ಬಳ್ಳಾರಿ ಅಮಾನತ್ತಾದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆ ಕೇಸ್-ಅಪ್ಪನ ಸ್ಪಷ್ಟನೆ; ಸಸ್ಪೆಂಡ್ ಮರುಪರಿಶೀಲನೆಗೆ ಮನವಿ!

Published : Jan 04, 2026, 12:45 PM IST
IPS Pavan Nejjur Father Udayashankar

ಸಾರಾಂಶ

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಆತ್ಮ*ಹತ್ಯೆ ಯತ್ನ ಮಾಡಿಲ್ಲವೆಂದು ಅವರ ತಂದೆ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆ ಮತ್ತು ಅನಿರೀಕ್ಷಿತ ಅಮಾನತಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು/ಬಳ್ಳಾರಿ (ಜ.04): ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಅವರ ಕುರಿತು ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಡುತ್ತಿರುವ ಆತ್ಮ*ಹತ್ಯೆ ಯತ್ನದ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಅವರ ತಂದೆ ಶ್ರೀ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಇಲಾಖೆಯಲ್ಲಿ ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದಾನೆ. ಬಳ್ಳಾರಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಆತನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿರುವುದು ನಮ್ಮ ಕುಟುಂಬಕ್ಕೆ ತೀವ್ರ ಬೇಸರ ಮೂಡಿಸಿದೆ' ಎಂದು ತಿಳಿಸಿದ್ದಾರೆ.

ಘಟನೆಯ ಸತ್ಯಾಂಶ:

ಪವನ್ ನೆಜ್ಜೂರು ಅವರು ಜನವರಿ 1ರಂದು ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಲೋಕಾಯುಕ್ತ ಪೊಲೀಸರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಗರದಲ್ಲಿ ಗಲಭೆ ಸಂಭವಿಸಿತು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪವನ್, ಪರಿಸ್ಥಿತಿ ನಿಭಾಯಿಸಲು ಶ್ರಮಿಸಿದರು. ಬೆಳಗಿನ ಜಾವದವರೆಗೂ ಮೃತರ ಅಂತ್ಯಕ್ರಿಯೆಯ ಬಂದೋಬಸ್ತ್‌ನಲ್ಲಿ ಸಕ್ರಿಯರಾಗಿದ್ದರು ಎಂಬುದು ಅಲ್ಲಿನ ಜನರಿಗೆ ತಿಳಿದಿದೆ ಎಂದು ಉದಯಶಂಕರ್ ನೆಜ್ಜೂರು ವಿವರಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ

'ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಂತಹ ಘಟನೆ ನಡೆದದ್ದು ಮತ್ತು ಅನಿರೀಕ್ಷಿತವಾಗಿ ಅಮಾನತು ಶಿಕ್ಷೆ ಎದುರಿಸಬೇಕಾಗಿ ಬಂದದ್ದು ಆತನಿಗೆ ಆಘಾತ ತಂದಿರುವುದು ನಿಜ. ಆದರೆ, ಆತ ಯಾವುದೇ ಕಾರಣಕ್ಕೂ ಆತ್ಮ*ಹತ್ಯೆಯಂತಹ ಹೇಡಿತನದ ಪ್ರಯತ್ನ ಮಾಡಿಲ್ಲ. ಅತೀವ ಮಾನಸಿಕ ಒತ್ತಡದ ಕಾರಣ ಆತನಿಗೆ ಸದ್ಯ ವಿಶ್ರಾಂತಿಯ ಅಗತ್ಯವಿದೆ. ಆದರೆ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳು ಆತನ ಭವಿಷ್ಯ ಮತ್ತು ಮರ್ಯಾದೆಗೆ ಧಕ್ಕೆ ತರುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಮನವಿ

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ಅಮಾನತು ಶಿಕ್ಷೆ ಅನುಭವಿಸುತ್ತಿರುವ ತನ್ನ ಮಗನ ಪ್ರಕರಣವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಉದಯಶಂಕರ್ ವಿನಂತಿಸಿದ್ದಾರೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡದೆ, ಒಬ್ಬ ದಕ್ಷ ಅಧಿಕಾರಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.

ವಿಷದ ಮಾತ್ರೆ ಸೇವಿಸಿದ್ದರೆಂದು ಸುದ್ದಿ ವೈರಲ್:
ಬಳ್ಳಾರಿಯ ಗಲಭೆ ನಡೆದ ನಂತರ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾದ ಬೆನ್ನಲ್ಲಿಯೇ ಯಾರನ್ನಾದರೂ ಒಬ್ಬರನ್ನು ಬಲಿಪಶು ಮಾಡಬೇಕೆಂದು ನಿರ್ಧಾರ ಮಾಡಿಯಾಗಿತ್ತು. ಅದಕ್ಕೆ ಸಿಕ್ಕಿದ್ದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು. ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಅಧಿಕಾರಿ ಸ್ವೀಕರಿಸಿ 24 ಗಂಟೆಗೂ ಮೊದಲೇ ಈ ಘಟನೆ ನಡೆದಿದ್ದು,  ಒಬ್ಬ ಪೊಲೀಸ್ ಪೇದೆಯ ರೀತಿಯಲ್ಲಿ ಗಲಾಟೆ ಮಧ್ಯ ಭಾಗದಲ್ಲಿ ನಿಂತುಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ಆದರೆ, ಕೈಮೀರಿ ಕೈ-ಕಾರ್ಯಕರ್ತರೊಬ್ಬರ ಸಾವಾಗಿದೆ. 

ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಪವನ್ ನೆಜ್ಜೂರು ಅವರು ಸ್ಥಳದಲ್ಲಿರಲಿಲ್ಲ, ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ, ಕರ್ತವ್ಯಲೋಪ ಆಧಾರದಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ಮನನೊಂದಿದ್ದ ಐಪಿಎಸ್ ಅಧಿಕಾರಿ ತುಮಕೂರಿನ ಫಾರ್ಮ್‌ಹೌಸ್‌ಗೆ ಬಂದು ವಿಷದ ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದರು ಎಂದು ವದಂತಿ ಹಬ್ಬಿಸಿದ್ದರು. ಜೊತೆಗೆ, ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳೂ ಹಬ್ಬಿದ್ದವು. ಇದರ ಬೆನ್ನಲ್ಲಿಯೇ ಅವರ ತಂದೆ ಉದಯಶಂಕರ್ ಸ್ಪಷ್ಟೀಕರಣ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್ ಹಾರಿಸಿದ ಗುಂಡೇಟಿಗೆ ಕೈ ಕಾರ್ಯಕರ್ತ ಬಲಿ! ಪಂಜಾಬಿನ ಇಬ್ಬರ ಬಂಧನ
ಕೆಎಸ್ಸಾರ್ಟಿಸಿ : ಬೆಂಗಳೂರು ಬಸ್ ಪ್ರಯಾಣದರ ಕಡಿತ