್ಯೋ! ಅಜ್ಜಿಯ ಕಣ್ಮುಂದೆ ಪ್ರಾಣ ಬಿಟ್ಟ ಕಂದ; ನೋಡಲು CCTVಗೆ ಮಾತ್ರ ಸಾಧ್ಯ!
ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿರುವ ನಟೋರಿಯಸ್ ರೌಡಿಗಳ ಪತ್ತೆ ಹಚ್ಚಿ ತಕ್ಷಣವೇ ಆಯುಕ್ತರ ಕಚೇರಿಗೆ ಗಮನಕ್ಕೆ ತರಬೇಕು. ಆ ರೌಡಿಗಳ ಪಾತಕ ಲೋಕದ ಚರಿತ್ರೆ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಬಳಿಕ ಗೂಂಡಾ ಕಾಯ್ದೆ ದಾಖಲಿಸಲು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆಯುಕ್ತರು ಸೂಚಿಸಿದ್ದಾರೆ.
ಕೆಲವು ಕುಖ್ಯಾತ ರೌಡಿಗಳು ನಗರದಲ್ಲಿ ಮರಿ ರೌಡಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅಲ್ಲದೆ ಸಾಲ ವಸೂಲಾತಿ ಹಾಗೂ ಮನೆ ಖಾಲಿ ಮಾಡಿಸಲು ಅವರು ತೋಳ್ಬಲ ಪ್ರದರ್ಶನ ನಡೆಸಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಅಂಥ ಕೃತ್ಯದಲ್ಲಿ ತೊಡಗಿದ್ದ ನಾಲ್ವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.
ನಗರದಲ್ಲಿ ಅಪರಾಧ ಚಟುವಟಿಕೆಗಳಿಂದ ಕುಖ್ಯಾತಿ ಪಡೆದಿರುವ 111 ರೌಡಿಗಳ ಪಟ್ಟಿತಯಾರಿಸಲಾಗಿದ್ದು, ಅವರ ವಿರುದ್ಧ ಮುಂದಿನ ಕ್ರಮಕ್ಕೆ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಬೃಹತ್ ಜಾಲ
ಕ್ರಿಕೆಟ್ ಬೆಟ್ಟಿಂಗ್ ಎನ್ನುವುದು ಬಹು ವಿಸ್ತಾರದ ಮೋಸದ ಜಾಲವಾಗಿದ್ದು, ಅದಕ್ಕೆ ಪೊಲೀಸರಿಂದಲೂ ಕಡಿವಾಣ ಹಾಕಲು ಅಸಾಧ್ಯವಾಗಿದೆ ಎಂದು ಆಯುಕ್ತರು ಆತಂಕ ವ್ಯಕ್ತಪಡಿಸಿದರು. ಈಗ ಮ್ಯಾಚ್ ಫಿಕ್ಸ್‌ನಲ್ಲಿ ಕೆಲವು ಆಟಗಾರರು ಬಲಿಯಾಗಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ನಿಯಂತ್ರಣಕ್ಕೆ ಸಿಸಿಬಿ ಮೂಲಕ ಯೋಜನೆ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಿಸಿಬಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಮಾದಕ ಜಾಲದಲ್ಲಿ ಪ್ರತಿಷ್ಠಿತರ ಮಕ್ಕಳು:
ಮಾದಕ ವಸ್ತು ಜಾಲಕ್ಕೆ ಕೆಲವು ಪ್ರತಿಷ್ಠಿತ ಕುಟುಂಬಗಳ ಮಕ್ಕಳೇ ಬಲಿಯಾಗುತ್ತಿದ್ದಾರೆ. ನಗರದಲ್ಲಿ ಮಾದಕ ವಸ್ತು ಚಟಕ್ಕೆ ಯುವಕರು ಹೆಚ್ಚಾಗಿ ತುತ್ತಾಗಿದ್ದಾರೆ. ಇದರಲ್ಲಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳು ಸಹ ಸೇರಿರುವುದು ವಿಷಾದಕರ ಸಂಗತಿ ಎಂದರು.
ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಸೆರೆ
ಮಕ್ಕಳನ್ನು ಪೋಷಕರು ತಿದ್ದದೆ ಹೋದರೆ ಮಾದಕ ವಸ್ತು ಸೇವಿಸಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೆ ಕುಟುಂಬದ ಹೆಸರು ಬಹಿರಂಗವಾಗುತ್ತದೆ. ಆದ ಕಾರಣ ಮಕ್ಕಳಿಗೆ ಬುದ್ಧಿವಾದ ಹೇಳಿ ಅವರನ್ನು ಸರಿದಾರಿಗೆ ತರಬೇಕೆಂದು ಎಂದು ಆಯುಕ್ತರು ತಾಕೀತು ಮಾಡಿದ್ದಾರೆ.. ಸುದ್ದಿಗೋಷ್ಠಿಯಲ್ಲಿ ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್ ಹಾಗೂ ಕೆ.ಪಿ.ರವಿಕುಮಾರ್ ಇದ್ದರು.
ವೈದ್ಯಕೀಯ ಸೀಟು ಧೋಖಾ
ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ವಂಚಿಸುವ ಜಾಲ ನಗರದಲ್ಲಿ ಸಕ್ರಿಯವಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಜಾಗ್ರತೆ ವಹಿಸಬೇಕು ಎಂದು ಆಯುಕ್ತ ಭಾಸ್ಕರ್‌ರಾವ್ ಕಿವಿಮಾತು ಹೇಳಿದರು.
ವೈದ್ಯಕೀಯ ಸೀಟುಗಳ ಭರ್ತಿ ಪ್ರಕ್ರಿಯೆ ಕುರಿತು ಸಾರ್ವಜನಿಕವಾಗಿ ಕಾಲೇಜು ಆಡಳಿತ ಮಂಡಳಿಗಳು ಪ್ರಕಟಿಸಬೇಕು. ಇದರಿಂದ ಮೋಸ ಬಲೆಗೆ ವಿದ್ಯಾರ್ಥಿಗಳು ಬೀಳದಂತೆ ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.