ಗಡಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಿ: ಕೇರಳ ಸರ್ಕಾರಕ್ಕೆ ಪತ್ರ

By Web DeskFirst Published Oct 13, 2019, 8:28 AM IST
Highlights

ಗಡಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಿ: ಕೇರಳ ಸರ್ಕಾರಕ್ಕೆ ಪತ್ರ| ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ರಿಂದ ಮನವಿ

ಬೆಂಗಳೂರು[ಅ.13]: ಕಾಸರಗೋಡು ಬಳಿಯ ಬೇಕಲ್‌, ಉದುಮ ಗಡಿನಾಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಬರುವ ಶಿಕ್ಷಕರನ್ನೇ ನೇಮಿಸುವಂತೆ ಆಗ್ರಹಿಸಿ ಕೇರಳ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಪತ್ರ ಬರೆದಿದ್ದಾರೆ.

ಈ ಕುರಿತು ಶನಿವಾರ ಕೇರಳ ಶಿಕ್ಷಣ ಸಚಿವ ಪ್ರೊ.ಸಿ. ರವೀಂದ್ರನಾಥ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ಕೇರಳ ಗಡಿಭಾಗದ ಕಾಸರಗೋಡಿನ ಕನ್ನಡ ಪ್ರದೇಶಗಳಾದ ಬೇಕಲ್‌, ಉದುಮ ಮತ್ತಿತರ ಕಡೆಗಳ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷೆ ಗೊತ್ತಿಲ್ಲದ ಮಲೆಯಾಳಿ ಶಿಕ್ಷಕರನ್ನು ನೇಮಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬರುವ ಶಿಕ್ಷಕರನ್ನೇ ನೇಮಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಬೇಕಲ ಆಯ್ತು, ಈಗ ಉದುಮ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ!

ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಶಾಲೆಗಳನ್ನು ಬಹಿಷ್ಕರಿಸಿ ಹೋರಾಟಕ್ಕಿಳಿದಿರುವ ಕುರಿತು ಶನಿವಾರ ‘ಬೇಕಲ ಆಯ್ತು, ಈಗ ಉದುಮ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ’ ಎಂಬ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಶಿಕ್ಷಣ ಸಚಿವರು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ಬೋಧನೆ ಮಾಡುತ್ತಿರುವುದು ಮಕ್ಕಳಲ್ಲಿ ನಿರಾಸೆ ಮೂಡಿಸುವಂತಿದೆ. ಅಲ್ಲದೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮಲಯಾಳಂನಲ್ಲಿ ಪಾಠವನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟುಕಷ್ಟಪಡುತ್ತಿದ್ದಾರೆ. ವಿವಿಧ ಕಾರಣಗಳಿಗೆ ಶಾಲೆಗಳಲ್ಲಿ ಮಕ್ಕಳು ಹತಾಶೆಗೊಳಗಾಗಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮಲಯಾಳಂ ಶಿಕ್ಷಕರನ್ನು ವಾಪಸ್‌ ಕರೆಯಿಸಿಕೊಂಡು ಕನ್ನಡ ಬರುವ ಶಿಕ್ಷಕರನ್ನು ನೇಮಿಸಬೇಕು ಎಂದು ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮತ್ತೆ ಮಲಯಾಳಂ ಶಿಕ್ಷಕರು

click me!