ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್‌, ಅಶ್ವತ್ಥನಾರಾಯಣ ಚಾಲನೆ

By Suvarna NewsFirst Published Jun 1, 2021, 7:22 PM IST
Highlights

* ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್‌ಗೆ ಚಾಲನೆ
* ವ್ಯಾಕ್ಸಿನ್‌ಗೆ ಚಾಲನೆ ಕೊಟ್ಟ ಡಾ.ಸಿ.ಎನ್.‌ಅಶ್ವತ್ಥನಾರಾಯಣ
* ಬೆಂಗಳೂರು ನಗರ ವಿಶ್ವವಿದ್ಯಾಲಯದ ‌ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆಗೆ ಚಾಲನೆ

ಬೆಂಗಳೂರು, (ಜೂನ್.01): ವಿದೇಶದಲ್ಲಿ ಉದ್ಯೋಗ ಮತ್ತು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಚಾಲನೆ ನೀಡಿದರು. 

ಬೆಂಗಳೂರು ನಗರ ವಿಶ್ವವಿದ್ಯಾಲಯದ ‌ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ಹಾಕಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು. 

ಕೊರೋನಾ ಲಸಿಕೆ: ಸರ್ಕಾರಕ್ಕೆ ಕುಮಾರಸ್ವಾಮಿ ಮಹತ್ವದ ಸಲಹೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು 6 ವಾರಗಳ ಅಂತರದಲ್ಲಿ ಇವರಿಗೆ ಎರಡನೇ ಡೋಸ್‌ ನೀಡಿ, ವ್ಯಾಕ್ಸಿನ್‌ ಪಡೆದಿರುವ ಬಗ್ಗೆ ಪಾಸ್ ಪೋರ್ಟ್ ನಂಬರ್ ಸಹಿತ ಸರ್ಟಿಫಿಕೇಟ್‌ ನೀಡಲಾಗುವುದು ಎಂದರು. 

ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ʼಕೋವಿಶೀಲ್ಡ್‌ʼ ಲಸಿಕೆಯನ್ನೇ ನೀಡಲಾಗುತ್ತಿದೆ  ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು. 

ಲಸಿಕೆ ಪಡೆಯುವವರು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಜತೆಗೆ, ವಿದೇಶದಲ್ಲಿನ ತಮ್ಮ ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಹಾಜರುಪಡಿಸುವುದು ಕಡ್ಡಾಯ. ಅದೇ ಮಾರ್ಗಸೂಚಿಯಂತೆ ಇವರಿಗೆ ವ್ಯಾಕ್ಸಿನ್‌ ಕೊಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. 

ಬೆಂಗಳೂರು: ಕೋವ್ಯಾಕ್ಸಿನ್ 2ನೇ ಡೋಸ್​ಗೆ ಕಾಯ್ತಿದ್ದೀರಾ..? ಈ 27 ಕೇಂದ್ರಗಳಲ್ಲಿ ಲಭ್ಯ

ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ
ಬ್ಲ್ಯಾಕ್‌ ಫಂಗಸ್‌ಗೆ ʼಲೈಸೋಜೋಮಲ್‌ ಆಂಫೋಟೆರಿಸಿನ್- ಬಿʼ ಔಷಧಿಯ ಕೊರತೆ ಮಾತ್ರ ಇದೆ. ಅದಕ್ಕೆ ಪರ್ಯಾಯವಾಗಿ ಇನ್ನೂ ಪರಿಣಾಮಕಾರಿಯಾದ ಸಾಕಷ್ಟು ಔಷಧಿಗಳಿವೆ. ಆದರೆ, ಸೈಡ್‌ ಏಫೆಕ್ಟ್‌ಗಳಾಗುತ್ತಿವೆ ಎನ್ನುವ ಕಾರಣವೊಡ್ಡಿ ಜನರು ಇವುಗಳನ್ನು ಬಳಕೆ ಮಾಡುತ್ತಿಲ್ಲ. ಆದರೂ ಸರಕಾರಿ-ಖಾಸಗಿ ಆಸ್ಪತ್ರೆಗಳಿಗೆ ಈ ಪರ್ಯಾಯ ಔಷಧಿಗಳನ್ನೇ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. 

ʼʼಲೈಸೋಜೋಮಲ್‌ ಆಂಫೋಟೆರಿಸಿನ್- ಬಿʼʼ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈಗ ಒಂದು ಲಕ್ಷ ವಯಲ್ಸ್‌ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ಮೂರು ಲಕ್ಷ ವಯಲ್ಸ್‌ ಖರೀದಿಗೆ  ಆದೇಶ ನೀಡಲಾಗಿದೆ. ʼಕಾಸೋಕೊನೋಜಲ್‌ʼ ಔಷಧಿಯ 15,000  ವಯಲ್ಸ್‌ ಖರೀದಿಗೆ ಆದೇಶ ಕೊಡಲಾಗಿದೆ. ʼಇಸ್ವಕೋನೋಜಲ್‌ʼ ಎಂಬ ಔಷಧಿಯ 7,000 ವಯಲ್ಸ್‌, ʼಪೊಸಕೊನೊಜಲ್‌ʼ ಟ್ಯಾಬ್ಲೆಟ್‌ ಖರೀದಿಗೂ ಆದೇಶ ನೀಡಲಾಗಿದೆ ಎಂದು ಅವರು ವಿವರ ನೀಡಿದರು. 

ಇನ್ನು ಲಾಕ್‌ಡೌನ್‌ ಮುಂದುವರಿಸುವ ಅಥವಾ ಸೆಮಿಲಾಕ್‌ ಮಾಡುವ ಬಗ್ಗೆ ತಜ್ಞರ ವರದಿ ಬಂದ ಮೇಲೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!