ಪೊಲೀಸರ ಮೇಲೆ ದಾಳಿ ಉಗ್ರ ಕೃತ್ಯ: ಹೈಕೋರ್ಟ್‌

By Kannadaprabha News  |  First Published Aug 10, 2022, 9:11 AM IST

ರಾಡ್‌, ಪೆಟ್ರೋಲ್‌ ಬಾಟಲಿಯಂತಹ ಮಾರಕಾಸ್ತ್ರದಿಂದ ದಾಳಿ ಮಾಡುವುದು ಭಯೋತ್ಪಾದಕ ಕೆಲಸ


ಬೆಂಗಳೂರು(ಆ.10):  ರಾಜಧಾನಿಯ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ಸಿಬ್ಬಂದಿ ಮೇಲೆ ಪೆಟ್ರೋಲ್‌ ಬಾಟಲಿಗಳನ್ನು ಎಸೆದು ದಾಳಿ ನಡೆಸಿರುವುದು ಮೇಲ್ನೋಟಕ್ಕೆ ‘ಭಯೋತ್ಪಾದನಾ ಕೃತ್ಯ’ ಎನಿಸಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಪ್ರಕರಣದ ಸಂಬಂಧ ಜಾಮೀನು ಕೋರಿ ಸಲ್ಲಿಸಿದ್ದ ಐವರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಅತೀಕ್‌ ಅಹಮದ್‌ ಸೇರಿ ಐವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ, ಮೇಲ್ಮನವಿಗಳನ್ನು ವಜಾಗೊಳಿಸಿದೆ.

ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ (ಯುಎಪಿಎ) ಸೆಕ್ಷನ್‌ 15ರ ಪ್ರಕಾರ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಉದ್ರಿಕ್ತ ಜನರು ಪೊಲೀಸ್‌ ಠಾಣೆಯ ಮುಂದೆ ಗುಂಪುಗೂಡಿರುವುದು ಹಾಗೂ ಠಾಣೆ ಮತ್ತು ಸಿಬ್ಬಂದಿಯ ಮೇಲೆ ರಾಡ್‌, ಪೆಟ್ರೋಲ್‌ ಬಾಟಲಿಗಳು ಮತ್ತಿತರರ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವುದು ಹಾಗೂ ಗಲಭೆ ಉಂಟುಮಾಡಿರುವುದು ‘ಭಯೋತ್ಪಾದನಾ ಕೃತ್ಯ’ ಎನಿಸಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಜಾಮೀನು ಅರ್ಜಿ ಪರಿಶೀಲಿಸುವಾಗ ಆರೋಪಿಗಳ ವಿರುದ್ಧದ ಆರೋಪಗಳು ದಂಡನಾ ಅಪರಾಧವೇ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಯುಎಪಿಎ ಅಡಿ ಜಾಮೀನು ನೀಡುವಾಗ ಸೀಮಿತ ವ್ಯಾಪ್ತಿ ಇರುತ್ತದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಕೃತ್ಯ ಎಸಗುವ ಉದ್ದೇಶದಿಂದಲೇ ಘಟನೆ ಸ್ಥಳದಲ್ಲಿ ಆರೋಪಿಗಳು ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದು ದೋಷಾರೋಪ ಪಟ್ಟಿಯಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಜಾಮೀನು ಪಡೆಯಲು ಅರ್ಜಿದಾರರು ಅರ್ಹರಾಗಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

Tap to resize

Latest Videos

ಒಪ್ಪಂದ ಮುಗಿದ ಬಳಿಕ Cheque Bounce ಆದರೆ ಶಿಕ್ಷಾರ್ಹವಲ್ಲ: ಹೈಕೋರ್ಟ್

ವಕೀಲರ ವಾದ- ಪ್ರತಿವಾದ:

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ತಾಹೀರ್‌, ಎನ್‌ಐಎ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ದೊಂಬಿ ಅಥವಾ ಗಲಭೆಯಲ್ಲಿ ಭಾಗವಹಿಸಿಲ್ಲ. ಅರ್ಜಿದಾರರ ವಿರುದ್ಧ ಕೆಲ ಸಾಕ್ಷಿಗಳು ನೀಡಿರುವ ಹೇಳಿಕೆಗಳಿಗೂ ಮತ್ತು ಅದೇ ಸಾಕ್ಷಿಗಳು ಸಿಸಿಬಿ ಮುಂದೆ ನೀಡಿದ್ದ ಹೇಳಿಕೆಗಳೂ ತದ್ವಿರುದ್ಧವಾಗಿದೆ. ಎನ್‌ಐಎ ತನಗೆ ಬೇಕಾದ ಹಾಗೆ ಸಾಕ್ಷಿಗಳ ಹೇಳಿಕೆಗಳನ್ನು ತಿರುಚಿದೆ. ಆದರೂ ವಿಚಾರಣಾ ನ್ಯಾಯಾಲಯ ಅರ್ಜಿದಾರರಿಗೆ ಜಾಮೀನು ನಿರಾಕರಿಸಿರುವುದು ಕಾನೂನು ಬಾಹಿರವಾಗಿದೆ ಎಂದು ವಾದ ಮಂಡಿಸಿದ್ದರು.

ಈ ವಾದವನ್ನು ಆಕ್ಷೇಪಿಸಿದ್ದ ಎನ್‌ಐಎ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್‌, ಭಯೋತ್ಪಾದನಾ ಕೃತ್ಯ ಎಸಗಲು ಅರ್ಜಿದಾರ ಆರೋಪಿಗಳು ಗುಂಪು ಸೇರಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಆದ್ದರಿಂದ, ಆರೋಪಿಗಳಿಗೆ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು.

ಕೋರ್ಟ್‌ ಹೇಳಿದ್ದೇನು?

- ಪೊಲೀಸ್‌ ಠಾಣೆ, ಸಿಬ್ಬಂದಿ ಮೇಲೆ ಗಲಭೆ ನಡೆಸುವುದು ಉಗ್ರ ಕೃತ್ಯ
- ಜನರಲ್ಲಿ ಭಯ ಹುಟ್ಟಿಸಲು ಠಾಣೆ ಮುಂದೆ ಸೇರುವುದು ಕೂಡ ಅದೇ
- ಯುಎಪಿಎ ಕಾಯ್ದೆ ಸೆಕ್ಷನ್‌ 15 ಭಯೋತ್ಪಾದನಾ ಕೃತ್ಯ ಎಂದು ಹೇಳುತ್ತೆ
- ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಆರೋಪಿಗಳಿಗೆ ಜಾಮೀನಿಲ್ಲ
 

click me!