ಬಂಡೀಪುರ ಟೈಗರ್ ಸಫಾರಿ ಬಂದ್‌: ಹೋಮ್‌ಸ್ಟೇ, ರೆಸಾರ್ಟ್‌ಗಳಿಗೂ ಹೋಗುವಂತಿಲ್ಲ

Published : Apr 05, 2023, 03:55 PM IST
ಬಂಡೀಪುರ ಟೈಗರ್ ಸಫಾರಿ ಬಂದ್‌: ಹೋಮ್‌ಸ್ಟೇ, ರೆಸಾರ್ಟ್‌ಗಳಿಗೂ ಹೋಗುವಂತಿಲ್ಲ

ಸಾರಾಂಶ

50ನೇ ವರ್ಷದ ಹುಲಿ ಯೋಜನೆ ಸುವರ್ಣ ಮಹೋತ್ಸವದ ಆಚರಣೆ ಪ್ರಯುಕ್ತ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಸಫಾರಿಯನ್ನು ಬಂದ್‌ ಮಾಡಲಾಗಿದೆ.

ಚಾಮರಾಜನಗರ (ಏ.05): 50ನೇ ವರ್ಷದ ಹುಲಿ ಯೋಜನೆ ಸುವರ್ಣ ಮಹೋತ್ಸವದ ಆಚರಣೆ ಪ್ರಯುಕ್ತ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಸಫಾರಿಯನ್ನು ಬಂದ್‌ ಮಾಡಲಾಗಿದೆ. ಜೊತೆಗೆ ಹೋಮ್‌ ಸ್ಟೇ, ರೆಸಾರ್ಟ್‌ ಮತ್ತು ಲಾಡ್ಜ್‌ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂದಿಸಲಾಗಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 9 ರಂದು ಬಂಡೀಪುರಕ್ಕೆ ಆಗಮಿಸಿ 50ನೇ ವರ್ಷದ ಹುಲಿ ಯೋಜನೆ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಡೀಪುರದಲ್ಲಿ ಇಂದಿನಿಂದಲೇ ಸಫಾರಿ ಬಂದ್ ಮಾಡಲಾಗಿದೆ. ನಾಳೆಯಿಂದ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳು ಸಹ ಬಂದ್‌ ಆಗಲಿವೆ. ರಸ್ತೆ ನಿರ್ವಹಣೆ, ಪೂರ್ವ ಸಿದ್ದತೆ, ಹಾಗು ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏ‌.6 ರಿಂದ 9 ರವರಗೆ ಪ್ರವಾಸಿಗರಿಗೆ ಸಫಾರಿ, ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.

8 ರಂದೇ ಮೈಸೂರಿಗೆ ಪ್ರಧಾನಿ ಭೇಟಿ : ಬಂಡೀಪುರದಲ್ಲಿ ಸಫಾರಿ, ಬೊಮ್ಮ ದಂಪತಿ ಭೇಟಿ

ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದೆಯೆಂದು ಕಾಂಗ್ರೆಸ್‌ ಆರೋಪ: ಸಂಪೂರ್ಣವಾಗಿ ಹುಲಿ ಅಭಯಾರಣ್ಯದಲ್ಲಿ ಸಾರ್ವಜನಿಕ ಪ್ರವೇಶವಿರುವ ಎಲ್ಲ ಅವಕಾಶಗಳನ್ನು ನಾಳೆಯಿಂದ ನಿರ್ಬಂಧಿಸಲಾಗುತ್ತಿದೆ. ಆದರೆ, ಏಪ್ರಿಲ್ 9 ರಂದು ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿಗೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ನೀತಿ ಸಂಹಿತೆ ಇರುವಾಗ ಒಬ್ಬ ಜನಪ್ರತಿನಿಧಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಷ್ಟು ಸರಿ? ಎಂದು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ಪ್ರಶ್ನೆ ಮಾಡಿದ್ದಾರೆ. 

ಸಫಾರಿ ಬಂದ್‌ ಮಾಡುವುದಕ್ಕೆ ವಿರೋಧ: ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಕೇರಳ ಹಾಗು ತಮಿಳುನಾಡಿಗೆ ಸಂಕಲ್ಪ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು, ಪ್ರವಾಸಿಗರಿಗೆ ಸಫಾರಿ ಬಂದ್ ಮಾಡುವುದು ಎಷ್ಟು ಸಮಂಜಸ? ಅರಣ್ಯ ಸಿಬ್ಬಂದಿಗೆ ಸನ್ಮಾನ ಮಾಡುವ ಮಾಹಿತಿ ಇದ್ದು ಮತದಾರರ ಮೇಲೆ ಇದು ಪ್ರಭಾವ ಬೀರಿದಂತಲ್ಲವೇ? ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಚುನಾವಣೆ ನಂತರ ಪ್ರಧಾನಿ ಮೋದಿ ಬರಲಿ, ನಮ್ಮ ಆಕ್ಷೇಪ ಇರುವುದಿಲ್ಲ ಎಂದು ಕೆರೆಹಳ್ಳಿ ನವೀನ್ ತಿಳಿಸಿದ್ದಾರೆ. 

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 40 ಕೋಟಿ ರು. ಭ್ರಷ್ಟಾಚಾರ ಆರೋಪ: ತನಿಖೆಗೆ ಪಿಸಿಸಿಎಫ್‌ ಆದೇಶ

ಪ್ರಧಾನಿ ನರೇಂದ್ರ ಮೋದಿ 2 ದಿನದ  ಕಾರ್ಯಕ್ರಮಗಳೇನು?: ಏಪ್ರಿಲ್ 8 ಹಾಗೂ 9 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೈಸೂರು ಮತ್ತು ಚಾಮರಾಜನಗರದಲ್ಲಿ ಪ್ರವಾಸ ಮಾಡಲಿದ್ದಾರೆ. ಹುಲಿ ಸಂರಕ್ಷಣಾ ಯೋಜನೆ 50 ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 8 ರ ಸಂಜೆ 8 ಗಂಟೆಗೆ ಮೈಸೂರಿಗೆ ಆಗಮಿಸಿ, ರ್ಯಾಡಿಷನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ, ಏಪ್ರಿಲ್ 9 ಬೆಳಿಗ್ಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡಿಪುರಕ್ಕೆ  ಪಯಣ ಮಾಡಲಿದ್ದಾರೆ. ಅಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಬಂಡೀಪುರಕ್ಕೆ ಭೇಟಿ, ಸಫಾರಿ ವೀಕ್ಷಣೆ ಮಾಡುತ್ತಾರೆ. ನಂತರ, 10 ಗಂಟೆ ಸುಮಾರಿಗೆ ನೀಲಗಿರೀಸ್‌‌ಗೆ ಭೇಟಿ ನೀಡುತ್ತಾರೆ. ಬೆಳಗ್ಗೆ 10.30ಕ್ಕೆ ಮೈಸೂರಿಗೆ ವಾಪಸ್ ಆಗಲಿದ್ದಾರೆ. ನಂತರ, ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಿರುವ ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಂತರ ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತರೆಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ