ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ 381 ಹೊರಗುತ್ತಿಗೆ ನೌಕರರನ್ನು ತನ್ನ ವ್ಯಾಪ್ತಿಯಿಂದ ಕೈಬಿಟ್ಟು ಏಜೆನ್ಸಿಗೆ ವಹಿಸುವ ಮೂಲಕ ವೃತ್ತಿ ಅಭದ್ರತೆಯ ಕೂಪಕ್ಕೆ ತಳ್ಳಲು ಹೊರಟಿದೆ.
ಬೆಂಗಳೂರು (ಮಾ.29): ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ 381 ಹೊರಗುತ್ತಿಗೆ ನೌಕರರನ್ನು ತನ್ನ ವ್ಯಾಪ್ತಿಯಿಂದ ಕೈಬಿಟ್ಟು ಏಜೆನ್ಸಿಗೆ ವಹಿಸುವ ಮೂಲಕ ವೃತ್ತಿ ಅಭದ್ರತೆಯ ಕೂಪಕ್ಕೆ ತಳ್ಳಲು ಹೊರಟಿದೆ. ಲೆಕ್ಕಪರಿಶೋಧನಾ ಆಕ್ಷೇಪದ ಹೆಸರಲ್ಲಿ ಅನೇಕ ವರ್ಷಗಳಿಂದ ಅತೀ ಕಡಿಮೆ ವೇತನಕ್ಕೆ ದುಡಿಯುತ್ತಿರುವವರ ಜೀವನದ ಜೊತೆ ಚೆಲ್ಲಾಟ ಆಡಲು ವಿವಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆರಂಭದಿಂದ ಇಲ್ಲಿಯವರೆಗೂ ಹೊರಗುತ್ತಿಗೆ ನೌಕರರಿಗೆ ವಿವಿಯಿಂದಲೇ ವೇತನ ನೀಡುತ್ತಾ ಬಂದಿರುವ ವ್ಯವಸ್ಥೆಯನ್ನು ಬದಲಾಯಿಸಿ ಈಗ ವಿವಿಗೆ ಬೇಕಿರುವ ಮಾನವ ಸಂಪನ್ಮೂಲವನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲು ಟೆಂಡರ್ ಆಹ್ವಾನಿಸಿದೆ. ಇದು ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಲ್ಲಿ ಸೇವಾ ಅಭದ್ರತೆಯ ಆತಂಕಕ್ಕೆ ಗುರಿಮಾಡಿದೆ ಎಂದು ಆರೋಪಿಸಲಾಗಿದೆ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಆಕ್ರೋಶ-ಉಗ್ರ ಹೋರಾಟ ಎಚ್ಚರಿಕೆ: ಬೆಂ.ವಿವಿಯ ನೌಕರ ವಿರೋಧಿ ನಡೆಗೆ ಕಂಗಾಲಾಗಿರುವ ವಿವಿಯ ಹೊರಗುತ್ತಿಗೆ ನೌಕರರು ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸೇವೆಯನ್ನು ಏಜೆನ್ಸಿ ವ್ಯಾಪ್ತಿಗೆ ವಹಿಸಿದರೆ ಪ್ರತಿ ಹುದ್ದೆಗೂ ವಿದ್ಯಾರ್ಹತೆ, ವಯೋಮಿತಿ ನಿಗದಿಪಡಿಸುತ್ತಾರೆ. ಏಜೆನ್ಸಿಯವರು ನಮ್ಮನ್ನೇ ಸೇವೆಯಲ್ಲಿ ಮುಂದುವರೆಸುತ್ತಾರೆಂಬ ಯಾವ ಖಾತ್ರಿಯೂ ಇಲ್ಲ. ವಿವಿಯಲ್ಲಿ 1999ರಲ್ಲಿ ಕೇವಲ 50, 100 ರು.ಗಳ ವೇತನದ ಮೂಲಕ ಸೇವೆ ಆರಂಭಿಸಿದ ನೂರಾರು ಮಂದಿ ನಿವೃತ್ತಿ ಅಂಚಿನಲ್ಲಿದ್ದಾರೆ.
ಈ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡರೆ ಅವರ ಕುಟುಂಬಗಳ ಗತಿ ಏನು? ಒಟ್ಟಾರೆ ಇದು ನಮ್ಮನ್ನು ನಮ್ಮ ಕುಟುಂಬವನ್ನು ಬೀದಿಗೆ ತಳ್ಳಲು ಅಧಿಕಾರಿಗಳು ಎಣೆದಿರುವ ತಂತ್ರ. ಇದನ್ನು ಕೂಡಲೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಂದುವರೆಸಿದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಹೊರಗುತ್ತಿಗೆ ನೌಕರರಿಗೆ ಸಿಗುತ್ತಿರುವುದು ಕನಿಷ್ಠ ₹19000 ನಿಂದ ಗರಿಷ್ಠ ₹23 ಸಾವಿರ ಮಾತ್ರ. ಇದರಿಂದ ವಾರ್ಷಿಕ ₹10 ಕೋಟಿ ವೆಚ್ಚ ವಿವಿಗೆ ತಗಲುತ್ತಿದೆ.
ಈಗ ಈ ನೌಕರರನ್ನು ಖಾಸಗಿ ಏಜೆನ್ಸಿಗೆ ವಹಿಸುವುದರಿಂದ ವಿಶ್ವವಿದ್ಯಾಲಯಕ್ಕೇ ಕೋಟ್ಯಂತರ ರು. ಹೆಚ್ಚುವರಿ ಹೊರೆ ಬೀಳಲಿದೆ. ಇದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದರೂ, ಪಿಎಫ್ ಇಎಸ್‌ಐ ಸೌಲಭ್ಯದ ಕಾರಣಕ್ಕೆ ಏಜೆನ್ಸಿಗೆ ನೀಡಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದನ್ನು ವಿವಿಯೇ ಕೊಡಬಹುದು. ಮೈಸೂರು ವಿವಿ ಸೇರಿದಂತೆ ಇನ್ನೂ ಹಲವು ವಿವಿಗಳೇ ಇಎಸ್‌ಐ, ಪಿಎಫ್ ನೀಡುತ್ತಿವೆ. ಅದನ್ನೇ ನಮ್ಮ ವಿವಿಯಲ್ಲೂ ಜಾರಿಗೆ ತರಬಹುದು. ಆದರೆ, ವಿವಿಯ ಕೆಲ ನೌಕರ ವಿರೋಧಿ ಅಧಿಕಾರಶಾಹಿ ಏಜೆನ್ಸಿ ಬಾಯಿಗೆ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ವಿವಿಯ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಬೆಂ.ವಿವಿಯು ಹೊರಗುತ್ತಿಗೆ ನೌಕರರ ಮೇಲೆ ನಡೆಸಿರುವ ಏಜೆನ್ಸಿ ಪ್ರಯೋಗ ಮುಂದೆ ರಾಜ್ಯದ ಎಲ್ಲ ವಿವಿಗಳಿಗೂ ಚಾಚುವುದರಲ್ಲಿ ಅನುಮಾನವಿಲ್ಲ. ಇದರಿಂದ ರಾಜ್ಯದ ಎಲ್ಲ 35 ವಿವಿಗಳ ಸಾವಿರಾರು ಹೊರಗುತ್ತಿಗೆ ನೌಕರರೂ ಬೀದಿಗೆ ಬೀಳಬೇಕಾಗುತ್ತದೆ. ಹಾಗಾಗಿ ಇದರ ವಿರುದ್ಧ ಎಲ್ಲ ಹೊರಗುತ್ತಿಗೆ ನೌಕರರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆ ಇದೆ.
-ಪುಟ್ಟಸ್ವಾಮಿ, ಬೆಂ.ವಿವಿ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ.
ಹದಿನೈದು ಇಪ್ಪತ್ತು ವರ್ಷಗಳಿಂದ ವಿವಿಗಾಗಿ ದುಡಿದವರನ್ನು ಏಜೆನ್ಸಿಗಳು ಹೊರಗೆ ಹಾಕಿದರೆ ಅವರ ಕುಟುಂಬ ಬೀದಿಗೆ ಬೀಳುತ್ತವೆ. ಇದರ ಹೊಣೆ ಯಾರು ಹೊರುತ್ತಾರೆ. ಹತ್ತಾರು ವರ್ಷ ದುಡಿಸಿಕೊಂಡ ನೌಕರರಿಗೆ ಅಭದ್ರತೆ ಸೃಷ್ಟಿಸಬಾರದೆಂದು ನ್ಯಾಯಾಲಯದ ಆದೇಶಗಳೂ ಇವೆ. ಹಾಗಾಗಿ ಅಗತ್ಯ ಬಿದ್ದರೆ ವಿವಿಯ ಈ ನಡೆ ವಿರುದ್ಧ ನಾವು ಕಾನೂನು ಹೋರಾಟಕ್ಕು ಸಿದ್ಧರಿದ್ದೇವೆ.
-ಪಿ.ಶಿವಪ್ಪ, ಬೆಂ.ವಿವಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ.
ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ಹೊರಗುತ್ತಿಗೆ ನೌಕರರ ಸೇವೆಯನ್ನು ಏಜೆನ್ಸಿಗೆ ವಹಿಸುವ ವಿಚಾರವಾಗಿ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಇದರ ಸಾಧಕ, ಬಾಧಕ ಚರ್ಚೆ ಮಾಡಿ ತೀರ್ಮಾನಿಸಲಾಗುವುದು.
-ಡಾ। ಎಸ್.ಎಂ.ಜಯಕರ, ಬೆಂ.ವಿವಿ ಕುಲಪತಿ.