ಎಕ್ಸಿಕ್‌ ಬ್ಯಾಂಕ್ ನೋಟಿಸ್‌ ಗೆ ರೈತ ಬಲಿ

By Web DeskFirst Published Nov 19, 2018, 8:46 AM IST
Highlights

ಸಾಲ ಕಟ್ಟಲು ಎಕ್ಸಿಸ್ ಬ್ಯಾಂಕ್ ನಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ರೈತನೋರ್ವ ನೇಣಿಗೆ ಶರಣಾಗಿರುವ  ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೆಣಕಲ್‌ ಗ್ರಾಮದಲ್ಲಿ ನಡೆದಿದೆ.

ದೇವದುರ್ಗ :  ರೈತರಿಗೆ ವಾರಂಟ್‌ ನೀಡಿ ವಿವಾದಕ್ಕೆ ಒಳಗಾಗಿರುವ ಎಕ್ಸಿಸ್‌ ಬ್ಯಾಂಕ್‌ಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಪಡೆದಿದ್ದ ಸಾಲ ತೀರಿಸುವಂತೆ ನೀಡಿದ್ದ ನೋಟಿಸ್‌ ನೋಡಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೆಣಕಲ್‌ ಗ್ರಾಮದಲ್ಲಿ ನಡೆದಿದೆ.

ಬೆಣಕಲ್‌ ಗ್ರಾಮದ ನಿವಾಸಿ ಚಂದ್ರಪ್ಪ ತಳವಾರ ಪುತ್ರ ರಾಮಪ್ಪ ತಳವಾರ (35), ಶನಿವಾರ ರಾತ್ರಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಹೆಂಡತಿ ಯಲ್ಲಮ್ಮ ನೀಡಿದ ದೂರಿನ್ವಯ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಅಗ್ನಿ ತಿಳಿಸಿದ್ದಾರೆ.

ರಾಮಪ್ಪ, ಚಂದ್ರಪ್ಪ ಅವರ ಏಕೈಕ ಪುತ್ರನಾಗಿದ್ದು, 5 ಹೆಣ್ಣು ಮಕ್ಕಳಿದ್ದಾರೆ. ಬಡ್ಡಿ, ಅಸಲಿನ ಕಂತು 1 ಲಕ್ಷವನ್ನು ಕಟ್ಟುವಂತೆ ನೀಡಿದ್ದ ನೋಟಿಸ್‌ ಅನ್ನು ತಪ್ಪಾಗಿ ಭಾವಿಸಿ ಸಾವಿಗೆ ಶರಣಾಗಿದ್ದಾರೆ.

ರಾಮಚಂದ್ರಪ್ಪ ಬೆಣಕಲ್‌ ಸೀಮಾಂತರದ ಸರ್ವೆ ಸಂಖ್ಯೆ 35ರ ಜಮೀನಿನ ಮೇಲೆ ಏಕ್ಸಿಕ್‌ ಬ್ಯಾಂಕ್‌ನ ದೇವದುರ್ಗ ಶಾಖೆಯಲ್ಲಿ 2016ರಲ್ಲಿ 10 ಲಕ್ಷ ಸಾಲ ಪಡೆದಿದ್ದರು. ರಾಮಪ್ಪ ಅವರು ತಂದೆಯ ಹೆಸರಿನಲ್ಲಿದ್ದ ಸುಮಾರು 20 ಎಕರೆ ಭೂಮಿಯನ್ನು 2018ರ ಸೆಪ್ಟಂಬರ್‌ನಲ್ಲಿ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲದೇ ಜಮೀನಿನಲ್ಲಿ ಭತ್ತದ ಕೃಷಿ ಕೈಗೊಂಡಿದ್ದರು. ತಾಲೂಕಿನಲ್ಲಿ ಕಳೆದ 3-4 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆ ಇರಲಿಲ್ಲ. ಅಲ್ಲದೇ ಕಾಲುವೆ ನೀರು ಕೂಡ ಸಮರ್ಪಕವಾಗಿ ಪೂರೈಕೆ ಆಗಿರಲಿಲ್ಲ. ಇದರಿಂದ ನಿರಂತರವಾಗಿ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿದ್ದರು ಎಂದು ತಿಳಿದುಬಂದಿದೆ.

ಬಡ್ಡಿ ಕಟ್ಟಲು ನೋಟಿಸ್‌:  ಏಕ್ಸಿಕ್‌ ಬ್ಯಾಂಕ್‌ ಕೇಂದ್ರ ಕಚೇರಿ ಮುಂಬೈ ಪರವಾದ ಹೈಕೋರ್ಟ್‌ ವಕೀಲ ಓ.ಎಂ.ಗುಜರಿ ಅವರು, ಚಂದ್ರಪ್ಪ ಅವರಿಗೆ ಸಾಲದ ನೋಟಿಸ್‌ ನೀಡಿದ್ದರು. ನೋಟಿಸ್‌ನಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿ ಸೇರಿ ನಿಗದಿತ ಅವಧಿಗೆ ಪಾವತಿ ಮಾಡಬೇಕಾಗಿತ್ತು. ತಾವು ಒಪ್ಪಿಕೊಂಡಿದ್ದ, ಕರಾರುಗಳ ನಿಯಮಗಳನ್ನು ಪಾವತಿಸಿಲ್ಲ. ಕಾರಣ ಕೂಡಲೇ ತಮ್ಮ ಸಾಲದ ಬಡ್ಡಿ ಹಣ ಮತ್ತು ಕಂತು ಸೇರಿ 1 ಲಕ್ಷವನ್ನು ಸ್ಥಳೀಯ ಶಾಖೆಗೆ ಪಾವತಿಸಬೇಕು. ಒಂದು ವೇಳೆ ಪಾವತಿಸಿದ್ದರೆ ಈ ನೋಟಿಸ್‌ ಅನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೂಡ ತಿಳಿಸಿದ್ದಾರೆ.

ಇದನ್ನೇ ತಪ್ಪಾಗಿ ಭಾವಿಸಿದ ರಾಮಪ್ಪ ಅವರು, ಸಂಪೂರ್ಣ ಸಾಲ ಕಟ್ಟಬೇಕು ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

click me!