ಬೆಂಗಳೂರಲ್ಲಿ ಪ್ರತಿಭಟಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ!

By Suvarna NewsFirst Published Jan 18, 2020, 11:35 AM IST
Highlights

‘ಆಶಾ’ ಕಾರ್ಯಕರ್ತರಿಗೆ ಒಂದೇ ಕಂತಲ್ಲಿ ರೂ3000| ಬೆಂಗಳೂರಲ್ಲಿ ಪ್ರತಿಭಟಿಸಿದ್ದ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ| ಮತಯಂತ್ರ ರಕ್ಷಣೆಗೆ ಎಲ್ಲ ಜಿಲ್ಲೆಗಳಲ್ಲಿ ಗೋದಾಮು: ಸಂಪುಟ ನಿರ್ಧಾರ| ಬೆಂಗಳೂರು, ವಿಜಯಪುರದಲ್ಲಿ ಬಿಗಿಭದ್ರತೆಯ ವಿಶೇಷ ಕಾರಾಗೃಹ| ಸರ್ಕಾರಿ ಭೂ ರಕ್ಷಣೆ ಸಮಿತಿಗೆ ಎಟಿಆರ್‌ ಬದಲು ಬೋಪಯ್ಯ ನೇತೃತ್ವ

ಬೆಂಗಳೂರು[ಜ.18]: ಇತ್ತೀಚೆಗೆ ಬೃಹತ್‌ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದೆ. ಮೂರು ಸಾವಿರ ರು. ಪ್ರೋತ್ಸಾಹ ಧನವನ್ನು ಒಂದೇ ಬಾರಿಗೆ ನೀಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಸಂಪುಟ ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ : ಕಿವಿ ಮೇಲೆ ಹೂ ಇಟ್ಟ ಸಚಿವ ಶ್ರೀರಾಮುಲು

ಪ್ರೋತ್ಸಾಹ ಧನವನ್ನು ಒಂದೇ ಬಾರಿಗೆ ನೀಡುವಂತೆ ಆಶಾ ಕಾರ್ಯಕರ್ತೆಯರು ಬೇಡಿಕೆಯನ್ನಿಟ್ಟಿದ್ದರು. ಅದರಂತೆ ಮೂರು ಸಾವಿರ ರು. ಪ್ರೋತ್ಸಾಹ ಧನವನ್ನು ಒಂದೇ ಬಾರಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 41,628 ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರು. ನೀಡಲಾಗುವುದು. 12.48 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿದರು.

ಭೂಸಂರಕ್ಷಣಾ ಸಮಿತಿಗೆ ಬೋಪಯ್ಯ:

ಸರ್ಕಾರಿ ಜಮೀನು ಸಂರಕ್ಷಣೆ ಮಾಡುವ ಸಂಬಂಧ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣೆ ಸಮಿತಿಯನ್ನು ಪುನರಚನೆ ಮಾಡಲಾಗಿದೆ. ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಶಾಸಕರಾದ ಆರಗ ಜ್ಞಾನೇಂದ್ರ, ಎಸ್‌.ಆರ್‌.ವಿಶ್ವನಾಥ್‌, ಎ.ಟಿ.ರಾಮಸ್ವಾಮಿ, ರಾಜಶೇಖರ್‌ ಬಸವರಾಜ ಪಾಟೀಲ್‌, ರಾಜುಗೌಡ ಅವರು ಸದಸ್ಯರಾಗಿದ್ದಾರೆ. ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ಗುರುತಿಸುವುದು, ತೆರವುಗೊಳಿಸುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವ ಕಾರ್ಯವನ್ನು ಸಮಿತಿ ಕೈಗೊಳ್ಳಲಿದೆ ಎಂದು ಹೇಳಿದರು.

ಮತಯಂತ್ರ ರಕ್ಷಣೆಗಾಗಿ ಗೋದಾಮು:

ಚುನಾವಣೆಯ ಮತಯಂತ್ರ ಮತ್ತು ವಿವಿಪ್ಯಾಟ್‌ಗಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಗೋದಾಮುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ವಿಶೇಷ ಗೋದಾಮುಗಳನ್ನು ನಿರ್ಮಿಸಲು 123 ಕೋಟಿ ರು. ಬಿಡುಗಡೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ. ಗೋದಾಮುಗಳನ್ನು ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಭದ್ರತೆಯನ್ನು ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅವಧಿಯು ಮುಗಿದಿರುವ ಹಿನ್ನೆಲೆಯಲ್ಲಿ ಅದರ ಕಾರ್ಯ ಅವಧಿಯನ್ನು ಒಂದು ವರ್ಷಗಳ ಕಾಲ ಮುಂದುವರಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪೀಣ್ಯ ಮತ್ತು ಹುಬ್ಬಳ್ಳಿಯ ಎಂ.ಟಿ.ಸಾಗರ ವಸಾಹತು ಪ್ರದೇಶದಲ್ಲಿ ಮೂಲಸೌಕರ್ಯ ಹಳೆಯದಾಗಿರುವ ಕಾರಣ ಮೂಲಭೂತ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಪೀಣ್ಯ ವಸಾಹತು ಪ್ರದೇಶಕ್ಕೆ 50 ಕೋಟಿ ರು., ಎಂ.ಟಿ.ಸಾಗರ ವಸಾಹತು ಪ್ರದೇಶಕ್ಕೆ 18.5 ಕೋಟಿ ರು. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅತ್ಯುನ್ನತ ಭದ್ರತಾ ವಾರ್ಡ್‌ ನಿರ್ಮಾಣಕ್ಕೆ 100 ಕೋಟಿ ರು. ಮತ್ತು ಮತ್ತು ವಿಜಯಪುರದಲ್ಲಿ ವಿಶೇಷ ಕಾರಾಗೃಹ ನಿರ್ಮಾಣಕ್ಕೆ 99.98 ಕೋಟಿ ರು. ಆಡಳಿತಾತ್ಮಕ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. 3236 ವಿಚಾರಣಾ ಬಂಧಿಗಳಲ್ಲಿ ಕುಖ್ಯಾತ ರೌಡಿಗಳು, ವಿವಿಧ ಉಗ್ರ ಸಂಘಟನೆಗಳ ಅಪರಾಧಿಗಳು, ನಕ್ಸಲ್‌ ಬಂಧಿಗಳಿದ್ದಾರೆ. ಭದ್ರತಾ ದೃಷ್ಟಿಯಿಂದ ಸಾಮಾನ್ಯ ವಿಚಾರಣಾಧೀನ ಕೈದಿಗಳಿಂದ ಬೇರ್ಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಸ್ಥಳದ ಅಭಾವದಿಂದ ಗರಿಷ್ಠ ಭದ್ರತಾ ವಾರ್ಡ್‌ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ:

ಕಲಬುರಗಿಯಲ್ಲಿ ಆರೋಗ್ಯ ಇಲಾಖೆ ಕಚೇರಿಯಲ್ಲಿ ಜಯದೇವ ಆಸ್ಪತ್ರೆಯನ್ನು ಸ್ಥಾಪನೆ ಮಾಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಕಲ್ಯಾಣ ಕರ್ನಾಟಕ ನಿಧಿಯಿಂದ 150 ಕೋಟಿ ರು. ವೆಚ್ಚ ಮಾಡಬೇಕು. ಪ್ರತಿ ವರ್ಷ 50 ಕೋಟಿ ರು.ಗಳಂತೆ ಮೂರು ವರ್ಷಗಳ ಕಾಲ ವೆಚ್ಚ ಮಾಡಬೇಕು. ಇದಕ್ಕಾಗಿ 59.10 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಪಾವತಿ ಮಾಡಲು ನಿರ್ಧರಿಸಲಾಗಿದೆ.

ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಅನುಮೋದನೆ ಸಿಕ್ಕಿದೆ. ಶೇ.60ರಷ್ಟುಕೇಂದ್ರ ಮತ್ತು ಶೇ.40ರಷ್ಟುರಾಜ್ಯ ಸರ್ಕಾರವು ಅನುದಾನವನ್ನು ಭರಿಸಲಿದೆ. ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ನೀಡಲಾಗುತ್ತದೆ. ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. 478 ಕೋಟಿ ರು. ಅನುದಾನ ನೀಡಲಾಗುವುದು. ಕಾರವಾರದಲ್ಲಿನ ಸರ್ಕಾರಿ ಆಸ್ಪತ್ರೆಯು 300 ಹಾಸಿಗೆ ಸಾಮರ್ಥ್ಯವುಳ್ಳದಾಗಿದ್ದು, ಹೆಚ್ಚುವರಿಯಾಗಿ 450 ಹಾಸಿಗೆಯನ್ನು ನೀಡಿ ಒಟ್ಟು 750 ಹಾಸಿಗೆ ಸಾಮರ್ಥ್ಯಕ್ಕೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಶಾಕ್ ನೀಡಿದ ಸರ್ಕಾರ; ವೇತನ ಕಟ್!

ವಿಜಯನಗರ ವೈದ್ಯಕೀಯ ಕಾಲೇಜು ಆವರಣದಲ್ಲಿ ಉಪನ್ಯಾಸ ಕೊಠಡಿ, ಪರೀಕ್ಷಾ ಕೊಠಡಿಗೆ 40 ಕೋಟಿ ರು. ನೀಡಲು ಒಪ್ಪಿಗೆ ನೀಡಲಾಗಿದೆ. ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಟೆಂಡರ್‌ ಮೊತ್ತ ಹೆಚ್ಚಳವಾಗಿದ್ದರಿಂದ 500 ಕೋಟಿ ರು.ನಿಂದ 508 ಕೋಟಿ ರು.ಗೆ ಇಳಿಕೆ ಮಾಡಲಾಗಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಿಸಲು 132 ಕೋಟಿ ರು. ಅನುಮೋದನೆ ನೀಡಲಾಗಿದೆ ಎಂದರು.

click me!