
ಬೆಂಗಳೂರು (ಏ.10): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ಸೇರಿ ಮೂವರಿಗೆ 1.25 ಕೋಟಿ ರು. ದಂಡ ಪಾವತಿಸುವಂತೆ ಸೂಚಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬುಧವಾರ ಪ್ರಕರಣದ ತೀರ್ಪು ನೀಡಿದ ನ್ಯಾಯಾಲಯ ಆರೋಪಿಗಳು 1.25 ಕೋಟಿ ರು. ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ. ಮಾಜಿ ಸಚಿವ ಬಿ.ನಾಗೇಂದ್ರ, ಅನಿಲ್ ರಾಜಶೇಖರ್ ಮತ್ತು ಚುಂಡೂರು ಭಾಸ್ಕರ್ ವಿರುದ್ಧ ವಿಎಸ್‌ಎಲ್ ಸ್ಟೀಲ್ಸ್ ಸಂಸ್ಥೆಯು ಚೆಕ್‌ಬೌನ್ಸ್ ಕೇಸ್ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ದೂರುದಾರ ವಿಎಸ್ಎಲ್ ಸ್ಟೀಲ್ಸ್ ಸಂಸ್ಥೆಯೊಂದಿಗೆ ಆರೋಪಿಗಳ ಪಾಲುದಾರಿಕೆಯ ಬಿ.ಸಿ.ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ರಿಸೋರ್ಸ್ ಕಂಪನಿ ನಡುವೆ ಹಣಕಾಸು ವ್ಯವಹಾರ ಇತ್ತು. 2013ರಿಂದ ಹಣಕಾಸು ವಿವಾದ ಉಂಟಾಗಿದ್ದು, ಒಟ್ಟು 2.53 ಕೋಟಿ ರು. ಪಾವತಿಸಬೇಕಿತ್ತು. ಒಂದು ಕೋಟಿ ರು. ಚೆಕ್ ನೀಡಲಾಗಿತ್ತು. ಆದರೆ, 2022 ರಲ್ಲಿ ಚೆಕ್‌ಬೌನ್ಸ್ ಆದ ಕಾರಣ ವಿಎಸ್ಎಲ್ ಸ್ಟೀಲ್ಸ್ ಸಂಸ್ಥೆಯು ಪ್ರಕರಣ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1.23 ಕೋಟಿ ರು. ದಂಡ ಪಾವತಿಸುವಂತೆ ಆದೇಶ ನೀಡಿದೆ. ಇದರಲ್ಲಿ 10 ಸಾವಿರ ರು. ಸರ್ಕಾರಕ್ಕೆ ಉಳಿದ ಹಣ ದೂರುದಾರ ಕಂಪನಿಗೆ ಪಾವತಿಸಬೇಕು ಎಂದು ತಿಳಿಸಿದೆ. ದಂಡ ಪಾವತಿಸುವಲ್ಲಿ ತಪ್ಪಿದರೆ ಒಂದು ವರ್ಷ ಸೆರೆವಾಸದ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.
ನಾಗೇಂದ್ರಗೆ ದೊಡ್ಡ ಶಿಕ್ಷೆಯಾಗಲಿದೆ: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಗೇಂದ್ರ ಅವರಿಗೆ ದೊಡ್ಡಪ್ರಮಾಣದ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆಸಿ, ಅದೇ ಸಮುದಾಯದ ವ್ಯಕ್ತಿಯಾಗಿ ಆ ಜನಾಂಗಕ್ಕೆ ನಾಗೇಂದ್ರ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.
ಕೆಲಸ ಮಾಡಲಾಗದವರು ಹುದ್ದೆ ಬಿಡಿ: ಮಲ್ಲಿಕಾರ್ಜುನ ಖರ್ಗೆ ತಾಕೀತು
ನಿಗಮದ ಹಣದಲ್ಲಿ ಕೋಟ್ಯಂತರ ಮೌಲ್ಯದ ಕಾರು ಖರೀದಿ, ವಿಮಾನ ಪ್ರಯಾಣ ಭತ್ಯೆ, ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ₹200ನಂತೆ ಮೂವರು ಶಾಸಕರ ಮೂಲಕ ಒಟ್ಟು ₹14.80 ಕೋಟಿ ಹಂಚಿಕೆ ಸೇರಿ ₹20 ಕೋಟಿ ಚುನಾವಣೆಗೆ ಬಳಸಿಕೊಂಡಿರುವ ಬಗ್ಗೆ, ಕಂಡ ಕಂಡವರಿಗೆ ಹಣ ವರ್ಗಾವಣೆ ಮಾಡಿರುವ ಕುರಿತು ಇ.ಡಿ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಇಂಚಿಂಚು ಮಾಹಿತಿಯನ್ನು ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಸಿಬಿಐ ತನಿಖೆಯಿಂದ ಇನ್ನಷ್ಟು ಅಂಶ ಹೊರಬರಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ