
ಬೆಂಗಳೂರು(ನ.13): ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ 197 ಕೆರೆಗಳಿಗೆ ನೀರು ತುಂಬಿಸುವ 1,281 ಕೋಟಿ ರು. ವೆಚ್ಚದ ನೀರಾವರಿ ಯೋಜನೆ ಸೇರಿ ಹಲವು ನೀರಾವರಿ ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಒಟ್ಟು 197 ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರು ತುಂಬಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಯೋಜನೆಯೂ ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತದಲ್ಲಿ 406.50 ಕೋಟಿ ರು., ಎರಡನೇ ಹಂತಕ್ಕೆ 298.60 ಕೋಟಿ ರು., 3ನೇ ಹಂತಕ್ಕೆ 476.07 ಕೋಟಿ ರು. ವೆಚ್ಚವಾಗಲಿದೆ. ಯೋಜನೆಗಾಗಿ ಭದ್ರಾ ಜಲಾಶಯದಿಂದ 1.45 ಟಿಎಂಸಿ ನೀರು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಸಂಪುಟ ಸರ್ಕಸ್.. ಯಾರಿಗೆ ಕೋಕ್? ಈ ಇಬ್ಬರಿಗೆ ಚಾನ್ಸ್? ಸುಳಿವು ಕೊಟ್ಟ ಸಿಎಂ!
ಬ್ರಹ್ಮಾವರ ತಾಲೂಕಲ್ಲಿ ಅಣೆಕಟ್ಟು:
ಇನ್ನು ಪಶ್ಚಿಮ ವಾಹಿನಿ ಯೋನೆಯಡಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಹೆರೂರು ಗ್ರಾಮದ ಬಳಿ ಸೇತುವೆ ಮಡಿಸಾಲು ಹೊಳೆಗೆ ಅಡ್ಡಲಾಗಿ 35 ಕೋಟಿ ರು. ವೆಚ್ಚದ ಅಣೆಕಟ್ಟು ನಿರ್ಮಾಣ, ಬ್ರಹ್ಮಾವರ ತಾಲೂಕು ಕೊಕ್ಕರ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗವೀರಪೇಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 35 ಕೋಟಿ ರು. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇನ್ನು ಹಾರಂಗಿ ಜಲಾಶನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ, ರಕ್ಷಣಾ ಕಾಮಗಾರಿಗೆ 130 ಕೋಟಿ ರು. ಮೊತ್ತದ ಯೋಜನೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ 5 ಗ್ರಾಮ ಪಂಚಾಯ್ತಿಗಳಲ್ಲಿ ಬರುವ 84 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕೆರೆಗಳನ್ನು ಬೇಡ್ತಿ ನದಿಯ ಉಪನದಿಯಾದ ಕಳವಗಿಹಳ್ಳದಿಂದ ತುಂಬಿಸಲು 225 ಕೋಟಿ ರು. ಮೊತ್ತದ ಯೋಜನೆಗೆ ಅನುಮತಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
549 ಕೋಟಿ ರು. ಅಂದಾಜು ವೆಚ್ಚದ ಬೂದಿಹಾಳ್-ಪೀರಾಪುರ ನೀರಾವರಿ ಯೋಜನೆಗೆ ಈ ವರ್ಷ 334 ಕೋಟಿ ರು. ಬಿಡುಗಡೆ ಮಾಡಲು, ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ 1,200 ಹೆಕ್ಟೇರ್ ಭೂಮಿಗೆ ಹಿರಣ್ಯಕೇಶಿ ನದಿಯಿಂದ ನೀರಾವರಿ ಕಲ್ಪಿಸಲು ಅಡವಿ ಸಿದ್ದೇಶ್ವರ ಏತ ನೀರಾವರಿ ಯೋಜನೆ, ಮಾರ್ಕಂಡೇಶ ಜಲಾಶಯದಿಂದ ಮತ್ತೊಂದು ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ