ಹುಬ್ಬಳ್ಳಿ, ಗದಗ ರೈಲುಗಳಿಗೆ ಬೈಪಾಸ್ ವ್ಯವಸ್ಥೆ ಮಾಡಿ, ವಿಜಯಪುರಕ್ಕೆ ಪ್ರಯಾಣದ ಅವಧಿ ತಗ್ಗಿಸಿ: ಎಂ.ಬಿ. ಪಾಟೀಲ!

By Sathish Kumar KH  |  First Published Aug 27, 2024, 8:26 PM IST

ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುವ ರೈಲುಗಳಿಗೆ ಹುಬ್ಬಳ್ಳಿ, ಗದಗದಲ್ಲಿ ಬೈಪಾಸ್ ವ್ಯವಸ್ಥೆ ಮಾಡಿ ಪ್ರಯಾಣದ ಅವಧಿಯಲ್ಲಿ 10 ಗಂಟೆಗೆ ಇಳಿಕೆ ಮಾಡುವಂತೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದ್ದಾರೆ.


ಬೆಂಗಳೂರು (ಆ.27): ಬೆಂಗಳೂರಿನಿಂದ ಪ್ರತಿನಿತ್ಯ ವಿಜಯಪುರಕ್ಕೆ ಹೋಗುವ ರೈಲುಗಳು ಹುಬ್ಬಳ್ಳಿ ಹಾಗೂ ಗದಗ ನಗರದಲ್ಲಿ ಗಂಟೆಗಟ್ಟಲೇ ನಿಲ್ಲುತ್ತವೆ. ಹುಬ್ಬಳ್ಳಿಯ ಮುಖ್ಯ ರೈಲು ನಿಲ್ದಾಣದಲ್ಲಿ ಎಂಜಿನ್ ಚೇಂಜ್ ಮಾಡಿಕೊಂಡು ಬರಲು ರೈಲು ನಿಲ್ಲಿಸಿ ವಿಳಂಬ ಮಾಡಲಾಗುತ್ತಿದೆ. ಕೂಡಲೇ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬೈಪಾಸ್ ಮೂಲಕವೇ ರೈಲುಗಳು ಸಂಚಾರ ಮಾಡುವಂತೆ ವ್ಯವಸ್ಥೆ ಮಾಡಿ, ಪ್ರಯಾಣದ ಅವಧಿಯನ್ನು ಉಳಿತಾಯ ಮಾಡಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.

ರೈಲ್ವೆ ಇಲಾಖೆಯೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ಗದಗ- ವಾಡಿ, ಧಾರವಾಡ-ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ಹಲವಾರು ರೈಲ್ವೆ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಅಡೆತಡೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮತ್ತು ಯೋಜನೆಗಳ ತ್ವರಿತ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಮಹತ್ತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Tap to resize

Latest Videos

undefined

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ವೈದ್ಯಕೀಯ ಭತ್ಯೆ ಶೇ.150 ಹೆಚ್ಚಳ

ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುತ್ತಿರುವ ಗೂಡ್ಸ್ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣದ ಸಮೀಪದ ಬೈಪಾಸ್ ಮೂಲಕ ಗದಗದ ಕಡೆಗೆ ತಿರುಗುತ್ತಿವೆ. ಅಲ್ಲೂ ಸಹ ಗದಗ ಮುಖ್ಯ ನಿಲ್ದಾಣಕ್ಕೆ ಹೋಗದೆ ಬೈಪಾಸ್ ನಲ್ಲೇ ವಿಜಯಪುರ, ಸೊಲ್ಲಾಪುರದ ಕಡೆಗೆ ಹೋಗುತ್ತಿವೆ. ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಬರುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿವೆ. ಆದ್ದರಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಆದಷ್ಟು ಬೇಗ ಅಭಿವೃದ್ಧಿಪಡಿಸಿ, ವಿಜಯಪುರ ಕಡೆ‌ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗದ ಕಡೆ ತಿರುಗಿಸುವ ಕೆಲಸ ಆಗಬೇಕು. ಅದೇ ರೀತಿ ಗದಗದಲ್ಲಿಯೂ ಬೈಪಾಸ್ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು. ಇದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು ಎಂದು ಸಚಿವರು ರೈಲ್ವೆ ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಚಿವರು ತಮ್ಮ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೆಂಗಳೂರು- ವಿಜಯಪುರ ನಡುವೆ 10 ಗಂಟೆ ಪಯಣ: ಗದಗ- ಹುಟಗಿ ನಡುವೆ 242 ಕಿ.ಮೀ. ನಡುವಿನ ಜೋಡಿ ಹಳಿ ಅಭಿವೃದ್ಧಿ ಕಾರ್ಯ ಬಹುತೇಕ ಮುಗಿದಿದೆ. ಆದರೆ, ಬಾಗಲಕೋಟೆ- ವಂಡಾಲ್ ನಡುವೆ 45 ಕಿ.ಮೀ ಜೋಡಿ ರೈಲು ಕಾಮಗಾರಿ ಬಾಕಿ‌ ಇದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಬೇಕು. ವಿಳಂಬ ಅಂದರೂ ಮಾರ್ಚ್ ಹೊತ್ತಿಗೆ ಮುಗಿಯಲಿದೆ. ಜತೆಗೆ, ಆಲಮಟ್ಟಿ ಪ್ರದೇಶದಲ್ಲಿ ಕೂಡ ಕೆಲವು ಕಿರು ಸೇತುವೆಗಳ ನಿರ್ಮಾಣ ಬಾಕಿ‌ ಇದೆ. ಇದರಿಂದಾಗಿ ಬೆಂಗಳೂರು- ವಿಜಯಪುರ ರೈಲು ಪಯಣಕ್ಕೆ ಈಗ 14-15 ಗಂಟೆ ಹಿಡಿಯುತ್ತಿದೆ. ಈ ಸಮಸ್ಯೆಯಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭಕ್ಕೂ ವಿಘ್ನ ಎದುರಾಗಿದೆ. ಇದನ್ನು ಸರಿಪಡಿಸಿದರೆ ಬೆಂಗಳೂರು- ವಿಜಯಪುರ ಪಯಣ 10-11 ಗಂಟೆಗಳಿಗೆ ಇಳಿಯಲಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ರೈಲು ಹಳಿಗೆ ತಲೆ ಇಟ್ಟು ಗಡದ್ ನಿದ್ದೆಗೆ ಜಾರಿದ ಭೂಪ, ಟ್ರೈನ್ ಬಂದರೂ ಏಳಲೇ ಇಲ್ಲ!

ಗದಗ-ವಾಡಿ ಯೋಜನೆಯಲ್ಲಿ ಶಹಾಪುರ-ಬಿರಾಲ್ ಬುಜೂರು ಬಳಿ ಇರುವ ಹಳಕಟ್ಟಾ ಬಳಿ 11 ಎಕರೆ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಇದರಿಂದಾಗಿ 26 ಕಿ.ಮೀ. ಕಾಮಗಾರಿ ನಿಂತಿದೆ. ಹಿಂದೆಯೇ ಕಲಬುರಗಿ ಜಿಲ್ಲಾಧಿಕಾರಿಗೆ ಇದನ್ನು ಗಮನಕ್ಕೆ ತರಲಾಗಿತ್ತು. ಆದರೂ ಸಮಸ್ಯೆ ಹಾಗೆಯೇ ಇದೆ. ಈ ಕಾಮಗಾರಿಯನ್ನು 2025ರ ಜೂನ್ ಒಳಗೆ ಮುಗಿಸಬೇಕು ಎಂದು ಸಚಿವರು ಹೇಳಿದರು. ಜತೆಗೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಭೂಸ್ವಾಧೀನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.

ಗದಗ-ವಾಡಿ ಯೋಜನೆ 2028ರೊಳಗೆ, ಬಾಗಲಕೋಟೆ-ಕುಡಚಿ ಯೋಜನೆ 2026ರ ಡಿಸೆಂಬರ್ ಹೊತ್ತಿಗೆ ಪೂರ್ಣವಾಗಬೇಕು. ತುಮಕೂರು- ದಾವಣಗೆರೆ ಯೋಜನೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಕೊಡಬೇಕಾಗಿದೆ. ಜತೆಗೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೈಪ್ ಲೈನ್, ವಿದ್ಯುತ್ ಕಂಬಗಳು ಎಲ್ಲವನ್ನೂ ಬದಲಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು. ಜೊತೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಉನ್ನತಾಧಿಕಾರಿ ಮೋಹನರಾಜ್ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

click me!