
ರಾಮನಗರ (ಜ.06): ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಫೆಬ್ರವರಿ ಅಂತ್ಯದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೆಲಿಕಾಪ್ಟರ್, ಬಳಿಕ ರಸ್ತೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು-ಮೈಸೂರು ಹೆದ್ದಾರಿಯ ಕಾಮಗಾರಿ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ.
ರಾಷ್ಟ್ರಪತಿ ದ್ರೌಪತಿ ಮುರ್ಮು ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ದಶಪಥ ಹೆದ್ದಾರಿ ಕಾಮಗಾರಿ ವೇಳೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಈ ಭಾಗದ ಸಂಸದರು ಹಾಗೂ ಶಾಸಕರು ಅಂಡರ್ ಪಾಸ್‌ಗಳ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದರು. ಅವರ ಸಲಹೆ ಮತ್ತು ಮನವಿ ಪರಿಗಣಿಸಲಾಗಿದೆ. ಅಲ್ಲದೆ, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಡಾಬಸ್ ಪೇಟೆ ಹಾಗೂ ರಾಮನಗರ ಸೇರಿದಂತೆ ಪ್ರಮುಖ ನಗರಗಳನ್ನು ಬೆಸೆಯಲು ವರ್ತುಲ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಮಾತ್ರ ದಲಿತರು ಸಿಎಂ, ಪಿಎಂ ಆಗಲು ಸಾಧ್ಯ: ಮಾಜಿ ಶಾಸಕ ಬಾಲಕೃಷ್ಣ
ರಾಷ್ಟ್ರೀಯ ಹೆದ್ದಾರಿಗೆ ಹೆಸರಿಡುವ ಸಂಪ್ರದಾಯ ಇಲ್ಲ: ಹೆದ್ದಾರಿಗೆ ಹೆಸರಿಡುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ. ನಾವು ಹೆದ್ದಾರಿಗಳಿಗೆ ನಂಬರ್ ಮಾತ್ರ ನೀಡುತ್ತೇವೆ ಅಷ್ಟೇ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರು-ಮೈಸೂರು ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಮನವಿ ಸಲ್ಲಿಸಿದ್ದಾರೆ. ಇನ್ನು ಕೆಲವರು ಬೇರೆ ಹೆಸರುಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವನೆ ಸಲ್ಲಿಸಿದರೆ ಪ್ರಧಾನಿಗಳೊಂದಿಗೆ ಚರ್ಚಿಸಿ ಯಾವ ಹೆಸರು ಇಡಬೇಕೆಂಬುದನ್ನು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಹೆದ್ದಾರಿ ಯೋಜನೆ ಅವೈಜ್ಞಾನಿಕ ಅಲ್ಲ: ನಾನಾಗಲಿ, ಸಂಸದರಾಗಲಿ ಅಥವಾ ಶಾಸಕರಾಗಲಿ ಡಿಪಿಆರ್ ಸಿದ್ಧಪಡಿಸುವುದಿಲ್ಲ. ತಾಂತ್ರಿಕವಾಗಿ ನಿಪುಣರಾಗಿರುವ ಅಧಿಕಾರಿಗಳ ತಂಡ ಯೋಜನೆ ಸಿದ್ಧಪಡಿಸುತ್ತದೆ. 10 ವರ್ಷದ ಬಳಿಕ, ಈ ಬಾರಿ ಅಧಿಕ ಮಳೆಯಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸಮಸ್ಯೆ ಉಂಟಾಗಿತ್ತು. ಸಮಸ್ಯೆ ಪರಿಹರಿಸಲಾಗಿದೆ. ಹೆದ್ದಾರಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಬೆಂ-ಮೈ ಹೆದ್ದಾರಿ ರಸ್ತೆಯ ಡಿಸೈನ್ ತುಂಬ ಚೆನ್ನಾಗಿದ್ದು, ಪ್ರಕೃತಿಯ ನಡುವೆ ಈ ಹೆದ್ದಾರಿ ಹಾದು ಹೋಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಪ್ರದೀಪ್ ಪತ್ನಿ ದಾಖಲಿಸಿದ್ದ ಕೇಸ್‌ಗೆ ಟ್ವಿಸ್ಟ್!
ಡಬಲ್ ಡೆಕ್ಕರ್ ಬಸ್: ಸಾರಿಗೆ ಸೇವೆಗಳನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ವಿದೇಶಗಳಲ್ಲಿರುವಂತೆ ಬ್ಯುಸಿನೆಸ್ ಕ್ಲಾಸ್ ಒಳಗೊಂಡ ಡಬಲ್ ಡೆಕ್ಕರ್ ಬಸ್‌ಗಳನ್ನು ಮೈಸೂರು-ಬೆಂಗಳೂರು ಮಾರ್ಗದಲ್ಲಿ ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವೋಲ್ವೋ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಸ್ಕೈ ವಾಕ್ ನಿರ್ಮಾಣದ ಬಗ್ಗೆಯೂ ಶೀಘ್ರವೇ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ