
ಬಾಗಲಕೋಟೆ (ಫೆ.21): ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಶಾಂತಿ ಸ್ಥಾಪಿಸಲು ಜಿಲ್ಲಾಡಳಿತ ನಡೆಸಿದ ಎರಡನೇ ಹಂತದ ಶಾಂತಿ ಸಭೆಯೂ ವಿಫಲವಾಗಿದೆ. ಸಭೆಗೆ ಹಿಂದೂ ಸಮುದಾಯದ ಮುಖಂಡರು ಬಾರದೆ ಗೈರಾದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಇಂದು ಮಹತ್ವದ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಸಂಗಪ್ಪ, ಎಸ್ಪಿ ಸಿದ್ದಾರ್ಥ ಗೋಯಲ್, ಸಿಇಓ ಶಶಿಧರ್ ಕುರೇರ್ ಮತ್ತು ವಿಶೇಷ ಆಹ್ವಾನಿತರಾಗಿ ಮಾಜಿ ಎಸ್ಪಿ ಅಮರನಾಥ್ ರೆಡ್ಡಿ ಅವರು ಭಾಗವಹಿಸಿದ್ದರು. ಉಭಯ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದರು.
ಸಭೆ ಆರಂಭಕ್ಕೆ ಕ್ಷಣಗಣನೆ ಆರಂಭವಾದರೂ ಹಿಂದೂ ಸಮುದಾಯದ ಮುಖಂಡರು ಸಭಾಂಗಣಕ್ಕೆ ಆಗಮಿಸಲಿಲ್ಲ. ಕೇವಲ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರ ಡಿಸಿ ಸಭಾಂಗಣದಲ್ಲಿ ಹಾಜರಿದ್ದರು. ಹಿಂದೂ ಮುಖಂಡರ ಅನುಪಸ್ಥಿತಿಯಿಂದಾಗಿ ಸಭೆಯ ಮೂಲ ಉದ್ದೇಶ ಈಡೇರದೆ ಚರ್ಚೆ ಅರ್ಧಕ್ಕೆ ನಿಂತಂತಾಯಿತು.
ಆರೋಪಿಗಳ ಬಂಧನಕ್ಕೆ ಮುಸ್ಲಿಂ ಮುಖಂಡರ ಪಟ್ಟು
ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. 'ಕಲ್ಲು ತೂರಾಟ ನಡೆಸಿದವರು ಮತ್ತು ಬೆಂಕಿ ಹಚ್ಚಿದ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು' ಎಂದು ಅವರು ಒತ್ತಾಯಿಸಿದರು. ಕಠಿಣ ಕ್ರಮದ ಭರವಸೆಯನ್ನು ಅಧಿಕಾರಿಗಳಿಂದ ಪಡೆದ ನಂತರ ಮುಸ್ಲಿಂ ಮುಖಂಡರು ಸಭೆಯಿಂದ ಹೊರನಡೆದರು.
ಶಾಂತಿ ಮಂತ್ರ ಪಠಿಸಿದ ಮುಖಂಡರು: ಜಿಲ್ಲಾಡಳಿತದ ಭರವಸೆ
ಸಭೆಯ ನಂತರ ಮಾತನಾಡಿದ ಮುಸ್ಲಿಂ ಮುಖಂಡರು, 'ನಾವು ಯಾವುದೇ ಸಂದರ್ಭದಲ್ಲೂ ಎಲ್ಲಾ ಸಮುದಾಯದ ಜನರೊಂದಿಗೆ ಸೌಹಾರ್ದತೆಯಿಂದ ಇರಲು ಸಿದ್ಧರಿದ್ದೇವೆ. ಶಾಂತಿ ಮತ್ತು ಭಾಂಧವ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು. ಜಿಲ್ಲಾಡಳಿತವು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದರೂ, ಎರಡೂ ಕಡೆಯವರು ಒಟ್ಟಾಗಿ ಸಭೆಯಲ್ಲಿ ಪಾಲ್ಗೊಳ್ಳದಿರುವುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ