ಕೊರೋನಾ ಭೀತಿ: ‘ಆರೋಗ್ಯ ಸೇತು’ ಹೇಗೆ ಸುರಕ್ಷಿತವಲ್ಲ?

By Kannadaprabha NewsFirst Published Nov 13, 2020, 9:56 AM IST
Highlights

ಆರೋಗ್ಯ ಸೇತು ಆ್ಯಪ್‌ ಬಳಕೆಯನ್ನು ಕೇಂದ್ರ ಸರ್ಕಾರವು ಕಡ್ಡಾಯ ಮಾಡಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅನಿವರ್‌| ತಾಂತ್ರಿಕ ವಿವರ ನೀಡುವಂತೆ ಅರ್ಜಿದಾರಿಗೆ ಸೂಚನೆ| ನ.26ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ| 

ಬೆಂಗಳೂರು(ನ.13): ಆರೋಗ್ಯ ಸೇತು ಆ್ಯಪ್‌ ಸುರಕ್ಷಿತವಲ್ಲ ಹಾಗೂ ಬಳಕೆದಾರರ ಖಾಸಗಿ ಮಾಹಿತಿಗೆ ರಕ್ಷಣೆ ಇಲ್ಲ ಎಂಬ ಆರೋಪಕ್ಕೆ ನಿಖರ ತಾಂತ್ರಿಕ ವಿವರಣೆ ನೀಡುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ.

ಆರೋಗ್ಯ ಸೇತು ಆ್ಯಪ್‌ ಬಳಕೆಯನ್ನು ಕೇಂದ್ರ ಸರ್ಕಾರವು ಕಡ್ಡಾಯ ಮಾಡಿದೆ ಎಂದು ಆರೋಪಿಸಿ ನಗರದ ಅನಿವರ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಚಾಮರಾಜನಗರದಲ್ಲಿ ಎಲ್ಲರ ಫೋನಲ್ಲೂ ಈ ಆ್ಯಪ್ ಕಡ್ಡಾಯ..!

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆರೋಗ್ಯ ಸೇತು ಆ್ಯಪ್‌ ಸುರಕ್ಷಿತವಲ್ಲ. ಆಪ್‌ ಬಳಸಲು ಆರಂಭಿಸುತ್ತಿದ್ದಂತೆಯೇ ಅದು ಬಳಕೆದಾರರ ಎಲ್ಲ ಆರೋಗ್ಯ ಮಾಹಿತಿ ಕೇಳುತ್ತದೆ. ಅವುಗಳನ್ನು ದಾಖಲಿಸಿ ಬಳಕೆ ಮಾಡಲು ಪ್ರಾರಂಭಿಸುತ್ತಿದ್ದಂತೆ ಮೊಬೈಲ್‌ ಬ್ಲೂಟೂತ್‌ ತೆರೆದುಕೊಳ್ಳುತ್ತದೆ. ಜತೆಗೆ ಈ ಮಾಹಿತಿಯನ್ನು ಸರ್ಕಾರಿ ಪ್ರಾಧಿಕಾರಗಳಿಗೆ ರವಾನಿಸುತ್ತದೆ. ಆ್ಯಪ್‌ ಬಳಕೆದಾರರ ಖಾಸಗಿತನದ ದೃಷ್ಟಿಯಿಂದ ಸುರಕ್ಷಿತವಲ್ಲ ಮತ್ತು ಬಳಕೆದಾರರ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿ, ಆರೋಗ್ಯ ಸೇತು ಆ್ಯಪ್‌ ಅನ್ನು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಾರಿಗೊಳಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಬಳಿ ರೋಗಿ ಮಾಹಿತಿ ನೀಡಿದಂತೆಯೇ ಆರೋಗ್ಯ ಸೇತು ಆ್ಯಪ್‌ ಕೂಡ ಮಾಹಿತಿಗಳನ್ನು ಕೇಳುತ್ತದೆ ಅಷ್ಟೇ. ಮಾಹಿತಿ ಸರ್ಕಾರದ ಬಳಿ ಇರುತ್ತದೆಯೇ ಹೊರತು ಖಾಸಗಿಯವರಿಗೆ ಲಭ್ಯವಾಗುವುದಿಲ್ಲ. ಆದ್ದರಿಂದ ಆ್ಯಪ್‌ನಲ್ಲಿರುವ ಬಳಕೆದಾರರ ಮಾಹಿತಿ ಸುರಕ್ಷಿತ ಎಂದು ಮನವರಿಕೆ ಮಾಡಿಕೊಟ್ಟರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಆ್ಯಪ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ. ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸರ್ಕಾರಿ ಪ್ರಾಧಿಕಾರಗಳಿಗೆ ಹೇಗೆ ರವಾನಿಸುತ್ತದೆ. ಬಳಕೆದಾರನ ಆರೋಗ್ಯ ಮಾಹಿತಿಗೆ ಸಂಬಂಧಿಸಿದಂತೆ ಆ್ಯಪ್‌ನಲ್ಲಿ ಹಸಿರು, ಕೇಸರಿ ಮತ್ತು ಹಳದಿ ಸಿಗ್ನಲ್‌ಗಳನ್ನು ಹೇಗೆ ನೀಡುತ್ತದೆ ಎಂಬ ತಾಂತ್ರಿಕ ವಿವರಗಳನ್ನು ಒದಗಿಸಲು ಅರ್ಜಿದಾರರಿಗೆ 10 ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ನ.26ಕ್ಕೆ ಮುಂದೂಡಿತು.
 

click me!