
ಬೆಂಗಳೂರು (ಜೂ.9): ಈ ಹಿಂದಿನ ತಿಂಗಳಲ್ಲಿ ₹3000 ಬರುತ್ತಿದ್ದ ನೀರಿನ ಬಿಲ್ ಮೇ ತಿಂಗಳಲ್ಲಿ ಏಕಾಏಕಿ ₹23000ಕ್ಕೂ ಅಧಿಕ ಬಂದಿದ್ದಕ್ಕೆ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರು ಶಾಕ್ ಆಗಿದ್ದು, ನಗರದಲ್ಲಿರುವ ಪಿಜಿಗಳಿಗೆ ಅವೈಜ್ಞಾನಿವಾಗಿ ವಿಧಿಸುತ್ತಿರುವ ನೀರಿನ ಬಿಲ್ ಮೊತ್ತ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು ಜಲಮಂಡಳಿಗೆ ಅಧ್ಯಕ್ಷರಿಗೆ ಪಿ.ಜಿ.ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಕಳೆದ ಏಪ್ರಿಲ್‌ನಿಂದ ವಸತಿಯೇತರ ಬಳಕೆಯ ನೀರಿನ ದರ ಹೆಚ್ಚಿಸಿದ್ದು, ಅದರಲ್ಲೂ ಒಳಚರಂಡಿ ಹಾಗೂ ಇತರೆ ಶುಲ್ಕಗಳನ್ನು ದುಬಾರಿಗೊಳಿಸಿದೆ. ಇದರಿಂದ ನಗರದಲ್ಲಿರುವ ಪಿಜಿ ಮಾಲೀಕರಿಗೆ ತೊಂದರೆ ಉಂಟಾಗಿದೆ ಎಂದಿದ್ದಾರೆ.
ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಲಕ್ಷಾಂತರ ಮಂದಿಗೆ ವಸತಿ, ಊಟದ ವ್ಯವಸ್ಥೆಯನ್ನು ಪಿಜಿಗಳು ಮಾಡುತ್ತಿವೆ. ಕಾನೂನು ಬದ್ಧವಾಗಿ ಪಿಜಿಗಳನ್ನು ನಡೆಸಲಾಗುತ್ತಿದೆ. ಆದರೆ, ಬೆಂಗಳೂರು ಜಲಮಂಡಳಿಯು ದರ ಏರಿಕೆ ಸಂದರ್ಭದಲ್ಲಿ ಪಿಜಿಗಳನ್ನು ದೊಡ್ಡ ವಾಣಿಜ್ಯ ಚಟುವಟಿಕೆ ರೀತಿಯ ಪರಿಗಣಿಸಿ ಅವೈಜ್ಞಾನಿಕ ರೀತಿಯಲ್ಲಿ ದರ ವಿಧಿಸಲಾಗಿದೆ. ಈಗಾಗಲೇ ಸರಣಿ ಬೆಲೆ ಏರಿಕೆಯಿಂದ ನಗರದಲ್ಲಿರುವ ಸಣ್ಣ ಸಣ್ಣ ಪಿಜಿ ಮಾಲೀಕರು ತಮ್ಮ ಪಿಜಿಗಳನ್ನು ಮುಚ್ಚುವ ಅಲೋಚನೆ ಮಾಡುತ್ತಿದ್ದಾರೆ. ಹೀಗಾಗಿ, ಬೆಂಗಳೂರು ಜಲಮಂಡಳಿಯು ಪಿಜಿಗಳನ್ನು ಸಾಮಾಜಿಕ ಸೇವೆ ಎಂದು ಪರಿಗಣಿಸಿ ಪಿಜಿಗಳಿಗೆ ವಿಧಿಸಲಾಗಿರುವ ಹೆಚ್ಚುವರಿ ದರವನ್ನು ವಾಪಾಸ್ ಪಡೆಯಬೇಕು ಎಂದು ಮಂಡಳಿಯ ಅಧ್ಯಕ್ಷರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ಅವರು, ಜಲಮಂಡಳಿಯ ದರ ಏರಿಕೆಯಿಂದ ಹಿಂದಿನ ತಿಂಗಳು ₹3,450 ನೀರಿನ ಬಿಲ್ ಬಂದಿತ್ತು. ದರ ಏರಿಕೆ ಬಳಿಕದ ತಿಂಗಳಿನಲ್ಲಿ ಬರೋಬ್ಬರಿ ₹23,682 ಬಿಲ್ ಬಂದಿದೆ. ಒಳಚರಂಡಿ ಶುಲ್ಕವನ್ನು ಅವೈಜ್ಞಾನಿಕವಾಗಿ ವಿಧಿಸುತ್ತಿದ್ದು, ಕಡಿಮೆ ಮಾಡುವಂತೆ ಕೋರಲಾಗಿದೆ. ಈ ಬಗ್ಗೆ ಪರಿಶೀಲಿಸಿ ಪರಿಹರಿಸುವ ಭರವಸೆಯನ್ನು ಜಲಮಂಡಳಿ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ