ರೈತರಿಗೆ ಇನ್ನೂ ಮುಗಿದಿಲ್ಲ ವಾರಂಟ್‌ ಆತಂಕ!

By Web DeskFirst Published Nov 8, 2018, 7:35 AM IST
Highlights

ಆಕ್ಸಿಸ್ ಬ್ಯಾಂಕ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾಧಿಕಾರಿ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. 

ಬೆಳಗಾವಿ :  ಸಾಲ ಕಟ್ಟದ ರೈತರಿಗೆ ಕೋಲ್ಕತಾ ಕೋರ್ಟ್‌ನಿಂದ ಹೊರಡಿಸಲಾಗಿದ್ದ ಬಂಧನ ವಾರಂಟ್‌ ಅನ್ನು ವಾಪಸ್‌ ಪಡೆಯುವ ಬಗ್ಗೆ ಭರವಸೆ ನೀಡಿದ್ದ ಎಕ್ಸಿಸ್‌ ಬ್ಯಾಂಕ್‌ನ ಅಧಿಕಾರಿಗಳು ಆ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಸ್ಪಷ್ಟತೆ ನೀಡುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ಬುಧವಾರ ನಡೆದ ಎಕ್ಸಿಸ್‌ ಬ್ಯಾಂಕ್‌, ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸ್ಪಷ್ಟನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಬ್ಯಾಂಕ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾಧಿಕಾರಿ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು ನವೆಂಬರ್‌ 13ರಿಂದ ರೈತರೊಂದಿಗೆ ಸಭೆ ನಡೆಸಿ ಒನ್‌ ಟೈಂ ಸೆಟಲ್ ಮೆಂಟ್‌ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಕ್ಸಿಸ್‌ ಬ್ಯಾಂಕ್‌ನಲ್ಲಿ ಟ್ರಾ$್ಟಕ್ಟರ್‌ ಸಾಲ ಪಡೆದು ಕಟ್ಟಲು ವಿಫಲರಾಗಿದ್ದ ರೈತರಿಗೆ ದೂರದ ಕೋಲ್ಕತಾ ಕೋರ್ಟ್‌ನಿಂದ ಬಂಧನದ ವಾರಂಟ್‌ ಜಾರಿಯಾಗಿತ್ತು. ಇದರಿಂದಾಗಿ ರೈತರು ತಲೆ ಮರೆಸಿಕೊಂಡು, ಆತಂಕದಿಂದ ಬದುಕು ಸಾಗಿಸುವಂತಾಗಿತ್ತು. ಈ ವಿಷಯವಾಗಿ ಕನ್ನಡಪ್ರಭ ನ.4ರಂದು ‘ಎಕ್ಸಿಸ್‌ ಕುತಂತ್ರ; ರಾಜ್ಯ ರೈತರಿಗೆ ಅರೆಸ್ಟ್‌ ವಾರಂಟ್‌!’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿ, ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿತ್ತು. ಇದರಿಂದ ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಯಾವುದೇ ರೈತರನ್ನು ಬಂಧಿಸದಂತೆ ಹಾಗೂ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿ ಎಚ್ಚರಿಕೆ:  ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಹಾಗೂ ಎಸ್ಪಿ ಸುಧೀರ್‌ ಕುಮಾರ್‌ ರಡ್ಡಿ ಅವರು ರೈತರಿಗೆ ನೀವು ಬರೆದ ಪತ್ರ ಸಭೆಗೆ ನೀಡಿ ಎಂದು ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸದ್ಯ ನಮ್ಮ ಹತ್ತಿರ ಅಂತಹ ಯಾವುದೇ ದಾಖಲೆಗಳು ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಬೆಳಗಾವಿ ಜಿಲ್ಲಾಧಿಕಾರಿ ಎಸ್ಪಿ, ಯಾವುದೇ ಕಾರಣಕ್ಕೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿಸದಂತೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಎಕ್ಸಿಸ್‌ ಬ್ಯಾಂಕಿನವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 180 ರೈತರಿಗೆ ನೋಟಿಸ್‌ ಬಂದಿದ್ದು, ಈ ಪೈಕಿ ಐವರಿಗೆ ಬಂಧನ ವಾರಂಟ್‌ ಬಂದಿದೆ. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಸಾಲ ಮರುಪಾವತಿಗಾಗಿ ಕೋರ್ಟ್‌ನಲ್ಲಿ ದಾಖಲಿಸಲಾಗಿರುವ ಪ್ರಕರಣ ಮತ್ತು ಬಂಧನ ವಾರಂಟ್‌ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೃಷಿಯೇತರ ಸಾಲ ಮರುಪಾವತಿಗಾಗಿ ದಾಖಲಾಗಿರುವ ಪ್ರಕರಣಗಳನ್ನು ಕರ್ನಾಟಕದ ಜಿಲ್ಲಾ ಅಥವಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಡಿಸಿ, ಎಸ್ಪಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಕ್ಸಿಸ್‌ ಬ್ಯಾಂಕ್‌ನ ಉತ್ತರ ವಲಯ ಅಧಿಕಾರಿ ದಯಾನಂದ, ಅ.19 ರಿಂದ ನ.9 ವರೆಗೆ ನ್ಯಾಯಾಲಯಕ್ಕೆ ರಜೆ ಇದೆ. ಅಲ್ಲದೆ ಸದ್ಯ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕೋರ್ಟ್‌ ಆರಂಭವಾದ ನಂತರ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವ ಕುರಿತು ಕೋಲ್ಕತ್ತಾದಲ್ಲಿರುವ ಬ್ಯಾಂಕನ ಪ್ರಧಾನ ಕಚೇರಿಯ ಕಾನೂನು ವಿಭಾಗದೊಂದಿಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಒನ್‌ ಟೈಮ್‌ ಸೆಟಲ್‌ಮೆಂಟ್‌(ಒಟಿಎಸ್‌, ಏಕ ಕಂತು ಪಾವತಿ) ಮೂಲಕ ರೈತರ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು. ಆದರೆ, ಪ್ರಮುಖ ವಿಚಾರವಾಗಿದ್ದ ರೈತರ ಮೇಲಿನ ಪ್ರಕರಣವಾಗಲಿ ಅಥವಾ ಬಂಧನ ವಾರಂಟ್‌ವಾಗಲಿ ಹಿಂಪಡೆಯುವ ಬಗ್ಗೆ ಸ್ಪಷ್ಟಭರವಸೆ ನೀಡಲಿಲ್ಲ.

ಬ್ಯಾಂಕ್‌ ಅಧಿಕಾರಿಗಳ ಬೆವರಿಳಿಸಿದ ಎಸ್ಪಿ

ಕೃಷಿಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ರೈತರಿಂದ ಖಾಲಿ ಚೆಕ್‌ ಪಡೆದುಕೊಂಡು ನಿಯಮಾವಳಿ ಉಲ್ಲಂಘಿಘಿಸಿರುವುದು ಹಾಗೂ ಬಡ್ಡಿ ವಿಧಿಸುವ ಸಂದರ್ಭದಲ್ಲಿ ಬಡ್ಡಿದರದಲ್ಲಿ ಏಕರೂಪತೆ ಅನುಸರಿಸದಿರುವ ಕೆಲವೊಂದು ಪ್ರಕರಣಗಳ ಬಗ್ಗೆ ಬ್ಯಾಂಕಿನ ಅಧಿಕಾರಿಗಳನ್ನು ಪ್ರಶ್ನಿಸಿದರು. ಬ್ಯಾಂಕಿನಿಂದ ಸಾಲ ಪಡೆದ ರೈತರ ಹಾಗೂ ಬಡ್ಡಿ ಸೇರಿದಂತೆ ಒಟ್ಟು ಬಾಕಿ ಇರುವ ಸಾಲದ ದಾಖಲೆಗಳನ್ನು ಎಸ್ಪಿ ಸುಧೀರ ಕುಮಾರ ಸಭೆಯಲ್ಲಿ ಹಾಜರುಪಡಿಸುವಂತೆ ಸೂಚಿಸಿದರು. ಆದರೆ ಸಂಬಂಧಿದ ಬ್ಯಾಂಕ್‌ ಅಧಿಕಾರಿಗಳು ಸದ್ಯ ಮಾಹಿತಿ ನಮ್ಮ ಹತ್ತಿರ ಇಲ್ಲ ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಎಸ್ಪಿ, ಸಭೆ ಇರುವ ಬಗ್ಗೆ ಕಳೆದ ಮೂರು ದಿನಗಳ ಹಿಂದೆ ನಿಮಗೆ ತಿಳಿಸಲಾಗಿದ್ದರೂ, ಯಾವುದೇ ತಯಾರಿ ಇಲ್ಲದೆ ಸಭೆಗೆ ಬಂದಿದ್ದಿರಿ. ಹಾಗಾದರೆ ಈ ಸಭೆ ಕರೆದಿರುವ ಉದ್ದೇಶವಾದರೂ ಏನು ಎಂದು ತರಾಟೆಗೆ ತೆಗೆದುಕೊಂಡರು.

click me!