ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳಿದ್ದ ಬಳ್ಳಾರಿ ಜಿಲ್ಲೆಯ 30 ರೈತರು ಕಾಶಿಯಲ್ಲಿ ಅತಂತ್ರವಾಗಿದ್ದಾರೆ.
ಬೆಂಗಳೂರು, [ಡಿ.04] ನವೆಂಬರ್ 30ರಂದು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳಿದ್ದ ಬಳ್ಳಾರಿ ಜಿಲ್ಲೆಯ 30 ರೈತರು ಕಾಶಿಯಲ್ಲಿ ಅತಂತ್ರವಾಗಿದ್ದಾರೆ.
ದೆಹಲಿ ಪ್ರತಿಭಟನೆಗೆ ತೆರಳಿದ್ದ ರೈತರು ಬಳಿಕ ಕಾಶಿಗೆ ತೆರಳಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕಾಶಿಯಿಂದ ಬಿಡಬೇಕಾಗಿದ್ದ ರೈಲು 14 ತಾಸು ತಡವಾದ ಹಿನ್ನಲೆಯಲ್ಲಿ ರೈತರು ಬಳ್ಳಾರಿಗೆ ಬರಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ 30 ರೈತರೊಂದಿಗೆ ಇರುವ ಸಂಘದ ಜಿಲ್ಲಾಧ್ಯಕ್ಷ ಗೋಣಿಬಸಪ್ಪ ಕನ್ನಡಪ್ರಭ ಜೊತೆ ಮಾತನಾಡಿ, ಪ್ರತಿಭಟನೆಗಾಗಿ ಹೊಸಪೇಟೆಯಿಂದ ನ.27ರಂದು ಬಿಟ್ಟೆವು. 29ರಂದು ರಾತ್ರಿ ತಲುಪಿ, ರೈಲ್ವೆ ನಿಲ್ದಾಣದಲ್ಲಿಯೇ ತಂಗಿದೆವು.
30ರಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಅಂದು ಅಲ್ಲಿಯೇ ವಾಸ್ತವ್ಯ ಹೂಡಿದೆವು. ಡಿ.1ರಂದು ದೆಹಲಿ ವೀಕ್ಷಣೆ ಮಾಡಿ ಕಾಶಿಗೆ ತೆರಳಬೇಕಾಗಿತ್ತು. ಇದಕ್ಕಾಗಿಯೇ ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು.
ಸಂಜೆ 6.30ಕ್ಕೆ ಬಿಡಬೇಕಾದ ರೈಲು ಮರುದಿನ ಬೆಳಗಿನ ಜಾವ 2ರಂದು ಬಿಟ್ಟು, ಸಂಜೆ 4.30ಕ್ಕೆ ತಲುಪಿತು. ನಾವು ಕಾಶಿಯಲ್ಲಿ ಡಿ.2ರಂದು ಬೆಳಗ್ಗೆ 6 ಗಂಟೆಗೆ ಹತ್ತಬೇಕಾಗಿತ್ತು.
ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿಗದಿತ ಟ್ರೈನ್ ತಪ್ಪಿತು. ಈ ಕುರಿತು ರೈಲ್ವೆ ಅಧಿಕಾರಿಗಳನ್ನು ವಿಚಾರಿಸಿದರೆ, ಯಾರೂ ಸ್ಪಂದಿಸುತ್ತಿಲ್ಲ. ಹಣವೂ ಹಿಂತಿರುಗಿಸುತ್ತಿಲ್ಲ.
ನಮ್ಮ ಬಳಿ ಹಣವಿಲ್ಲ. ಏನು ಮಾಡಬೇಕು ಎಂದೂ ದೋಚುತ್ತಿಲ್ಲ. ಸಂಸದ ಉಗ್ರಪ್ಪ ಅವರನ್ನು ಸಂಪರ್ಕಿಸಿದ್ದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.