
ಕಲಬುರಗಿ(ಜ.12): ಜಿಲ್ಲೆಯ ಯಡ್ರಾಮಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರು ತಮ್ಮದೇ ಸರ್ಕಾರದ ಸಚಿವರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಶಿಕ್ಷಣ ವ್ಯವಸ್ಥೆ, ಪ್ರಾದೇಶಿಕ ಅಸಮಾನತೆ ಮತ್ತು ನರೇಗಾ ಯೋಜನೆ ಕುರಿತು ಖರ್ಗೆ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ತೀವ್ರ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ ಅವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನೇರ ಎಚ್ಚರಿಕೆ ನೀಡಿದರು. 'ನಮ್ಮ ಭಾಗಕ್ಕೆ ಶಾಲೆಗಳು ಬರುತ್ತಿವೆ, ಆದರೆ ಅಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲ. ಶಿಕ್ಷಕರಿಲ್ಲದಿದ್ದರೆ ಗ್ರಾಮೀಣ ಭಾಗದ ಮಕ್ಕಳು ಉದ್ದಾರ ಆಗುವುದು ಹೇಗೆ? ಸಚಿವರೇ, ನಮಗೆ ಕಟ್ಟಡ ಬೇಡ, ಮೊದಲು ಶಿಕ್ಷಕರನ್ನು ಕೊಡಿ. ಬೇಕಿದ್ದರೆ ಮಕ್ಕಳನ್ನು ಗಿಡದ ಕೆಳಗಾದರೂ ಕೂರಿಸಿ ಓದಿಸುತ್ತೇವೆ. ಶಿಕ್ಷಕರ ನೇಮಕಾತಿಯಲ್ಲಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಅವರು 'ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನೋಡಿ ನಾನು ಇಲ್ಲೇ ಹುಟ್ಟಬೇಕಿತ್ತು ಅನಿಸುತ್ತಿದೆ' ಎಂದಿದ್ದಕ್ಕೆ ಖರ್ಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು. 'ಶಿವಕುಮಾರ್ ಅವರೇ, ನೀವು ಇಲ್ಲಿ ಹುಟ್ಟುವುದೂ ಬೇಡ, ನಾವು ಅಲ್ಲಿ ಹುಟ್ಟುವುದೂ ಬೇಡ. ನಮಗೆ ಸಿಂಗಾಪುರ, ಲಂಡನ್ ಕನಸು ಬೇಡ; ಸಿದ್ದರಾಮಯ್ಯ ಅವರ ಮೈಸೂರು ಹೇಗಿದೆ, ನಿಮ್ಮ ಕ್ಷೇತ್ರ ಕನಕಪುರ ಹೇಗಿದೆ ಹಾಗೆ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಿಕೊಡಿ ಸಾಕು. ಬಫೆ ಸಿಸ್ಟಮ್‌ನಲ್ಲಿ ಎಲ್ಲರಿಗೂ ಊಟ ಸಿಗುತ್ತದೆ, ಆದರೆ ಪಂತಿಯಲ್ಲಿ ಕುಳಿತವರಿಗೆ ಸಿಗಲ್ಲ. ನಮ್ಮದು ಪಂತಿಯಲ್ಲಿ ಕುಳಿತ ಸ್ಥಿತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿ ಕನ್ನಡ ಕಲಿತಿದ್ದಾರೆ. ಸರ್ಕಾರಿ ಶಾಲೆಯಲ್ಲೇ ಕಲಿತು ಎರಡು ಬಾರಿ ರಾಜ್ಯದ ಸಿಎಂ ಆಗಿದ್ದಾರೆ. ಡಿಕೆ ಶಿವಕುಮಾರ್ ಅವರೇ ನೀವು ಕಾನ್ವೆಂಟ್‌ನಲ್ಲಿ ಅರ್ಧ ಸರ್ಕಾರಿ ಶಾಲೆಯಲ್ಲಿ ಅರ್ಧ ಕಲಿತಿರಬೇಕು ಅಲ್ವಾ? ಎಂದು ಪ್ರಶ್ನಿಸಿದ ಖರ್ಗೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ ಬಗ್ಗೆ ಮಾತನಾಡುವಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ತಿವಿದರು.
'ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ': ಮೋದಿ ವಿರುದ್ಧ ಆಕ್ರೋಶ
ಕೇಂದ್ರ ಸರ್ಕಾರದ ನರೇಗಾ ಯೋಜನೆ ಬದಲಾವಣೆ ಕುರಿತು ಮಾತನಾಡಿದ ಖರ್ಗೆ, ಮೋದಿ ಅವರು ಮನರೇಗಾ ಕಿತ್ತುಹಾಕಿ 'ಜಿ ರಾಮ್ ಜಿ' ಯೋಜನೆ ತಂದಿರುವುದು ಬಡವರಿಗೆ ಮಾಡಿದ ದ್ರೋಹ. ಸೋನಿಯಾ ಗಾಂಧಿ ಅವರು ಬಡವರ ಹೊಟ್ಟೆ ತುಂಬಿಸಲು ನರೇಗಾ ತಂದರೆ, ಮೋದಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದಂತೆ, ನರೇಗಾ ವಿಚಾರದಲ್ಲೂ ಮೋದಿ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಜನ ದಂಗೆ ಏಳಲಿದ್ದಾರೆ' ಎಂದು ಎಚ್ಚರಿಸಿದರು.
ಸ್ವಪಕ್ಷದ ನಾಯಕರ ಕಿವಿ ಹಿಂಡಿದ ಎಐಸಿಸಿ ಅಧ್ಯಕ್ಷರು
ಜನರ ಪರವಾಗಿ ಹೋರಾಟ ಮಾಡದ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರಿಗೆ ಖರ್ಗೆ ಚಾಟಿ ಬೀಸಿದರು. ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದರೂ ಇಲ್ಲಿ ಯಾರೊಬ್ಬರೂ ಬೀದಿಗಿಳಿಯುತ್ತಿಲ್ಲ, ಹೋರಾಟ ಮಾಡುತ್ತಿಲ್ಲ ಎಂದರೆ ನಿಮ್ಮೆಲ್ಲರ ಹೊಟ್ಟೆ ತುಂಬಿದೆ ಎಂದರ್ಥವೇ? ಜನರು ತಮ್ಮ ಹಕ್ಕುಗಳಿಗಾಗಿ ಯುದ್ಧಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಗಂಟೆ ಬಾರಿಸಿದರೆ ದೇವರು ಒಲಿಯಲ್ಲ: ಮೋದಿಯ ದೇವಸ್ಥಾನ ಭೇಟಿಗೆ ವ್ಯಂಗ್ಯ
ಪ್ರಧಾನಿ ಮೋದಿ ಅವರ ಸೋಮನಾಥ ದೇವಾಲಯ ಭೇಟಿಯನ್ನು ಟೀಕಿಸಿದ ಖರ್ಗೆ, "ಮೋದಿ ಬರೀ ಹಳೆಯ ಗುಡಿ ಗುಂಡಾರಗಳನ್ನು ಸುತ್ತುತ್ತಿದ್ದಾರೆ. ಸಾವಿರ ವರ್ಷದ ಸೋಮನಾಥ ದೇವಸ್ಥಾನ ಈಗ ನೆನಪಾಗಿದೆಯೇ? ಇಷ್ಟು ದಿನ ಏಕೆ ನೆನಪಾಗಲಿಲ್ಲ? ಕೇವಲ ಚುನಾವಣೆ ದೃಷ್ಟಿಯಿಂದ ಮೋದಿ ಇಂತಹ ನಾಟಕವಾಡುತ್ತಿದ್ದಾರೆ. ಗುಡಿಗೆ ಹೋಗಿ ಗಂಟೆ ಬಾರಿಸಿದರೆ ದೇವರು ಪ್ರಸನ್ನನಾಗುವುದಿಲ್ಲ, ಮಾಡುವ ಕೆಲಸದಿಂದ ಮಾತ್ರ ದೇವರು ಒಲಿಯುತ್ತಾನೆ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ