ಕಬ್ಬಿಗೆ ಸೂಕ್ತ ಬೆಲೆ ನೀಡಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದೇ ವೇಳೆ 2 ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಲಾಗಿದೆ.
ಮುಧೋಳ (ಬಾಗಲಕೋಟೆ) : ಕಬ್ಬಿಗೆ ನ್ಯಾಯಯುತ ದರ ನಿಗದಿ ಮಾಡಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು, ಅಲ್ಲಿಯ ತನಕ ಕಾರ್ಖಾನೆಗಳನ್ನು ಬಂದ್ ಮಾಡಬೇಕು ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹೋರಾಟ ನಡೆಸುತ್ತಿದ್ದ ರೈತರು ಕಬ್ಬು ತುಂಬಿದ್ದ ಎರಡು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಇದೇ ವೇಳೆ, ರೈತರ ಆಕ್ರೋಶಕ್ಕೆ ಕಬ್ಬು ತುಂಬಿದ್ದ 25 ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿವೆ.
ಒಂದೆಡೆ ಕಬ್ಬಿನ ದರ ನಿಗದಿ ಆಗುವ ತನಕ ಕಾರ್ಖಾನೆಗೆ ಕಬ್ಬು ಸಾಗಿಸುವುದನ್ನು ವಿರೋಧಿಸಿ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ ಇನ್ನೊಂದೆಡೆ ಸಕ್ಕರೆ ಕಾರ್ಖಾನೆಗಳಿಗೆ ರಾತ್ರೋರಾತ್ರಿ ಕದ್ದು ಮುಚ್ಚಿ ಕಬ್ಬು ಸಾಗಣೆಯಾಗುತ್ತಿತ್ತು. ಇದನ್ನು ಕಂಡ ಪ್ರತಿಭಟನಾ ನಿರತ ರೈತರು ಮುಧೋಳ ತಾಲೂಕಿನ ಕೊಳಲಿ ಮತ್ತು ಶಿರೂರ ಕ್ರಾಸ್ ಬಳಿ ಕಬ್ಬು ತುಂಬಿದ್ದ ಎರಡು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಲ್ಲಿ ಎರಡೂ ಟ್ರ್ಯಾಕ್ಟರ್‌ಗಳು ಕಬ್ಬು ಸಮೇತ ಭಸ್ಮವಾಗಿವೆ. ಇದೇ ವೇಳೆ, ಉಳಿದ 25 ಟ್ರ್ಯಾಕ್ಟರ್‌ಗಳ ಟಯರ್‌ನ ಗಾಳಿ ತೆಗೆದು ತಳ್ಳಿದ ಪರಿಣಾಮ ಟ್ರ್ಯಾಕ್ಟರ್‌ಗಳು ಉರುಳಿ, ಟನ್‌ಗಟ್ಟಲೆ ಕಬ್ಬು ರಸ್ತೆ ಬದಿ ಬಿದ್ದಿದೆ.
ಸಿಎಂ ಬ್ಯಾನರ್‌ಗೆ ಚಪ್ಪಲಿ ಹಾರ: ಏತನ್ಮಧ್ಯೆ, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರರ ಸಭೆ ನಡೆಸುವುದಾಗಿ ಭರವಸೆ ನೀಡಿ, ಕೊನೆಗೆ ಬೆಂಗಳೂರಿನಲ್ಲಿ ಸಭೆ ನಡೆಸುವ ನಿರ್ಧಾರ ಪ್ರಕಟಿಸಿದ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಕುಮಾರಸ್ವಾಮಿ ಸೇರಿ, ಹಲವು ಜನಪ್ರತಿನಿಧಿಗಳ ಹಾಗೂ ಕಾರ್ಖಾನೆ ಮಾಲೀಕರ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿ ಬೆಂಕಿ ಹಚ್ಚಿದ ಘಟನೆ ಮುಧೋಳ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ನಡೆಯಿತು.