ಅಯೋಧ್ಯೆ ರಾಮಮಂದಿರದಲ್ಲಿ ಬ್ರಾಹ್ಮಣರಿಂದಲೇ ಮೊದಲ ಪೂಜೆ ಮಾಡಿಸ್ತೇವೆಂದ ಸೆಕ್ಯೂಲರ್ ಕಾಂಗ್ರೆಸ್‌ ಸಚಿವ!

By Sathish Kumar KH  |  First Published Jan 2, 2024, 4:33 PM IST

ಅಯೋಧ್ಯೆಯ ಶ್ರೀರಾಮ ಮಂದಿರದ ಮೊದಲ ಪೂಜೆಯನ್ನು ಬ್ರಾಹ್ಮಣರಿಂದಲೇ ಮಾಡಿಸುತ್ತೇವೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.


ಉತ್ತರಕನ್ನಡ (ಜ.02): ದೇಶದಲ್ಲಿ ಸೆಕ್ಯೂಲರ್ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ ಅಯೋಧ್ಯೆಯ ರಾಮಮಂದಿರವನ್ನು ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ ನಿರ್ಮಿಸಿದೆ ಎಂದು ಹೇಳುತ್ತಿದೆ. ಆದರೆ, ರಾಜ್ಯದ ಕಾಂಗ್ರೆಸ್‌ ಸಚಿವ ಮಂಕಾಳ್‌ ವೈದ್ಯ ಅವರು ಅಯೋಧ್ಯೆಯ ರಾಮಮಂದಿರಲ್ಲಿ ಮೊದಲ ಮಂಗಳಾರತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುವುದು ಬೇಡ, ನಾವು ಬ್ರಾಹ್ಮಣರಿಂದ ಮೊದಲ ಆರತಿ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಅಯೋಧ್ಯೆ ರಾಮನನ್ನು ಪೂಜೆ ಮಾಡೊಲ್ಲ ಎನ್ನುವರು ಒಬ್ಬರಾದರೆ, ಮತ್ತೊಬ್ಬರು ಬ್ರಾಹ್ಮಣರಿಂದ ಪೂಜೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ರಾಮಮಂದಿರದ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲೇ ಒಮ್ಮತ ಕಂಡುಬರುತ್ತಿಲ್ಲ.

ದೇಶದಲ್ಲಿ ಹಿಂದೂ ಧರ್ಮದ ಪವಿತ್ರ ಸ್ಥಳವಾಗಿರುವ ಶ್ರೀರಾಮನ ಜನ್ಮಸ್ಥಳ ಎಂದು ಹೇಳಲಾಗುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನೆ ಜ.22ಕ್ಕೆ ನೆರವೇರಲಿದೆ. ಆದರೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲವೆಂಬುದು ಕೂಡ ಮುನ್ನೆಲೆಗೆ ಬಂದಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಹೆಚ್. ಆಂಜನೇಯ ಅವರು ನಮಗೆ ಸಿದ್ದರಾಮಯ್ಯ ಅವರೇ ಶ್ರೀರಾಮ, ಅವರು ಅಯೋಧ್ಯೆಯ ಬಿಜೆಪಿ ರಾಮನಿಗೇಕೆ ಪೂಜೆ ಮಾಡಬೇಕು ಎಂದು ಹೇಳಿದ್ದರು. ಒಂದೊಮ್ಮೆ ಸಂಪೂರ್ಣ ಸೆಕ್ಯೂಲರಿಸಂ ಪ್ರದರ್ಶನ ಮಾಡಿದರೆ, ಮತ್ತೊಮ್ಮೆ ಸಾಫ್ಟ್‌ ಹಿಂದುತ್ವದ ಪ್ಲೇಕಾರ್ಡ್‌ ಅನ್ನು ಕಾಂಗ್ರೆಸ್‌ ನಾಯಕರು ಬಳಕೆ ಮಾಡುತ್ತಿದ್ದಾರೆ.

Tap to resize

Latest Videos

undefined

ಉದ್ಯಾನ, ಕೋಟೆಗಳು, ಮಾರುಕಟ್ಟೆಗಳು.. ಸಮೃದ್ಧವಾಗಿತ್ತು ಶ್ರೀರಾಮನ ಅಯೋಧ್ಯಾ ನಗರ

ಅಯೋಧ್ಯೆಯಲ್ಲಿ ಮೊದಲ ಆರತಿ ಪ್ರಧಾನಿ ನರೇಂದ್ರ ಮೋದಿಯಿಂದ ಮಾಡಿಸುವ ವಿಚಾರದ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು, ಪ್ರಧಾನಿ ಮೋದಿ ಆರತಿ ಮಾಡಬಾರದು, ಮಾಡ್ಬೇಕು ಅಂತಾ ಹೇಳಲ್ಲ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾವು ಬ್ರಾಹ್ಮಣರತ್ರ ಪೂಜೆ ಮಾಡಿಸ್ತೇವೆ. ನಾವು ದೇವರ ಹತ್ರ ಇಟ್ಟದ್ದು ಬ್ರಾಹ್ಮಣರನ್ನು, ನಮ್ಮಲ್ಲಿ ಅಷ್ಟು ಭಕ್ತಿಯಿಂದ ಮಾಡಲಾಗಲ್ಲ ಅನ್ನೋ  ಕಾರಣಕ್ಕೆ, ಬ್ರಾಹ್ಮಣರ ಕೈಯಲ್ಲಿ ಪೂಜೆ ಮಾಡಿಸಿದ್ರೆ ನಮಗೆ ನೆಮ್ಮದಿಯಾಗ್ತದೆ. ನಮ್ಮ ಭಾವನೆಯಿದು, ನಾವು ಬ್ರಾಹ್ಮಣರತ್ರ ಪೂಜೆ ಮಾಡಿಸ್ತೇವೆ. ಶಾಸ್ತ್ರೋಕ್ತವಾಗಿ ಒಳ್ಳೆಯ ಬ್ರಾಹ್ಮಣರಿಂದ ಯೋಗ್ಯವಾಗಿ, ರಾಮನಿಗೆ ತೃಪ್ತಿಯಾಗುವಂತೆ, ದೇಶದಲ್ಲಿ ಮಳೆ ಬೆಳೆಯಾಗುವಂತೆ ಪ್ರಾರ್ಥನೆ ಮಾಡಿಸ್ತೇವೆ. ಅದರಲ್ಲೇ ರಾಜಕಾರಣ ಮಾಡಬೇಕು ಅನ್ನೋರಿಗೆ ಏನೂ ಮಾಡಲಾಗಲ್ಲ ಎಂದು ಹೇಳಿದರು.

ಈ ಪರಪಂಚಕ್ಕೆ ಶ್ರೀರಾಮ ಒಬ್ಬನೇ.. ನಮಗೂ ಭಕ್ತಿಯಿದೆ, ನಾನೂ ಅಯೋಧ್ಯೆಗೆ ಹೋಗಬೇಕೆಂದಿದ್ದೇನೆ. ನಾನೂ ಹಣ ಕೊಟ್ಟಿದ್ದೇನೆ. ನಾನು ಕಾಂಗ್ರೆಸಲ್ವಾ ಹಾಗಾದ್ರೆ, ಇದರಲ್ಲಿ ಕಾಂಗ್ರೆಸ್, ಬಿಜೆಪಿ, ದಳ ಯಾವುದೇ ಪಕ್ಷವಿಲ್ಲ. ರಾಮ ಈ ಪ್ರಪಂಚಕ್ಕೆ ಒಬ್ಬನೇ, ಅಯೋಧ್ಯೆಗೆ ಹೋಗೋದು ನಮ್ಮ ನಮ್ಮ ಇಷ್ಟ. ಅಯೋಧ್ಯೆಗೆ ಕಾಂಗ್ರೆಸ್ ಹೈ ಕಮಾಂಡ್ ಕೂಡಾ ಹೋಗಬಹುದು. ಅಯೋಧ್ಯೆಯಲ್ಲಿ ಏರ್‌ಪೋರ್ಟ್ ಮಾಡಿದ್ದಾರೆ, ನಾನೂ ಹೋಗಬೇಕೆಂದಿದ್ದೇನೆ, ಟಿಕೆಟ್ ಸಿಗ್ತಿಲ್ಲ. ಜ.22ಕ್ಕೆ ಹೋಗಲಾಗದಿದ್ರೆ ಮುಂದೆಯಾದ್ರೂ ಅಯೋಧ್ಯೆಗೆ ಹೋಗಬೇಕು ಎಂದರು.

ಮೈಸೂರು ಸ್ಯಾಂಡಲ್, ಮಾರ್ಜಕ ಮಾರಾಟದಲ್ಲಿ 40 ವರ್ಷದಲ್ಲಿ ದಾಖಲೆ ಬರೆದ ಕೆಎಸ್‌ಡಿಎಲ್!

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರಿಗೆ ಆಮಂತ್ರಣ ನೀಡಲಾಗಿಲ್ಲ. ಬಿಜೆಪಿಯವರು ಮಾಡೋದೆ ಇದು. ದುಡ್ಡು ನಮ್ಮದು, ಕಟ್ಟಿದೋರು ನಾವು. ಸರ್ಕಾರದ ದುಡ್ಡು, ಜನರ ದುಡ್ಡು ಇದು. ರಾಮ ಮಂದಿರ ನಿರ್ಮಾಣಕ್ಕೆ ನಾನೂ ಕೂಡಾ ಹಣ ಕೊಟ್ಟಿದ್ದೇನೆ. ಆಮಂತ್ರಣ ಪತ್ರ ನೀಡದಿದ್ರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ನಡೆಸ್ತಿದ್ದಾರೆ ಎಂದರ್ಥವಾಗುತ್ತದೆ. ನಾವೇನು ಮಾಡೋದು, ರಾಮ ನೋಡ್ಕೋತಾನೆ. ಅವರು ನಿಜವಾದ  ರಾಮ ಭಕ್ತರಾದ್ರೆ ಪಕ್ಷಾತೀತವಾಗಿ ರಾಮ ಮಂದಿರ ಓಪನ್ ಮಾಡ್ಬೇಕು. ಸಾರ್ವಜನಿಕರಿಗೆ, ನಮಗೆ ಆಮಂತ್ರಣ ನೀಡಬೇಕು. ಇದರಲ್ಲಿ ರಾಜಕಾರಣ ಮಾಡಿದ್ರೆ ರಾಮ ನೋಡ್ಕೋತಾನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.

click me!