ಬೈ ಎಲೆಕ್ಷನ್ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲಿ ಶುರುವಾಯ್ತು ಮಂತ್ರಿಗಿರಿಗೆ ಲಾಭಿ! ಬಾದಾಮಿಯಿಂದ ಸಿದ್ದರಾಮಯ್ಯ, ಜಮಖಂಡಿಯಿಂದ ನ್ಯಾಮಗೌಡ ಗೆಲ್ಲಿಸಿದ್ದಕ್ಕೆ ಕೈ ಹಿಡಿಯುತ್ತಾ ಋಣ?! ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯಿಂದ ಎಸ್.ಆರ್.ಪಾಟೀಲ, ತಿಮ್ಮಾಪೂರ ತೀವ್ರ ಪೈಪೋಟಿ! ಹಿರಿಯರ ಮಧ್ಯೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡಗೆ ಸಚಿವ ಸ್ಥಾನಕ್ಕೆ ಆಗ್ರಹ
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ನ.11): ರಾಜ್ಯದಲ್ಲಿ ನಡೆದ ಉಪಚುನಾವಣೆ ಬೆನ್ನಲ್ಲೆ ಜಯಗಳಿಸಿದ ವಿಶ್ವಾಸದಲ್ಲಿರೋ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಚಿವ ಸಂಪುಟ ವಿಸ್ತರಣೆಗೆ ಚಿಂತನೆ ನಡೆಸಿರೋ ಮಧ್ಯೆಯೇ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಮಂತ್ರಿಗಿರಿಗೆ ಇನ್ನಿಲ್ಲದ ಲಾಭಿ ಶುರುವಾಗಿದೆ.
ಚಾಮುಂಡೇಶ್ವರಿಯಿಂದ ಸೋತ ಸಿದ್ದರಾಮಯ್ಯನನ್ನ ಜಿಲ್ಲೆಯಿಂದ ಗೆಲ್ಲಿಸಿ ಕೊಟ್ಟಿದ್ದಲ್ಲದೆ, ಜಮಖಂಡಿ ಬೈಎಲೆಕ್ಷನ್ ನಲ್ಲೂ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಜಿಲ್ಲೆಯ ನಾಯಕರು ಮಂತ್ರಿಗಿರಿ ಸಿಗೋ ಆಶಯದಲ್ಲಿದ್ದಾರೆ. ಜಿಲ್ಲೆಯಲ್ಲಿನ ಮಂತ್ರಿಗಿರಿ ಲಾಭಿ ಕುರಿತ ವರದಿ ಇಲ್ಲಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದೇ ತಡ ಬಾಗಲಕೋಟೆ ಜಿಲ್ಲೆ ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಸೇಫ್ ಅಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪೂರ ಸೇರಿದಂತೆ ಅನೇಕರು ಸಿದ್ದರಾಮಯ್ಯನವರನ್ನ ಬಾದಾಮಿಗೆ ಕರೆತಂದು ಗೆಲ್ಲಿಸಿ ಅಭಿಮಾನ ಮೆರೆದಿದ್ರು.
ಇದ್ರಿಂದ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಜಿಲ್ಲೆಗೆ ಸಚಿವ ಸ್ಥಾನ ಸಿಗಬಹುದೆನ್ನವು ಲೆಕ್ಕಾಚಾರ ಇತ್ತು. ಆದರೆ ಆಗ ಆಗಲಿಲ್ಲ. ಆದ್ರೆ ಇದೀಗ ಬೈಎಲೆಕ್ಷನ್ ನಲ್ಲಿಯೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರದಲ್ಲೂ 39 ಸಾವಿರ ಲೀಡ್‌ನಿಂದ ಕಾಂಗ್ರೆಸ್‌ನ್ನ ಗೆಲ್ಲಿಸಿದ್ದು, ಹೀಗಾಗಿ ಈ ಬಾರಿಯಾದ್ರೂ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ಸಿಗಬಹುದೆನ್ನುವ ಲೆಕ್ಕಾಚಾರದಿಂದ ಜಿಲ್ಲೆಯಿಂದ ಮಾಜಿ ಸಚಿವರ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪೂರ ತೀವ್ರ ಲಾಭಿ ನಡೆಸಿದ್ದಾರೆ.
ಆರ್.ಬಿ.ತಿಮ್ಮಾಪೂರ (ಮಾಜಿ ಸಚಿವ)
ಇನ್ನು ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಎದುರಾದಾಗ ಕ್ಷೇತ್ರದ ಹೊಣೆ ಹೊತ್ತ ಡಿಸಿಎಂ ಪರಮೇಶ್ವರ ಮತ್ತು ಮಾಜಿ ಸಿದ್ದರಾಮಯ್ಯ ಜನರ ಮುಂದೆ ಸಿದ್ದು ನ್ಯಾಮಗೌಡರು ಬದುಕಿದ್ದರೆ ಮಂತ್ರಿಯಾಗಿರುತ್ತಿದ್ದರು ಎಂದು ಹೇಳಿ, ಮತ್ತೇ ಜಮಖಂಡಿಯಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಡಿ ಮಂತ್ರಿ ಸ್ಥಾನ ಸಿಗಲಿ ಎಂಬ ಆಶಯವನ್ನ ವ್ಯಕ್ತಪಡಿಸಿದ್ರು.
ಇವೆಲ್ಲವುದರ ಮಧ್ಯೆ ಇದೀಗ ಜಮಖಂಡಿಯಿಂದ ಕಾಂಗ್ರೆಸ್ ಪಕ್ಷದಿಂದ ಸಿದ್ದು ನ್ಯಾಮಗೌಡರ ಪುತ್ರ ಆನಂದ ನ್ಯಾಮಗೌಡ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಕಂಡಿದ್ದು, ಹೀಗಾಗಿ ಹೈಕಮಾಂಡ್ ನಾಯಕರು ಜಮಖಂಡಿ ಶಾಸಕ ಆನಂದ ನ್ಯಾಮಗೌಡಗೆ ಸಚಿವ ಸ್ಥಾನ ನೀಡಲಿ ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ನಿಂಗಪ್ಪ (ಕಾಂಗ್ರೆಸ್ ಮುಖಂಡ)
ಒಟ್ಟಿನಲ್ಲಿ ಸಚಿವ ಸಂಪುಟದ ವಿಸ್ತರಣೆ ನಡೆಯುತ್ತೇ ಎನ್ನುವ ಸುಳಿವಿನ ಬೆನ್ನಲ್ಲೆ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಮಟ್ಟದಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ಈ ಮಧ್ಯೆ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ತಾವು ಗೆದ್ದು ಬಂದ ಜಿಲ್ಲೆಯ ನಾಯಕರಿಗೆ ಗೆಲುವಿನ ಋಣಕ್ಕಾಗಿ ಮಂತ್ರಿಸ್ಥಾನವನ್ನ ಈ ಬಾರಿಯಾದ್ರೂ ಕೊಡಿಸ್ತಾರಾ ಅಂತ ಕಾದು ನೋಡಬೇಕಿದೆ.