
ಬೆಂಗಳೂರು : ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದರೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ‘ಸಂವಿಧಾನದ ಸಂಭಾಷಣೆಗಳು’ ಕುರಿತ ವಿಚಾರ ಸಂಕಿರಣ ನಡೆಸುವ ಮೂಲಕ ಶ್ರೀಗಳಿಗೆ ಮತ್ತು ರಾಜ್ಯ ಸರ್ಕಾರದ ನಿರ್ಧಾರಗಳಿಗೆ ಅಗೌರವ ತೋರಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಒತ್ತಾಯಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ಖೇದಕರ ಸಂಗತಿ. ರಾಜ್ಯದಲ್ಲಿ ಶೋಕಾಚರಣೆ ಇದ್ದರೂ ಸಂವಿಧಾನದ ಸಂಭಾಷಣೆ ಹೆಸರಲ್ಲಿ ಇತರರ ಅಭಿಪ್ರಾಯಗಳಿಗೆ ಬೆಲೆ ಕೊಡದೆ ಮುಂದುವರೆಯಬಹುದು ಅಹಂಭಾವದಲ್ಲಿದ್ದಾರೆ. ಸಂವಿಧಾನ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯನಿಗೂ ಸಂಬಂಧಪಟ್ಟವರು. ಸಿದ್ಧಗಂಗಾ ಶ್ರೀಗಳು ಸಂವಿಧಾನಾತ್ಮಕ ಮೌಲ್ಯಗಳ ಸಾಕಾರಮೂರ್ತಿಯಾಗಿದ್ದರು ಎನ್ನುವುದನ್ನು ಸಚಿವರಿಗೆ ನೆನಪಿಸಿಕೊಡಲು ಬಯಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಗೌರವ ನೀಡದ ಮತ್ತು ತಮ್ಮದೇ ಸರ್ಕಾರದ ನಿರ್ಧಾರಗಳನ್ನು ಗೌರವಿಸದ ಪ್ರಿಯಾಂಕ್ ಖರ್ಗೆ ಅವರು ಸಚಿವ ಸಂಪುಟದಲ್ಲಿರಲು ಅನರ್ಹರು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದಲ್ಲಿ ಸರ್ಕಾರವೇ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇದು ಸಾಧ್ಯವಾಗದೆ ಹೋದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ಶ್ರೀಗಳಿಗೆ ಮತ್ತು ಲಕ್ಷಾಂತರ ಭಕ್ತರಿಗೆ ಅಗೌರವ ತೋರಿದ ಅಪರಾಧ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ