
ವಿಧಾನಸಭೆ(ಜ.30): ಸರ್ಕಾರಿ ‘ಕೃಷಿ ಮಾರಾಟ ವಾಹಿನಿ’ ಜಾಲತಾಣದಲ್ಲೇ ಅಡಕೆಯನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿದ ಬಗ್ಗೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಸದನದಲ್ಲಿ ಮಾರ್ದನಿಸಿದ್ದು, ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಆಡಳಿತ ಪಕ್ಷದ ಸದಸ್ಯರೇ ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸರ್ಕಾರದ ‘ಕೃಷಿ ಮಾರಾಟ ವಾಹಿನಿ’ ಜಾಲತಾಣದಲ್ಲಿ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿದ್ದ ಬಗ್ಗೆ ‘ಕನ್ನಡಪ್ರಭ’ ಗುರುವಾರ ವಿಶೇಷ ವರದಿ ಪ್ರಕಟಿಸಿತ್ತು. ವಿಧಾನಸಭೆಯ ಶೂನ್ಯವೇಳೆಯಲ್ಲಿ ಪತ್ರಿಕೆಯ ವರದಿ ಪ್ರಸ್ತಾಪಿಸಿದ ಹರತಾಳು ಹಾಲಪ್ಪ, ಪ್ರತಿ ವರ್ಷ ಅಡಕೆ ಸುಗ್ಗಿ ಕಾಲದಲ್ಲಿ ಅಡಕೆ ಬೆಳೆಗಾರರಿಗೆ ಅನ್ಯಾಯವಾಗುವಂತಹ ಯಾವುದಾದರೂ ಒಂದು ಘಟನೆ ನಡೆಯುತ್ತದೆ. ಈ ಬಾರಿ ಖುದ್ದು ಸರ್ಕಾರದ ಜಾಲತಾಣದಲ್ಲೇ ಅಡಕೆಯನ್ನು ಡ್ರಗ್ಸ್$ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ರೈತರ ಅಡಕೆಗೆ ಬೆಲೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸಿದ್ದು ಯಾರು? ಸರ್ಕಾರದ ಸೂಚನೆ ಮೇರೆಗೆ ಜಾಲತಾಣದಲ್ಲಿ ಪ್ರಕಟಿಸಲಾಗಿದೆಯೇ ಅಥವಾ ಅಧಿಕಾರಿಗಳೇ ಅಡಕೆಯನ್ನು ಡ್ರಗ್ಸ್ ಎಂದು ತೀರ್ಮಾನಿಸಿದರೇ? ಎಂಬುದು ಬಹಿರಂಗವಾಗಬೇಕು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪ್ರತಿ ಕ್ವಿಂಟಲ್‌ಗೆ ಅಡಕೆ 5 ಸಾವಿರ ರು. ದಾರಣೆ ಕುಸಿದಿದೆ ಎಂದು ಕಿಡಿಕಾರಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಎಂ.ಪಿ. ಕುಮಾರಸ್ವಾಮಿ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ವೆಬ್‌ಸೈಟ್‌ನಲ್ಲಿ ಅಡಕೆಯನ್ನು ಡ್ರಗ್ಸ್ ಪಟ್ಟಿಯಲ್ಲಿ ಸೇರಿಸಿದ ಮಹಾನುಭಾವರು ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕು. ಅಡಕೆ ಬೆಲೆಯನ್ನು ಕುಸಿಯುವಂತೆ ಮಾಡಲು ಪ್ರತಿ ವರ್ಷವೂ ಇಂತಹ ಪಿತೂರಿ ಮಾಡಲಾಗುತ್ತದೆ. ಇವು ನಿಲ್ಲಬೇಕು ಎಂದು ಆಗ್ರಹಿಸಿದರು.
ತಕ್ಷಣ ಲೋಪ ಸರಿಪಡಿಸುತ್ತೇವೆ: ಬೊಮ್ಮಾಯಿ
ಇದಕ್ಕೆ ಸ್ಪಂದಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಡಕೆ ಡ್ರಗ್ಸ್ ಪಟ್ಟಿಗೆ ಬರುವುದಿಲ್ಲ. ವೆಬ್‌ಸೈಟ್‌ನಲ್ಲಿ ಲೋಪ ಉಂಟಾಗಿರಬಹುದು. ಸಹಕಾರ ಸಚಿವರ ಗಮನಕ್ಕೆ ತಂದು ಲೋಪವನ್ನು ಸರಿಪಡಿಸಲಾಗುವುದು. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ