ಹಳ್ಳಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ‘ಮಕ್ಕಳ ಮನೆ’: ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರಯೋಗ

Published : Dec 28, 2025, 10:13 AM IST
Azim Premji Foundation

ಸಾರಾಂಶ

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂಬರುವ 5 ವರ್ಷದಲ್ಲಿ 10 ಸಾವಿರ ಮಕ್ಕಳ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.

ಶೇಷಮೂರ್ತಿ ಅವಧಾನಿ

ಕಲಬುರಗಿ (ಡಿ.28): ಹಳ್ಳಿಗಾಡಲ್ಲಿ ಕೂಲಿ ಮಾಡಿ ಸಂಸಾರ ನಿರ್ವಹಿಸುವ ಹೆಣ್ಮಕ್ಕಳಿಗೆ ಮಕ್ಕಳಾದ ಮೇಲೆ ಅವರನ್ನು ಸಾಕುವುದು ದೊಡ್ಡ ಚಿಂತೆ. ಹೆರಿಗೆ ನಂತರ ಕೆಲಸಕ್ಕೆ ಹೋಗದಿದ್ದರೆ ಉಪಜೀವನ ಸಾಗಿಸುವುದಾದರೂ ಹೇಗೆ? ಹಾಗಂತ, ದಿನಪೂರ್ತಿ ಹೊಲಗದ್ದೆಯಲ್ಲಿ ಕೆಲಸಕ್ಕೆ ಹೋದರೆ ಚಿಕ್ಕ ಮಗುವನ್ನು ಬಿಡೋದೆಲ್ಲಿ? ಎಂಬ ಹಳ್ಳಿ ತಾಯಂದಿರ ಪ್ರಶ್ನೆಗೆ ಅಜೀಂ ಪ್ರೇಂಜೀ ಫೌಂಡೇಷನ್‌ ಉತ್ತರ ಹುಡುಕಿದೆ. ಹಳ್ಳಿಗಾಡಲ್ಲಿ ಪುಟಾಣಿಗಳ ಆರೈಕೆಗೆ ‘ಮಕ್ಕಳ ಮನೆ’ ಎಂಬ ಸುಸಜ್ಜಿತ ಕೇಂದ್ರ ಆರಂಭಿಸಿದೆ.

ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕದ 7 ಹಾಗೂ ಕಿತ್ತೂರು ಕರ್ನಾಟಕ ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ ಸೇರಿದಂತೆ ಉ-ಕದ 9 ಜಿಲ್ಲೆಗಳಲ್ಲಿ 7 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಸರ್ವತೋಮುಖ ಪ್ರಗತಿಗೆ ಭದ್ರ ಬುನಾದಿ ಹಾಕುವ ಉದ್ದೇಶದೊಂದಿಗೆ ಮಕ್ಕಳ ಮನೆ ಎಂಬ ವಿನೂತನ ಪರಿಕಲ್ಪನೆಯ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಜೇರಿ (2), ಕಲ್ಲಹಂಗರ್ಗಾ, ಸೊನ್ನ ಸೇರಿದಂತೆ ಯಡ್ರಾಮಿ ಭಾಗದ ಹಳ್ಳಿಗಳಲ್ಲಿ 6 ಮಕ್ಕಳ ಮನೆಗಳ ಕಾರ್ಯಾರಂಭದೊಂದಿಗೆ ಈ ಯೋಜನೆ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಮುಂದಿನ 5 ವರ್ಷಗಳಲ್ಲಿ 10 ಸಾವಿರ ಮನೆ: ರುದ್ರೇಶ್‌
ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂಬರುವ 5 ವರ್ಷದಲ್ಲಿ 10 ಸಾವಿರ ಮಕ್ಕಳ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಮಕ್ಕಳ ಮನೆಯೊಂದಕ್ಕೆ 3 ವರ್ಷಕ್ಕೆ ₹40 ಲಕ್ಷ ಹಣ ವೆಚ್ಚ ಮಾಡುವ ಯೋಜನೆ ರೂಪಿಸಲಾಗಿದೆ. ಮುಂದಿನ ಮಾರ್ಚ್‌ ಒಳಗಾಗಿ ಜೇವರ್ಗಿಯಲ್ಲೇ 40 ಮಕ್ಕಳ ಮನೆ ಕಾರ್ಯಾರಂಭಗೊಳ್ಳಲಿವೆ. ಶೀಘ್ರ ಕಲಬುರಗಿ ಜಿಲ್ಲೆಯಲ್ಲೇ 1 ಸಾವಿರ ಮಕ್ಕಳ ಮನೆ ಆರಂಭಿಸುವ ಗುರಿ ಇದೆ. ಯಾದಗಿರಿ ಜಿಲ್ಲೆಯ ಶಹಾಪುರ, ವಿಜಯಪುರ ಜಿಲ್ಲೆಯ ಸಿಂದಗಿ, ಕಲಬುರಗಿಯ ಚಿತ್ತಾಪುರದಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳ ಮನೆಗಳು ಕಾರ್ಯಾರಂಭಿಸಲಿವೆ ಎಂದು ಅಜೀಂ ಪ್ರೇಮ್‌ ಜೀ ಫೌಂಡೇಷನ್‌ ಮಕ್ಕಳ ಮನೆ ಯೋಜನೆಯ ಉಸ್ತುವಾರಿ ರುದ್ರೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಕೆಲಸದಲ್ಲಿ ಡಾನ್‌ ಬಾಸ್ಕೋ ಹಾಗೂ ಸೇವಾ ಸಂಗಮ ಸಂಸ್ಥೆಗಳು ಅಜೀಂ ಪ್ರೇಮ್‌ಜೀ ಸಂಸ್ಥೆಯೊಂದಿಗೆ ಹೆಜ್ಜೆ ಹಾಕಿವೆ. ಯೋಜನೆ, ಅನುದಾನವೆಲ್ಲವೂ ಅಜೀಂ ಪ್ರೇಮ್‌ಜೀ ಫೌಂಡೇಷನ್‌ ಅವರದ್ದಾಗಿದೆ.

ಮಕ್ಕಳ ಮನೆಯಲ್ಲಿನ ಸವಲತ್ತು

-ಪ್ರತಿಯೊಂದು ಮಕ್ಕಳ ಮನೆಯಲ್ಲಿ 20 ಮಕ್ಕಳ ಆರೈಕೆಗೆ ವ್ಯವಸ್ಥೆ.
-ಮಕ್ಕಳಿಗೆ ಹಾಡು, ಕಥೆ, ಆಟೋಟಕ್ಕೆ ಅಗತ್ಯ ಸಲಕರಣೆ-ಬೆಳಗ್ಗೆ 10 ಗಂಟೆಗೆ ಗೋಧಿ, ಹೆಸರು ಕಾಳು ಮಿಶ್ರಣ ಗಂಜಿ ಪೂರೈಕೆ.
-ಮಧ್ಯಾಹ್ನ 12.30ಕ್ಕೆ ತರಕಾರಿ, ಬೇಳೆ, ಅಕ್ಕಿ, ರಾಗಿ ಮಿಶ್ರಣದ ಖಿಚಡಿ ಪೂರೈಕೆ.
-1 ವರ್ಷದೊಳಗಿನ ಮಗುವಿಗೆ ಅರ್ಧ, ದೊಡ್ಡ ಮಕ್ಕಳಿಗೆ 1 ತತ್ತಿ ಪೂರೈಕೆ.
-ಸಂಜೆ 4.30ಕ್ಕೆ ರಾಗಿ, ಗಜ್ಜರಿ ಸೇರಿದಂತೆ ಸಿಹಿ ಹಲ್ವಾ.
-ಬೆ.9.30ರಿಂದ ಸಂಜೆ 5 ಗಂಟೆಯವರೆಗೂ ಕೇಂದ್ರ ತೆರೆದಿರುತ್ತದೆ.
 

ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ ಮಕ್ಕಳ ಮನೆ ಯೋಜನೆ ತುಂಬಾ ವಿನೂತನವಾಗಿದೆ. ನನ್ನ ಮತಕ್ಷೇತ್ರ ಜೇವರ್ಗಿಯ ಇಜೇರಿ, ಸೊನ್ನ, ಕಲ್ಲಹಂಗರಗಾ ಸೇರಿದಂತೆ 6 ಕಡೆ ಆರಂಭವಾಗಿದ್ದು, ಉತ್ತಮ ಸ್ಪಂದನೆ ಬಂದಿದೆ. ಇದರಿಂದ ಹಳ್ಳಿಗಾಡಲ್ಲಿ ತಾಯಂದಿರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಮ್ಮ ಧರ್ಮಸಿಂಗ್‌ ಫೌಂಡೇಷನ್‌ ಯೋಜನೆಗೆ ಸಂಪೂರ್ಣ ಸಹಕಾರ ನೀಡಲಿದೆ.
-ಡಾ। ಅಜಯ್‌ ಧರ್ಮಸಿಂಗ್‌, ಅಧ್ಯಕ್ಷ, ಕೆಕೆಆರ್‌ಡಿಬಿ, ಕಲಬುರಗಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

4 ಸಾವಿರಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ಅಷ್ಟಾಂಗ ಹೃದಯ ಸಂಹಿತೆ ಪಠಣ: ಆಯುರ್ವೇದದಲ್ಲಿ ಐತಿಹಾಸಿಕ ದಾಖಲೆ
ಸಂಪುಟ ಪುನಾರಚನೆ ಕುರಿತು ಮಾಹಿತಿಯಿಲ್ಲ: ಸಚಿವ ಸಂತೋಷ್ ಲಾಡ್‌ ಸ್ಪಷ್ಟನೆ