ಬಳ್ಳಾರಿ - ಗುಂಡೇಟಿಗೆ ಯುವಕ ಬಲಿ - ನಗರದಲ್ಲಿ 144 ಸೆಕ್ಷನ್ ಜಾರಿ

Kannadaprabha News   | Kannada Prabha
Published : Jan 02, 2026, 05:54 AM IST
ballari clash

ಸಾರಾಂಶ

ಶನಿವಾರ ಪ್ರತಿಷ್ಠಾಪನೆ ಆಗಲಿರುವ ವಾಲ್ಮೀಕಿ ಪ್ರತಿಮೆ ಸಂಬಂಧ ಬ್ಯಾನರ್‌ ಕಟ್ಟುವ ವಿಚಾರವಾಗಿ ಬಳ್ಳಾರಿಯಲ್ಲಿ ರಾದ್ಧಾಂತವೇ ನಡೆದುಹೋಗಿದೆ. ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಸಾವಿರಾರು ಬೆಂಬಲಿಗರು ಬಡಿದಾಡಿಕೊಂಡಿದ್ದಾರೆ

ಬಳ್ಳಾರಿ : ಶನಿವಾರ ಪ್ರತಿಷ್ಠಾಪನೆ ಆಗಲಿರುವ ವಾಲ್ಮೀಕಿ ಪ್ರತಿಮೆ ಸಂಬಂಧ ಬ್ಯಾನರ್‌ ಕಟ್ಟುವ ವಿಚಾರವಾಗಿ ಬಳ್ಳಾರಿಯಲ್ಲಿ ರಾದ್ಧಾಂತವೇ ನಡೆದುಹೋಗಿದೆ. ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಸಾವಿರಾರು ಬೆಂಬಲಿಗರು ಬಡಿಗೆ, ಕಬ್ಬಿಣದ ರಾಡ್‌, ಕಲ್ಲು ಹಿಡಿದು ಬಡಿದಾಡಿಕೊಂಡಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಗೋಲಿಬಾರ್‌ ನಡೆಸಿದ್ದಾರೆ. ಈ ವೇಳೆ ಗುಂಡೇಟಿಗೆ ಓರ್ವ ಯುವಕ ಬಲಿಯಾಗಿದ್ದಾನೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿ ಹುಸೇನ ನಗರದ ರಾಜಶೇಖರ (28) ಎಂದು ಹೇಳಲಾಗಿದೆ. ಆತ ತಮ್ಮ ಬೆಂಬಲಿಗ ಎಂದು ಕಾಂಗ್ರೆಸ್‌ ಶಾಸಕ ನಾರಾ ಭರತರಡ್ಡಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಬಿಜೆಪಿ ಶಾಸಕ ಜನಾರ್ದನ ರಡ್ಡಿ ಮನೆ ಬಳಿ ಈ ಘಟನೆ ನಡೆದಿದೆ. ಆದರೆ ಈತ ಬಲಿಯಾಗಿದ್ದು ಪೊಲೀಸರ ಗುಂಡೇಟಿಗೋ? ಸತೀಶ್‌ ರೆಡ್ಡಿ ಖಾಸಗಿ ಅಂಗರಕ್ಷಕರ ಗುಂಡೇಟಿಗೋ ಎಂಬುದು ಗೊತ್ತಾಗಿಲ್ಲ.

ಬ್ಯಾನರ್ ಕಟ್ಟುವ ವಿಚಾರ:

ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಿಮಿತ್ತ ನಗರದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ ಶಾಸಕ ನಾರಾ ಭರತ ರಡ್ಡಿ ಭಾವಚಿತ್ರವಿದ್ದ ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಅದರಂತೆ ಬಿಜೆಪಿ ಶಾಸಕ ಜನಾರ್ದನ ರಡ್ಡಿ ಮನೆಯ ಎದುರಿನ ಜಾಗದಲ್ಲೂ ಕಟ್ಟಲಾಗಿತ್ತು. ಅದನ್ನು ಕಂಡ ಜನಾರ್ದನ ರೆಡ್ಡಿ ಆ ಬ್ಯಾನರ್‌ ತೆರವುಗೊಳಿಸಿದ್ದಾರೆ. ಅದು ಘರ್ಷಣೆಗೆ ಕಾರಣವಾಗಿದೆ.

ಬ್ಯಾನರ್‌ ತೆರವುಗೊಳಿಸಿದ ಸುದ್ದಿ ತಿಳಿದ ಭರತ್ ರೆಡ್ಡಿ ಬೆಂಬಲಿಗ ಎನ್ನಲಾದ ಸತೀಶ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಮನೆ ಎದುರು ರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ದರ್ಪದಿಂದ ಪುನಃ ಬ್ಯಾನರ್ ಕಟ್ಟಿಸಿದರು ಎನ್ನಲಾಗಿದೆ. ಗಲಾಟೆ ಮಾಡುತ್ತಿರುವುದನ್ನು ತಿಳಿದು ಸ್ಥಳಕ್ಕೆ ಬಂದ ಶ್ರೀರಾಮುಲು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಅವರ ಮಾತು ಕೇಳದ ಭರತ ರಡ್ಡಿ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದಾರೆ. ಅತ್ತ ಜನಾರ್ದನ ರಡ್ಡಿ ಬೆಂಬಲಿಗರೂ ಘರ್ಷಣೆಗೆ ಇಳಿದಿದ್ದಾರೆ. ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಷಯ ತಿಳಿದು ಜನಾರ್ದನ ರೆಡ್ಡಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಆ ಗುಂಡಿನ ಖಾಲಿ ಕೊಳವೆ ಪ್ರದರ್ಶಿಸಿದ ಜನಾರ್ದನ ರೆಡ್ಡಿ ಇದು ನನ್ನ ಹತ್ಯೆಗೆ ನಡೆದ ಯತ್ನ ಎಂದು ಆರೋಪಿಸಿ ತಮ್ಮ ಗುಂಪಿನೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆದರೆ ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ.

ಈ ವಿಷಯ ತಿಳಿದು ಶಾಸಕ ಭರತ್ ರೆಡ್ಡಿ ಅವರ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಬಂದಿದ್ದಾರೆ. ನಂತರ ನಗರದ ಎಸ್ಪಿ ಸರ್ಕಲ್‌ನಿಂದ ಜನಾರ್ದನ ರೆಡ್ಡಿ ನಿವಾಸಕ್ಕೆ ದೊಣ್ಣೆ, ಕೋಲು, ಕಟ್ಟಿಗೆ, ಕಲ್ಲುಗಳೊಂದಿಗೆ ಬಂದು ದಾಳಿ ನಡೆಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿಯ ನಿವಾಸದ ಕಿಟಕಿ ಗಾಜುಗಳು ಹಾನಿಗೀಡಾಗಿವೆ. ಪೊಲೀಸರು ಮಧ್ಯಪ್ರವೇಶಿಸಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಗೋಲಿಬಾರ್‌ ನಡೆದಿದೆ.

ಈ ಮಧ್ಯೆ ಐಜಿಪಿ ವರ್ತಿಕಾ ಕಟಿಯಾರ್‌ ಸೇರಿ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಶಾಸಕ ನಾರಾ ಭರತ ರೆಡ್ಡಿ ಹಾಗೂ ಬೆಂಬಲಿಗರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಂಧಿಸಬೇಕೆಂದು ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕುಳಿತಿದ್ದಾರೆ. ಅವರ ಮನವೊಲಿಸಲು ಪೊಲೀಸರು, ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ನನ್ನ ಹತ್ಯೆಗೆ ಸಂಚು

ನನ್ನ ಹತ್ಯೆ ಸಂಚು ನಡೆದಿದೆ. ಬಳ್ಳಾರಿಯಲ್ಲಿ ಕಾನೂನು- ವ್ಯವಸ್ಥೆ ಪೂರ್ಣ ಕುಸಿದಿದೆ. ಗೂಂಡಾ ರಾಜ್ಯವಾಗಿದೆ. ಪೊಲೀಸರು ಅಸಹಾಯಕರಾಗಿದ್ದಾರೆ. ಭರತ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ದೊಡ್ಡ ಕ್ರಿಮಿನಲ್ ಕ್ರಿಮಿನಲ್. ಈಗ ಅವರ ಮಗ ಭರತ್ ರೆಡ್ಡಿ ರೌಡಿ ಗ್ಯಾಂಗ್ ಕಟ್ಟಿಕೊಂಡಿದ್ದಾರೆ.

-ಗಾಲಿ ಜನಾರ್ದನ ರಡ್ಡಿ, ಗಂಗಾವತಿ ಶಾಸಕ

ಸೇಡು ತೀರಿಸುವೆ

ಬಿಜೆಪಿ ಹಾಗೂ ಜನಾರ್ದನ ರೆಡ್ಡಿ ವಾಲ್ಮೀಕಿಗೆ ಅವಮಾನ ಮಾಡಿದ್ದು, ಇದರ ಸೇಡನ್ನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಇದೊಂದು ಪೂರ್ವ ಯೋಜಿತ ಕೃತ್ಯ. ನಾಡಿದ್ದು ಕಾರ್ಯಕ್ರಮ ನಡೆಯದಂತೆ ತಡೆಯುವ ಯತ್ನ.

- ನಾರಾ ಭರತ ರೆಡ್ಡಿ, ಬಳ್ಳಾರಿ ಶಾಸಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬಳ್ಳಾರಿ - ಗುಂಡೇಟಿಗೆ ಯುವಕ ಬಲಿ - ನಗರದಲ್ಲಿ 144 ಸೆಕ್ಷನ್ ಜಾರಿ
ಗಣಿನಾಡಲ್ಲಿ ರೆಡ್ಡಿಗಳ ರಕ್ತಚರಿತ್ರೆ: ಜನಾರ್ದನ ರೆಡ್ಡಿ ತಲೆಗೆ ಗುರಿ ಇಟ್ಟಿದ್ದಾರಾ ಬಿಹಾರದ ರೌಡಿಗಳು? ಬಳ್ಳಾರಿಯಲ್ಲಿ ಬುಲೆಟ್ ಸದ್ದು!