
ಬೆಂಗಳೂರು : ‘ಹೋರಾಟ ಮಾಡುವ ರೈತರು ಗೂಂಡಾಗಳಾದರಾ? ಒಬ್ಬ ಹೋರಾಟ ನಿರತ ರೈತ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಕೇಳುವುದರ ಅರ್ಥ ಏನು? ನಿಮ್ಮ ದುರಹಂಕಾರದ ಮಾತಿಗೆ ಇತಿಮಿತಿ ಇರಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.
‘ಇದು ರೈತ ಸಮೂಹಕ್ಕೆ ಮಾಡಿರುವ ಅಪಮಾನ. ಕುಮಾರಸ್ವಾಮಿ ಅವರು ಈ ಸೊಕ್ಕಿನ, ಧಿಮಾಕಿನ ಮಾತು ನಿಲ್ಲಿಸಿ ತಕ್ಷಣ ರೈತರ ಕ್ಷಮಾಪಣೆ ಕೇಳಬೇಕು. ಬೆಳಗಾವಿ ಅಧಿವೇಶನ ಆರಂಭವಾಗುವುದರೊಳಗೆ ರೈತರ ಬಾಕಿ ಕೊಡಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.
ಭಾನುವಾರ ಸಂಜೆ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಮುಖ್ಯಮಂತ್ರಿ ಕುರ್ಚಿ ಬೇಕು. ಆದರೆ, ಜನರ ಸಮಸ್ಯೆ ಬೇಡ ಎಂದರೆ ಹೇಗೆ? ನೀವು ಬೆಳಗಾವಿಗೆ ಹೋಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.
ನಾವೂ 104 ಮಂದಿ ಶಾಸಕರಿದ್ದೇವೆ. 37 ಮಂದಿ ಶಾಸಕರ ಬೆಂಬಲ ಇಟ್ಟುಕೊಂಡು ಮುಖ್ಯಮಂತ್ರಿಯಾಗಿ ನೀವು ಮಾಡುತ್ತಿರುವುದೆಲ್ಲವನ್ನೂ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕೆ? ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಇದನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಹೋರಾಟ ಮಾಡಬೇಕಾಗುತ್ತದೆ. ನಿಮ್ಮ ಉದ್ದೇಶವೇ ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯಬಾರದು ಎಂಬುದು ಇದ್ದಂತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಈ ದುರಹಂಕಾರದ ಮಾತಿಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯರಾಗಿರುವ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಉತ್ತರ ಏನು ಎಂದು ಅವರು ಪ್ರಶ್ನಿಸಿದರು.
ಮಾನ ಮರ್ಯಾದೆ ಕಿಂಚಿತ್ತಾದರೂ ಇದ್ದರೆ ಕುಮಾರಸ್ವಾಮಿ ಅವರು ಒಂದು ಕ್ಷಣ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬಾರದು. ಇದುವರೆಗೆ ಯಾವ ಮುಖ್ಯಮಂತ್ರಿಯೂ ರೈತರ ಬಗ್ಗೆ ಈ ರೀತಿಯ ಹೇಳಿಕೆ ನೀಡಿರಲಿಲ್ಲ. ನಾವು ಕೂಡ ಪಕ್ಷದ ಹಿರಿಯ ಮುಖಂಡರ ಸಭೆ ಕರೆದು ಹೋರಾಟದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ