
ಗಣೇಶ್ ಕಾಮತ್
ಮೂಡುಬಿದಿರೆ (ಡಿ.11) : ಬದುಕು ಕಟ್ಟಿಕೊಳ್ಳುವ ಸವಾಲಿನ ನಡುವೆ ಬೆಂಗಳೂರಿನಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದ ಯುವಕ ಆರ್. ರಾಜೇಶ್ ಶೆಟ್ಟಿ ಇಂದು ದೇಶದ ಉದ್ದಗಲ ವ್ಯಾಪಿಸಿರುವ ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿ. ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ಐತಿಹಾಸಿಕ ಅಯೋಧ್ಯೆಯ ಶ್ರೀ ರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಹೊಣೆ ಅವರ ಬಳಗಕ್ಕೆ ಲಭಿಸಿದೆ.
ಇವರು ಕರಾವಳಿ ಕರ್ನಾಟಕದ ದ.ಕ. ಜಿಲ್ಲೆಯ ಮೂಡುಬಿದಿರೆಯವರು. ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಬೇಕೆಂದಿದ್ದ ರಾಜೇಶ್, ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನೀಶಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದ್ದರು. ತಾನಿದ್ದ ಕಂಪನಿಯಲ್ಲಿ ಕೆಲಸ ಇನ್ನೇನು ಕಾಯಂ ಆಗುತ್ತದೆ ಎನ್ನುವಷ್ಟರಲ್ಲೇ ಮೇಲಧಿಕಾರಿಯ ಒತ್ತಡಕ್ಕೆ ಕಟ್ಟು ಬಿದ್ದು ತನ್ನದೇ ಸಂಸ್ಥೆ ತೆರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ಬದುಕಿಗೇ ಹೊಸ ತಿರುವು ನೀಡಿತು.
ಅಯೋಧ್ಯೆ ರಾಮಲಲ್ಲಾ ಕೆತ್ತನೆಗೆ ಕರಾವಳಿ ಶಿಲ್ಪಿ ಗಣೇಶ್!
ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ.ಲಿ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಅಮೆಜಾನ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಹೀಗೆ ಬೆಂಗಳೂರು ಮಾತ್ರವಲ್ಲ, ಚೆನ್ನೈ, ಹೈದರಾಬಾದ್, ಮುಂಬೈ ಹೀಗೆ 400ಕ್ಕೂ ಅಧಿಕ ದೊಡ್ಡ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯಲ್ಲಿ ಟಾಪರ್ ಆಗಿದೆ. ವಾರ್ಷಿಕ 500 ಕೋಟಿ ರು.ನಷ್ಟು ವ್ಯವಹಾರವನ್ನೂ ನಡೆಸುತ್ತಿದೆ.
ರಾಮ ಸೇವೆಯ ಅವಕಾಶ!
ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಪೂರ್ಣ ಹೊಣೆಗಾರಿಕೆ ಇರುವುದು ಅಲ್ಲಿನ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಅವರ ಟಿಸಿಎಸ್ ಸಂಸ್ಥೆಗೆ. ಟಾಟಾ ಅವರ ಉಪ ಸಂಸ್ಥೆ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ರಾಜೇಶ್ ಶೆಟ್ಟಿ ಅವರ ಸಾಮರ್ಥ್ಯ, ಸಾಧನೆ ಚಿರಪರಿಚಿತ. ಹಾಗಾಗಿಯೇ ಅಯೋಧ್ಯೆಯ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ರಾಜೇಶ್ ಅವರಿಗೆ ಕೊಡಬಾರದೇಕೆ ಎನ್ನುವ ಯೋಚನೆ ಹೊಳೆದದ್ದೇ ಇವರ ಹೆಸರನ್ನು ಟಿಸಿಎಸ್‌ಗೆ ರವಾನಿಸಲಾಗಿತ್ತು.
ಇವರಿಗೆ ಅಯೋಧ್ಯೆ ಶ್ರೀ ರಾಮ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆಯ ಜವಾಬ್ದಾರಿ ಕಳೆದ ಜನವರಿಯಲ್ಲಿ ದೊರೆಯಿತು. ಮೊದಲ ಹಂತದಲ್ಲಿ ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಡಿಸೆಂಬರ್ 2025ರೊಳಗೆ ಸಂಪೂರ್ಣ ವಿದ್ಯುದ್ದೀಕರಣ ಕಾರ್ಯ ಮುಗಿಸಿಕೊಡಬೇಕು. ಆ ನಂತರದ ನಿರ್ವಹಣೆಯ ಜವಾಬ್ದಾರಿಯೂ ರಾಜೇಶ್ ಬಳಗದ ಪಾಲಿಗೆ ದೊರೆತಿದೆ.
ಇದೀಗ 150 ರಿಂದ 200 ಮಂದಿಯ ತಂಡ ಅಯೋಧ್ಯೆಯ ಮಂದಿರದ ಆವರಣದಲ್ಲಿ ಕಾರ್ಯನಿರತವಾಗಿದ್ದು, ಶೇ.70ರಷ್ಟು ಮಂದಿ ಕರಾವಳಿಯವರೇ! ಗಣೇಶ್ ದೇವಾಡಿಗ, ಸಂಜಯ್ ಪೂಜಾರಿ, ಸಂಪತ್ ಶೆಟ್ಟಿ, ಪ್ರಮೋದ್ ಶೆಣೈ ಮೂಡುಬಿದಿರೆ ಹೀಗೆ ತುಳುನಾಡಿನ ದಂಡೇ ಅಯೋಧ್ಯೆಯ ಮಂದಿರದಲ್ಲಿ ಉತ್ಸಾಹದಿಂದ ಕಾರ್ಯನಿರತವಾಗಿದೆ.
ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ಥಾಯ್ಲೆಂಡ್ ಮಣ್ಣು, ಕಾರಣವೇನು?
ವರ್ಷಕ್ಕೊಮ್ಮೆ ಊರ ದೈವಗಳ ಸೇವೆಗೆ, ಕಟೀಲು ಹೀಗೆ ತವರಿನತ್ತ ಮುಖ ಮಾಡುವ ರಾಜೇಶ್, ತಾಯಿ ಲೀಲಾ, ಪತ್ನಿ ಅಪರ್ಣಾ, ಪುತ್ರರಾದ ದಕ್ಷ್ರಾಜ್, ಶೌರ್ಯ ಹೀಗೆ ಎಲ್ಲರ ಸಹಕಾರದಿಂದ ತನ್ನ ಸ್ವ ಉದ್ಯಮದಲ್ಲಿ ಸಾಮಾಜಿಕ ಕಾಳಜಿ, ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ.
ಇದೊಂದು ಬಯಸದೇ ಬಂದ ಭಾಗ್ಯ. ವೃತ್ತಿ ಮಾತ್ರವಲ್ಲ ಜೀವನದ ಅವಿಸ್ಮರಣೀಯ ಕ್ಷಣ. ತುಳುನಾಡಿನ ಕಟೀಲು ಅಮ್ಮನ ಕೃಪೆ, ಮಂತ್ರಾಲಯದ ಗುರುಗಳ ಆಶೀರ್ವಾದ
-ರಾಜೇಶ್ ಶೆಟ್ಟಿ ಉದ್ಯಮಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ