ಬ್ಯಾಲಟ್ ಪೇಪರ್ ಅಕ್ರಮ ಈಗ ಸುಲಭವಲ್ಲ..: ಮಾಜಿ ಚುನಾವಣಾ ಆಯುಕ್ತರೊಂದಿಗೆ ಮುಖಾಮುಖಿ ಸಂದರ್ಶನ

Ravi Janekal   | Kannada Prabha
Published : Sep 11, 2025, 07:02 AM ISTUpdated : Sep 11, 2025, 07:12 AM IST
B. Basavaraju, former commissioner of State Election Commission said that ballot paper illegality is not easy now

ಸಾರಾಂಶ

ಇವಿಎಂ ಬಳಕೆ ಬದಲು ಬ್ಯಾಲೆಟ್‌ ಪೇಪರ್‌ ಬಳಸುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಮಾಜಿ ಚುನಾವಣಾ ಆಯುಕ್ತ ಬಿ.ಬಸವರಾಜು ಅವರೊಂದಿಗೆ ಚರ್ಚೆ. ತಂತ್ರಜ್ಞಾನದ ಯುಗದಲ್ಲಿ ಹಳೆಯ ಪದ್ಧತಿಗೆ ಮರಳುವುದು ಎಷ್ಟು ಸರಿ? ಚುನಾವಣಾ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತು ಸವಾಲುಗಳ ವಿಶ್ಲೇಷಣೆ.

ಮುಖಾಮುಖಿ

ಬಿ.ಬಸವರಾಜು, ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ

ಮೋಹನ ಹಂಡ್ರಂಗಿ

ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ತಂತ್ರಜ್ಞಾನ ಆಧಾರಿತ ಇವಿಎಂ(ಎಲೆಕ್ಟ್ರಾನಿಕ್‌ ಮತಯಂತ್ರ) ದುರುಪಯೋಗ, ಮತಗಳವು, ಮತಯಂತ್ರ ತಿರುಚುವುದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪದೋಷಗಳ ಬಗ್ಗೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಕೇಂದ್ರ ಚುನಾವಣಾ ಆಯೋಗದ ಕುರಿತೇ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆಯೇ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್‌ ಬಳಸಲು ತೀರ್ಮಾನ ಕೈಗೊಂಡಿದೆ. ಈ ಗದ್ದಲದ ನಡುವೆಯೇ ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಬಿ.ಬಸವರಾಜು ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನಕ್ಕೆ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಸಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆಯಲ್ವಾ?

ಇದು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಕೈಗೊಂಡಿರುವ ನಿರ್ಣಯ. ಸರ್ಕಾರ ಕಾನೂನು ತಿದ್ದುಪಡಿ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡುತ್ತದೆ. ಇದರ ವಿರುದ್ಧ ರಾಜ್ಯ ಚುನಾವಣಾ ಆಯೋಗ ಯಾವುದೇ ತಕರಾರು ತೆಗೆಯಲು ಅವಕಾಶವಿಲ್ಲ. ಕಾನೂನು ಪ್ರಕಾರ ಬ್ಯಾಲೆಟ್‌ ಪೇಪರ್‌ ಬಳಸಿಕೊಂಡು ಚುನಾವಣೆ ನಡೆಸಬೇಕು. ಇವಿಎಂ ಬರುವ ಮುನ್ನ ಬ್ಯಾಲೆಟ್‌ ಪೇಪರ್‌ ಪದ್ಧತಿಯಲ್ಲೇ ಚುನಾವಣೆಗಳು ನಡೆಯುತ್ತಿದ್ದವು. ಈಗ ಮತ್ತೆ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗಕ್ಕೆ ಕಷ್ಟವೇನಲ್ಲ.

ತಂತ್ರಜ್ಞಾನದ ಯುಗದಲ್ಲಿ ಇವಿಎಂ ಬಳಕೆ ಬದಿಗೊತ್ತಿ ಹಳೆಯ ಬ್ಯಾಲೆಟ್‌ ಪೇಪರ್‌ ಪದ್ಧತಿಗೆ ಮರುಳುವುದು ಎಷ್ಟು ಸರಿ?

ಇಲ್ಲಿ ಇವಿಎಂ ಅಥವಾ ಬ್ಯಾಲೆಟ್‌ ಪೇಪರ್‌ ಬಳಕೆ ಮುಖ್ಯವಲ್ಲ. ಜನರ ನಂಬಿಕೆ ಮುಖ್ಯವಾಗುತ್ತದೆ. ಈ ಹಿಂದೆ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಯಿಂದ ಅಧಿಕ ಮಾನವ ಶಕ್ತಿ, ಹೆಚ್ಚಿನ ಪೇಪರ್ ಬಳಕೆ, ಅಧಿಕ ಸಮಯ, ಅಧಿಕ ಸಾರಿಗೆ ವೆಚ್ಚ, ಮತ ಎಣಿಕೆ ಹಾಗೂ ಫಲಿತಾಂಶ ವಿಳಂಬದ ಸಮಸ್ಯೆಗಳು ಆಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಸುಧಾರಣಾ ಕ್ರಮವಾಗಿ ಮತದಾನಕ್ಕೆ ತಂತ್ರಜ್ಞಾನ ಆಧಾರಿತ ಇವಿಎಂ ವ್ಯವಸ್ಥೆ ಪರಿಚಯಲಾಗಿತ್ತು. ಇವಿಎಂ ಬಳಕೆಯಿಂದ ಮಾನವ ಶಕ್ತಿ, ಪೇಪರ್‌ ಬಳಕೆ ಕಡಿಮೆಯಾಗಲಿದೆ. ಒಂದೇ ದಿನ ಮತ ಎಣಿಕೆ ನಡೆದು, ಅದೇ ದಿನ ಫಲಿತಾಂಶ ಹೊರ ಬೀಳುತ್ತಿದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದ ಕಾನೂನಾತ್ಮಕ ತೀರ್ಮಾನಗಳನ್ನು ರಾಜ್ಯ ಚುನಾವಣಾ ಆಯೋಗ ಗೌರವಿಸಬೇಕು. ಕಾನೂನಿನ ಅಡಿ ಚುನಾವಣೆ ನಡೆಸಬೇಕಾಗುತ್ತದೆ.

ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್‌ ಪೇಪರ್‌ ಮತದಾನಕ್ಕೆ ಅವಕಾಶ ನೀಡಿದರೆ ಗೊಂದಲಕ್ಕೆ ಕಾರಣವಾಗುವುದಿಲ್ಲವೇ?

ಇದು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಅನ್ವಯ. ಇದರಲ್ಲಿ ಗೊಂದಲ ಏನಿಲ್ಲ. ಏಕೆಂದರೆ, ಹಿಂದೆ ಇದೇ ಪದ್ಧತಿಯಲ್ಲಿ ಮತದಾನ ನಡೆಯುತ್ತಿತ್ತು. ಜನರಿಗೂ ಇದು ಪರಿಚಿತ ವಿಧಾನ. ಇಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಇವಿಎಂ ಪದ್ಧತಿಯೇ ಮುಂದುವರೆಯಲಿದೆ. ಬ್ಯಾಲೆಟ್‌ ಪೇಪರ್‌ ಇಡೀ ದೇಶಕ್ಕೆ ಅನ್ವಯವಾಗಬೇಕಾದರೆ, ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಸದ್ಯಕ್ಕೆ ಅಂತಹ ಯಾವುದೇ ಸಾಧ್ಯತೆ ಇಲ್ಲ.

ದೇಶದ ಮಟ್ಟದಲ್ಲಿ ಇವಿಎಂ ಮತ ಯಂತ್ರಗಳ ಬಗ್ಗೆಯೇ ಅನುಮಾನಗಳು ಕೇಳಿ ಬರುತ್ತಿವೆಯಲ್ಲ?

ಕೇಂದ್ರ ಚುನಾವಣಾ ಆಯೋಗವು ಸಾಂವಿಧಾನಿಕ ಸ್ವತಂತ್ರ ಸಂಸ್ಥೆ. ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುತ್ತದೆ. ತಂತ್ರಜ್ಞಾನ ಆಧಾರಿತ ಇವಿಎಂ ಮತ ಯಂತ್ರಗಳನ್ನು ಅಷ್ಟು ಸುಲಭವಾಗಿ ತಿರುಚಲು ಸಾಧ್ಯವಿಲ್ಲ. ದೇಶದ ಅತ್ಯುನ್ನತ ತಾಂತ್ರಿಕ ಸಂಸ್ಥೆಗಳ ತಜ್ಞರನ್ನು ಬಳಸಿಕೊಂಡು ಇವಿಎಂ ಮತ ಯಂತ್ರಗಳನ್ನು ರೂಪಿಸಲಾಗುತ್ತದೆ. ಕಠಿಣ ಕೋಡ್‌ಗಳನ್ನು ಅವು ಒಳಗೊಂಡಿರುತ್ತವೆ. ಈ ಮತ ಯಂತ್ರಗಳನ್ನು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಮತ ಯಂತ್ರ ತಿರುಚುವುದು ಊಹಾಪೋಹ ಅಷ್ಟೇ. ಮತ ಯಂತ್ರಗಳ ಬಗ್ಗೆ ಆರೋಪ ಮಾಡುವವರು ಹೇಗೆ ತಿರುಚಲು ಸಾಧ್ಯ ಎಂಬುದನ್ನು ಈವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ ಸಹ ಹಲವು ಬಾರಿ ಪ್ರತಿಕ್ರಿಯಿಸಿದೆ.

ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ದೇಶಗಳ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಪದ್ಧತಿ ಅನುಸರಿಸುತ್ತಿರುವಾಗ ಭಾರತದಲ್ಲಿ ಇವಿಎಂ ಬಳಕೆ ಏಕೆ ಎಂಬ ಪ್ರಶ್ನೆಗಳಿವೆಯಲ್ಲ?

ಹೌದು. ಕೆಲ ಪಾಶ್ಚಾತ್ಯ ದೇಶಗಳ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಆಧಾರಿತ ಮತದಾನ ನಡೆಯುತ್ತಿದೆ. ಭಾರತದಲ್ಲಿ ಇವಿಎಂ ಆಧಾರಿತ ಮತದಾನ ನಡೆಯುತ್ತಿದೆ. ಮೊದಲೇ ಹೇಳಿದ ಹಾಗೆ ಬ್ಯಾಲೆಟ್‌ ಪೇಪರ್‌ ಆಧಾರಿತ ಮತದಾನ ಪದ್ಧತಿ ಸರ್ಕಾರಗಳಿಗೆ ಹೆಚ್ಚಿನ ಸಮಯದ ಜೊತೆಗೆ ಆರ್ಥಿಕ ಹೊರೆಯಾಗಲಿದೆ. ಇವಿಎಂ ಆಧಾರಿತ ಮತದಾನವೂ ಪಾರದರ್ಶಕವಾಗಿಯೇ ನಡೆಯುತ್ತದೆ. ಮತದಾರ ಮತಗಟ್ಟೆಗೆ ಬಂದು ಮತ ಹಾಕಬೇಕು. ಅಭ್ಯರ್ಥಿಗಳ ಪೋಲಿಂಗ್‌ ಎಜೆಂಟ್‌ಗಳು ಮತಗಟ್ಟೆಯಲ್ಲೇ ಇರುತ್ತಾರೆ. ಮತಗಟ್ಟೆ ಅಧಿಕಾರಿ ಇರುತ್ತಾರೆ. ನಕಲಿ ಮತದಾರರು ಅಥವಾ ಅನರ್ಹರು ಮತಗಟ್ಟೆ ಪ್ರವೇಶಿಸಿ ಮತ ಚಲಾಯಿಸುವುದು ಕಷ್ಟ ಸಾಧ್ಯ. ತಪ್ಪುಗಳಾದರೆ ಅಲ್ಲಿ ದೂರು ನೀಡಲು ಅವಕಾಶವಿದೆ. ಇನ್ನು ಮತಯಂತ್ರ ತಿರುಚುವುದು ಅಥವಾ ಹ್ಯಾಕ್‌ ಮಾಡಲು ಸದ್ಯದಮಟ್ಟಿಗೆ ಸಾಧ್ಯವಿಲ್ಲ. ಇದೆಲ್ಲದಕ್ಕಿಂತ ಜನ ಯಾವುದನ್ನು ಹೆಚ್ಚು ನಂಬುತ್ತಾರೆ ಎಂಬುದೂ ಮುಖ್ಯವಾಗುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಮತಗಳವು ನಡೆದಿರುವ ಬಗ್ಗೆ ಗಂಭೀರ ಆರೋಪಗಳಿವೆಯಲ್ಲ?

ಯಾವ ಆಧಾರದ ಮೇಲೆ ಮತಗಳವು ಆರೋಪ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಿಲ್ಲ. ಇವಿಎಂ ಮತ ಯಂತ್ರಗಳಲ್ಲಿ ಮತ ಕದಿಯಲು ಸಾಧ್ಯವಿಲ್ಲ. ಮತ ಎಣಿಕೆ ದಿನದವರೆಗೂ ಸ್ಟ್ರಾಂಗ್‌ ರೂಮ್‌ಗಳಿಗೆ ಬಿಗಿ ಭದ್ರತೆ ಇರುತ್ತದೆ. ಯಾರೊಬ್ಬರಿಗೂ ಈ ಸ್ಟ್ರಾಂಗ್‌ ರೂಂಗಳಿಗೆ ಪ್ರವೇಶ ಇರುವುದಿಲ್ಲ. ಚುನಾವಣೆಗಳಲ್ಲಿ ಲೋಪಗಳು ನಡೆಯುವುದೇ ಇಲ್ಲ ಎಂದು ಹೇಳುವುದಿಲ್ಲ. ಮತದಾರ ಪಟ್ಟಿ ಪರಿಷ್ಕರಣೆ ವೇಳೆ ಕೆಲ ಲೋಪದೋಷಗಳು ಆಗಬಹುದು. ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುತ್ತದೆ. ಆ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಆಗ ಚುನಾವಣಾ ಆಯೋಗ ಪರಿಶೀಲಿಸಿ ಸರಿಪಡಿಸುವ ಕೆಲಸ ಮಾಡುತ್ತದೆ. ಚುನಾವಣೆ ನಡೆದು ವರ್ಷಗಳ ಬಳಿಕ ಆರೋಪ ಮಾಡಿದರೆ, ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಚುನಾವಣಾ ಆಯೋಗವು ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆಯಲ್ಲ?

ಈ ಆರೋಪ ಸತ್ಯಕ್ಕೆ ದೂರುವಾದದ್ದು. ಏಕೆಂದರೆ, ಕೇಂದ್ರ ಚುನಾವಣಾ ಆಯೋಗ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆ. ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಈ ದೇಶದ ಜನರಿಗೆ ಉತ್ತರದಾಯಿ ಆಗಿರುತ್ತಾರೆ. ಈ ರೀತಿಯ ಆರೋಪಗಳಿಗೆ ಗುರಿಯಾಗಬಾರದು ಎಂಬ ಉದ್ದೇಶದಿಂದಲೇ ಆಯೋಗಕ್ಕೆ ಸ್ವತಂತ್ರ ಸ್ಥಾನಮಾನ ನೀಡಲಾಗಿದೆ. ಉದಾಹರಣೆಗೆ ಯಾವುದೋ ಒಂದು ರಾಜ್ಯದಲ್ಲಿ ಒಂದು ಪಕ್ಷದ ಪರ ಕೆಲಸ ಮಾಡಿದರೆ, ಉಳಿದ ರಾಜ್ಯಗಳಲ್ಲಿ ಬೇರೆ ಪಕ್ಷ ಗೆಲುವು ಸಾಧಿಸುತ್ತದೆ. ಅಲ್ಲಿ ಏಕೆ ಈ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಚುನಾವಣಾ ಆಯೋಗ ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡಲು ಸಾಧ್ಯವೇ ಇಲ್ಲ.

ಮತದಾರರ ಪಟ್ಟಿಯಲ್ಲೇ ಗೊಂದಲ ಕಾಣಿಸಿಕೊಂಡಿದೆಯಲ್ವ?

ನಮ್ಮದು ಪ್ರಜಾಪ್ರಭುತ್ವ ದೇಶ. ಚುನಾವಣೆ ಪ್ರಕ್ರಿಯೆ ಸೂಕ್ಷ್ಮ ಕೆಲಸ. ನಮ್ಮ ದೇಶದ ಚುನಾವಣೆಗಳ ಬಗ್ಗೆ ಮೊದಲಿನಿಂದಲೂ ಪಾಶ್ಚಾತ್ಯ ದೇಶಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಚುನಾವಣೆಗಳಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮತದಾರ ಪಟ್ಟಿ ಪರಿಷ್ಕರಣೆಗೆ ನಿಯೋಜಿತರಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಬೇಕು. ಮೇಲಾಧಿಕಾರಿಗಳು ಕೆಳಹಂತದ ಅಧಿಕಾರಿಗಳ ಕೆಲಸದ ಬಗ್ಗೆ ನಿಗಾವಹಿಸಬೇಕು. ವಾಸ್ತವಾಂಶಗಳ ಬಗ್ಗೆ ಮರು ಪರಿಶೀಲಿಸಬೇಕು. ಸಮಸ್ಯೆಗಳು ಇರುವ ಕಡೆ ಸರಿಪಡಿಸಬೇಕು.

ಚುನಾವಣಾಧಿಕಾರಿಗಳು ಅಥವಾ ಸಿಬ್ಬಂದಿ ತಪ್ಪು ಮಾಡಿದರೆ ಏನು ಕ್ರಮ?

ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಗದಿತ ಕಾರ್ಯಗಳು ಇರುತ್ತವೆ. ಅವರು ಅವರವರ ಕೆಲಸಗಳನ್ನು ಕಟ್ಟುನಿಟ್ಟಾಗಿ ಮಾಡಬೇಕು. ಒಂದು ವೇಳೆ ಅವರು ಕರ್ತವ್ಯ ಲೋಪ ಎಸೆಗಿದರೆ ಅಥವಾ ತಪ್ಪು ಮಾಡಿದರೆ ಆತ ಎಂತಹ ಉನ್ನತಾಧಿಕಾರಿ ಆಗಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್‌ಒಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ಸರಿಯಾಗಿ ಕೆಲಸ ಮಾಡಿದರೆ, ಮತಪಟ್ಟಿಯ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್‌ ಕಾರ್ಡ್‌ ಮೂಲ ದಾಖಲೆಯಾಗಿ ಪರಿಗಣಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತಪಟ್ಟಿ ಪರಿಷ್ಕರಣೆ ವೇಳೆ ಆಧಾರ್‌ ಕಾರ್ಡ್‌ ಮೂಲ ದಾಖಲೆಯಾಗಿ ಪರಿಗಣಿಸಿದರೆ ತಪ್ಪೇನಿಲ್ಲ. ಏಕೆಂದರೆ, ಆಧಾರ್‌ ಕಾರ್ಡ್‌ ಒಂದು ದಾಖಲೆಯಾಗಿ ಪಾರದರ್ಶಕವಾಗಿದೆ. ದೇಶದ ಬಹುತೇಕರು ಇದನ್ನು ನಂಬಿದ್ದಾರೆ. ಸರ್ಕಾರಗಳೂ ಬಹುತೇಕ ಯೋಜನೆಗಳಲ್ಲಿ ಆಧಾರ್‌ ಕಾರ್ಡ್ ಕಡ್ಡಾಯಗೊಳಿಸಿವೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರನ ಆಧಾರ್‌ ಕಾರ್ಡ್‌ ಪರಿಶೀಲಿಸಿ, ಅನರ್ಹ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಅನುಕೂಲವಾಗುತ್ತದೆ. ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಬೇಕಾದರೆ, ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಚರ್ಚಿಸಿ ಬಳಿಕ ಕಾನೂನು ರೂಪಿಸಬೇಕು. ಮುಂದಿನ ದಿನಗಳಲ್ಲಿ ಇದು ಪರಿಗಣನೆಗೆ ಬರುವ ಸಾಧ್ಯತೆಯಿದೆ.

ಈ ಹಿಂದೆ ಬ್ಯಾಲೆಟ್‌ ಪೇಪರ್‌ ಮತದಾನದ ಸಂದರ್ಭದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈಗ ಮತ್ತೆ ಬ್ಯಾಲೆಟ್ ಪೇಪರ್‌ ಮತದಾನ ಮರು ಆರಂಭಿಸಿದರೆ ಮತ್ತೆ ಅಕ್ರಮಗಳು ಆಗುವುದಿಲ್ಲವೇ?

ಈ ಹಿಂದೆ ಬ್ಯಾಲೆಟ್‌ ಪೇಪರ್‌ ಆಧಾರಿತ ಚುನಾವಣೆಗಳಲ್ಲಿ ಕೆಲ ಕಡೆ ಲೋಪದೋಷಗಳು ಹಾಗೂ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದವು. ಇಂತಹ ಸವಾಲುಗಳನ್ನು ಎದುರಿಸಲು ಮತ್ತು ಬದಲಾದ ಕಾಲಘಟ್ಟದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮತದಾನಕ್ಕೆ ತಂತ್ರಜ್ಞಾನ ಆಧಾರಿತ ಇವಿಎಂ ಮತಪೆಟ್ಟಿಗೆಗಳ ಬಳಕೆ ಜಾರಿಗೆ ತರಲಾಗಿತ್ತು. ಈಗ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್‌ ಆಧಾರಿತ ಮತದಾನಕ್ಕೆ ಮತ್ತೆ ಅವಕಾಶ ನೀಡುವುದರಿಂದ ಹಿಂದಿನಷ್ಟು ಸಮಸ್ಯೆಗಳು ಉದ್ಭವಿಸುವುದಿಲ್ಲ. ಮತದಾನ ಪ್ರಕ್ರಿಯೆ ಬಹಳ ಬಿಗಿ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಲ್ಲಿ ನಡೆಯುವುದರಿಂದ ಅಕ್ರಮ ಎಸಗುವುದು ಅಷ್ಟು ಸುಲಭವಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌