ಮೈಲಿಗೆಯ ಹೆಸರಿನಲ್ಲಿ ಬಾಣಂತಿ ಹಾಗೂ ಮಗುವನ್ನು ಗ್ರಾಮದಿಂದ ಹೊರಗಿಟ್ಟಿದ್ದ ಪರಿಣಾಮ ಹಸುಗೂಸೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆಗೆ ತುಮಕೂರು ತಾಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಸಾಕ್ಷಿಯಾಗಿದೆ.
ತುಮಕೂರು (ಜು.27): ಮೈಲಿಗೆಯ ಹೆಸರಿನಲ್ಲಿ ಬಾಣಂತಿ ಹಾಗೂ ಮಗುವನ್ನು ಗ್ರಾಮದಿಂದ ಹೊರಗಿಟ್ಟಿದ್ದ ಪರಿಣಾಮ ಹಸುಗೂಸೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆಗೆ ತುಮಕೂರು ತಾಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಸಾಕ್ಷಿಯಾಗಿದೆ. ಗ್ರಾಮದ ಗೊಲ್ಲರಹಟ್ಟಿಯ ಸಿದ್ದೇಶ್ ಮತ್ತು ವಸಂತಾ ದಂಪತಿಗೆ ಜು.14ರಂದು ಅವಳಿ ಮಕ್ಕಳು ಹುಟ್ಟಿದ್ದವು. ಆದರೆ ಉಸಿರಾಟದ ತೊಂದರೆಯಿಂದ ಒಂದು ಗಂಡು ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿತ್ತು. ಬದುಕುಳಿದ ಹೆಣ್ಣು ಮಗುವಿನೊಂದಿಗೆ ಊರಿಗೆ ಬಂದ ಬಾಣಂತಿ ವಸಂತಾಳನ್ನು ಗೊಲ್ಲ ಸಮುದಾಯದ ಪದ್ಧತಿಯಂತೆ ಸೂತಕದ ಹಿನ್ನೆಲೆಯಲ್ಲಿ ಊರಿನ ಹೊರಗಿದ್ದ ಗುಡಿಸಲಿನಲ್ಲಿ ಇರಿಸಲಾಗಿತ್ತು.
ಕಳೆದ ಕೆಲ ದಿನಗಳಿಂದ ಭಾರೀ ಗಾಳಿ ಸಹಿತ ಮಹಿಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಗುವಿನ ಉಸಿರಾಟದಲ್ಲಿ ತೊಂದರೆ ಉಂಟಾಗಿ ಅಸ್ವಸ್ಥಗೊಂಡ ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿದೆ. ಜು.21ರಂದು ಬಾಣಂತಿ ಮತ್ತು ಮಗುವನ್ನು ಊರ ಹೊರಗಿನ ಗುಡಿಸಲಲ್ಲಿ ಇರಿಸಲಾಗಿತ್ತು. ನಾಲ್ಕೈದು ದಿನಗಳಿಂದ ಮಗು ತನ್ನ ತಾಯಿ ಜತೆಗೆ ಅಲ್ಲೇ ಇತ್ತು. ಆದರೆ ವಿಪರೀತ ಶೀತ ಗಾಳಿ ಬೀಸುತ್ತಿದ್ದುದರಿಂದ ನವಜಾತ ಶಿಶುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.
ಸಂತ್ರಸ್ತರಿಗೆ ಕೂಡಲೇ ಸ್ಪಂದಿಸಿ, ಪರಿಹಾರ ಕಲ್ಪಿಸಿ: ಸಚಿವ ಮಧು ಬಂಗಾರಪ್ಪ
ಅಲ್ಲದೆ, ಮಗು ಅವಧಿ ಪೂರ್ವ ಹುಟ್ಟಿದ್ದರಿಂದ ತೂಕ ಕೂಡ ಕಡಿಮೆ ಇತ್ತು. ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸಿದ್ದೇಶ್, ಆರೋಗ್ಯಾಧಿಕಾರಿ ಮೋಹನ್ ಕುಮಾರ್ ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿಕೊಟ್ಟು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಬಾಣಂತಿ ವಸಂತಾಳನ್ನೂ ಯಾವುದೇ ತೊಂದರೆಯಾಗದಂತೆ ಸಂಜೆಯೊಳಗೆ ಮನೆಯೊಳಗೆ ಸೇರಿಸುವಂತೆ ಮನೆಯವರಿಗೆ ತಾಕೀತು ಮಾಡಿದ್ದಾರೆ.
ಹಿಂದಿನಿಂದ ನಡೆದು ಬಂದ ಮೌಢ್ಯ: ಗೊಲ್ಲರಹಟ್ಟಿಯಲ್ಲಿ ಮಗು ಹೆತ್ತಾಗ, ಹೆಣ್ಣು ಮಗಳು ಋುತಿಮತಿಯಾದಾಗ ಆಕೆಯನ್ನು ಸೂತಕದ ಹೆಸರಿನಲ್ಲಿ ಗೊಲ್ಲರಹಟ್ಟಿಹೊರಗಿನ ಪ್ರದೇಶಗಳಲ್ಲಿ ಗುಡಿಸಲಿನಲ್ಲಿ ಇರಿಸಲಾಗುತ್ತದೆ. ಇಂಥ ಮೌಢ್ಯದ ವಿರುದ್ಧ ದಶಕಗಳಿಂದಲೂ ಹೋರಾಟ ನಡೆದಿದ್ದರೂ ಮೌಢ್ಯಕ್ಕೆ ಕಡಿವಾಣ ಬಿದ್ದಿರಲಿಲ್ಲ. ಈ ಹಿಂದೆ ಕೂಡ ಗುಡಿಸಲಿನಲ್ಲಿದ್ದ ಮಗು, ತಾಯಿಗೆ ಹಾವು, ಚೇಳು ಕಚ್ಚಿ ಮೃತಪಟ್ಟಿರುವ ಪ್ರಕರಣಗಳು ನಡೆದಿದ್ದವು. ಈಗ ಮೈಲಿಗೆ ಮೌಢ್ಯಕ್ಕೆ ನವಜಾತ ಶಿಶು ಬಲಿಯಾಗಿದೆ.
ದಂಪತಿಯ ಮನಸ್ಸು ಬದಲು: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಸಿದ್ದೇಶ್, ಗ್ರಾಮಸ್ಥರ ಜೊತೆಗೆ ಚರ್ಚೆ ನಡೆಸಿದ್ದೇವೆ. ಆರೋಗ್ಯಾಧಿಕಾರಿಗಳು ಹಾಗೂ ನಮ್ಮ ಕಂದಾಯ ಇಲಾಖೆ ಅಧಿಕಾರಿಗಳೂ ಮಾತುಕತೆ ನಡೆಸಿದ್ದೇವೆ. ಇದೀಗ ವಸಂತಾ ದಂಪತಿ ಮನಸ್ಸು ಬದಲಾಯಿಸಿದ್ದಾರೆ. ಮೌಢ್ಯ ಕೈಬಿಡಲು ನಿರ್ಧರಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಈ ರೀತಿಯ ಸಂಪ್ರದಾಯ ಆಚರಣೆ ಮಾಡದಂತೆ ತಿಳಿ ಹೇಳಿದ್ದೇವೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದ್ದರು. ಆಗ ಅವರು ಮನ ಬದಲಾಯಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದೆ ಗ್ರಾಮದಲ್ಲಿ ಕೃಷ್ಣ ಕುಟೀರ ಕಟ್ಟಲು (ಮಹಿಳೆಯರು ಉಳಿದುಕೊಳ್ಳಲು) ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಿದ್ದರಾಮಯ್ಯ
ಈ ಸಂಬಂಧ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ತಿಳಿಸಿದ ಅವರು, ಇನ್ಮುಂದೆ ಈ ರೀತಿ ಘಟನೆಗಳು ಆಗದಂತೆ ಕ್ರಮ ವಹಿಸುತ್ತೇವೆ. ಯಾರೂ ಕೂಡ ಮೌಢ್ಯಾಚರಣೆ ಮಾಡಬಾರದು ಎಂದರು. ಗ್ರಾಮಕ್ಕೆ ಆರ್‌ಸಿಎಚ್ ಮೋಹನ್, ಟಿಎಚ್‌ಓ ಲಕ್ಷ್ಮೀಕಾಂತ್ ಸೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಬಾಣಂತಿಯನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳಲು ತಿಳಿ ಹೇಳಿದರು.