
ಶಿವಮೊಗ್ಗ (ಜ.3):ಬಳ್ಳಾರಿಯಲ್ಲಿ ನಡೆದ ಅಚಾತುರ್ಯದ ಘಟನೆಯಿಂದ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಮನನೊಂದು ಅವರು ಆತ್ಮಹತ್ಯೆಗೆ ಯತ್ನಿಸಿರುವುದು ದುರದೃಷ್ಟಕರ ಸಂಸದ ಬಿವೈ ರಾಘವೇಂದ್ರ ಆತಂಕ ವ್ಯಕ್ತಪಡಿಸಿದರು
ಪೊಲೀಸ್ ಇಲಾಖೆಗೆ ಸರ್ಕಾರ ಶಕ್ತಿ ತುಂಬಬೇಕಿತ್ತು, ಆದರೆ ಇಲ್ಲಿ ಅಧಿಕಾರಿಗೆ ಅಗೌರವ ತೋರಲಾಗಿದೆ. ತನ್ನದೇ ಶಾಸಕರನ್ನು ರಕ್ಷಿಸಲು ಹೋಗಿ ನಿರಪರಾದಿಗಳನ್ನು ಅರೆಸ್ಟ್ ಮಾಡಲಾಗುತ್ತಿದೆ. ಸರ್ಕಾರದ ತಪ್ಪಿನಿಂದಾಗಿ ಒಬ್ಬ ದಕ್ಷ ಅಧಿಕಾರಿ ಸಾಯುವಂತಹ ನಿರ್ಧಾರಕ್ಕೆ ಮುಂದಾಗುವಂತಾಗಿದೆ. ಈಗಲಾದರೂ ಸರ್ಕಾರ ಎಸ್ಪಿಯವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದರು.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಕಾಂಪೌಂಡ್‌ನಲ್ಲಿ ಬುಲೆಟ್‌ಗಳು ಪತ್ತೆಯಾಗಿರುವ ವಿಚಾರವಾಗಿ ಮಾತನಾಡಿದ ಸಂಸದರು, ರೆಡ್ಡಿ ಅವರ ಜೀವ ತೆಗೆಯಲು ಸಂಚು ನಡೆದಿದೆಯೇ ಎಂಬ ಅನುಮಾನ ಕಾಡುತ್ತಿದೆ. ತಪ್ಪು ಮಾಡದವರನ್ನು ತಪ್ಪಿತಸ್ಥರನ್ನಾಗಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಪ್ರಕರಣ ಸಂಪೂರ್ಣ ರಾಜಕೀಯಕರಣಗೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಶಾಸಕ ಭರತ್ ರೆಡ್ಡಿ ಅವರದ್ದು ಬಿಸಿರಕ್ತ, ಅವರು ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೆ ಸರ್ಕಾರ ಮಾತ್ರ ತನ್ನ ಶಾಸಕರ ಪರವಾಗಿ ನಿಂತು ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಕೋಗಿಲು ಬಡಾವಣೆ ಅಕ್ರಮ ನಿವಾಸಿಗಳಿಗೆ ಮನೆ ನೀಡುವುದು ತಪ್ಪು
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿದ ರಾಘವೇಂದ್ರ, ತೆರವುಗೊಂಡವರಿಗೆ ಮತ್ತೆ ಮನೆ ಕಟ್ಟಿಕೊಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು. ಕೋಗಿಲು ಬಡಾವಣೆಯಲ್ಲಿ ಇರುವವರ ಬಳಿ ಸ್ಪಷ್ಟ ದಾಖಲೆಗಳಿಲ್ಲ. ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯನವರು ಅಪಾರ್ಟ್ಮೆಂಟ್ ಕಟ್ಟಿಕೊಡಲು ಮುಂದಾಗಿದ್ದಾರೆ. ರಾಜ್ಯದ ತೆರಿಗೆ ಹಣವನ್ನು ಅಕ್ರಮ ನಿವಾಸಿಗಳಿಗೆ ಬಳಸುವುದು ಸರಿಯಲ್ಲ. ಅವರಿಗೆ ಮನೆ ಕೊಡುವ ಬದಲು ಅವರ ಊರುಗಳಿಗೆ ಕಳುಹಿಸಿಕೊಡಿ. ನಾಳೆ ಆ ಜಾಗ ದೇಶವಿರೋಧಿ ಚಟುವಟಿಕೆಗಳಿಗೆ ತಾಣವಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಇವಿಎಂ ಹಳಿಯುವ ಕಾಂಗ್ರೆಸ್‌ಗೆ ರಾಘವೇಂದ್ರ ಟಾಂಗ್
ಇವಿಎಂ ಬಗ್ಗೆ ಕಾಂಗ್ರೆಸ್ ವ್ಯಕ್ತಪಡಿಸುತ್ತಿರುವ ಸಂಶಯಗಳಿಗೆ ತಿರುಗೇಟು ನೀಡಿದ ಅವರು, ಬ್ಯಾಲೆಟ್ ಪೇಪರ್ ಮೂಲಕ ನಡೆದ ಪಂಚಾಯಿತಿ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ ಎಂಬುದನ್ನು ನೆನಪಿಸಿದರು. ಇವಿಎಂ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವುದು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಅಷ್ಟೇ. ರಾಜ್ಯದಲ್ಲಿ ಲಕ್ಷಾಂತರ ಅನಾಮಧೇಯ ಮತದಾರರಿದ್ದಾರೆ. ನಮ್ಮನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಯಾರೂ ಹೇಳಲು ಸಾಧ್ಯವಾಗದಂತೆ ವ್ಯವಸ್ಥೆ ಪಾರದರ್ಶಕವಾಗಿದೆ. ಜನರ ವಿಶ್ವಾಸ ಇವಿಎಂ ಮೇಲಿದೆ, ಆದರೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಇಂತಹ ಆರೋಪ ಮಾಡುತ್ತಿದೆ, ಎಂದು ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ