ಕರ್ನಾಟಕಕ್ಕೆ ಇನ್ನೊಂದು ‘ಜಲಸಮರ’ದ ಕಂಟಕ!

Kannadaprabha News   | Kannada Prabha
Published : Feb 03, 2026, 07:25 AM IST
Supreme Court of India

ಸಾರಾಂಶ

ಕರ್ನಾಟಕದಲ್ಲಿ ಉಗಮವಾಗಿ ತಮಿಳುನಾಡಿನತ್ತ ಹರಿಯುವ ದಕ್ಷಿಣ ಪಿನಾಕಿನಿ ಅಥವಾ ಮಾರ್ಕಾಂಡೇಯ ಎಂದೂ ಕರೆಯಲಾಗುವ (ಪೆನ್ನಿಯಾರ್‌) ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ

ನವದೆಹಲಿ: ಕರ್ನಾಟಕದಲ್ಲಿ ಉಗಮವಾಗಿ ತಮಿಳುನಾಡಿನತ್ತ ಹರಿಯುವ ದಕ್ಷಿಣ ಪಿನಾಕಿನಿ ಅಥವಾ ಮಾರ್ಕಾಂಡೇಯ ಎಂದೂ ಕರೆಯಲಾಗುವ (ಪೆನ್ನಿಯಾರ್‌) ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಅಲ್ಲದೆ ಈ ಕುರಿತು 1 ತಿಂಗಳೊಳಗಾಗಿ ಅಧಿಸೂಚನೆ ಆದೇಶ ಹೊರಡಿಸುವಂತೆಯೂ ಸೂಚಿಸಿದೆ. ಇದರೊಂದಿಗೆ ರಾಜ್ಯದ ಮತ್ತೊಂದು ನದಿ ವಿಷಯ ನ್ಯಾಯಾಧಿಕರಣದ ಮೆಟ್ಟಿಲೇರಿದಂತಾಗಿದೆ.

ಈಗಾಗಲೇ, ಕಾವೇರಿ, ಕೃಷ್ಣಾ ಮತ್ತು ಮಹದಾಯಿ ನದಿ ವ್ಯಾಜ್ಯಗಳು ನ್ಯಾಯಾಧಿಕರಣದ ಮೆಟ್ಟಿಲೇರಿವೆ. ಅದರ ಬೆನ್ನಲ್ಲೇ ಇದೀಗ ಪಿನಾಕಿನಿ ನದಿ ವಿಷಯ ಕೂಡಾ ನ್ಯಾಯಾಧಿಕರಣದ ತೆಕ್ಕೆಗೆ ಹೋಗುವುದು ಖಚಿತವಾಗಿದೆ.

ನದಿ ಕುರಿತಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಷಯದಲ್ಲಿ ಆದೇಶ ಹೊರಡಿಸಿರುವ ನ್ಯಾ। ವಿಕ್ರಂನಾಥ್‌ ಮತ್ತು ಎನ್‌.ವಿ. ಅಂಜಾರಿಯ ಅವರ ಪೀಠ, ‘2 ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ ಹೊರಡಿಸಿ ನ್ಯಾಯಮಂಡಳಿಯೊಂದನ್ನು ರಚಿಸಬೇಕು. ಈ ಕೆಲಸ 1 ತಿಂಗಳ ಒಳಗಾಗಿ ಆಗಬೇಕು’ ಎಂದು ಹೇಳಿದೆ.

ಏನಿದು ವಿವಾದ?:

ಬೆಂಗಳೂರಿಗೆ ಸಮೀಪವಿರುವ ನಂದಿ ಬೆಟ್ಟದಲ್ಲಿ ಉಗಮವಾಗುವ ಪಿನಾಕಿನಿ ನದಿಯು ತಮಿಳುನಾಡಿನ ಉತ್ತರ ಭಾಗದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನಡುವೆ ಕರ್ನಾಟಕ ಸರ್ಕಾರ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದೆ. ಇದರ ಮೂಲಕ ಬೆಂಗಳೂರಿನ ಎಲೆ ಮಲ್ಲಪ್ಪ ಚಟ್ಟಿ ಕೆರೆಯಿಂದ ಹಿಡಿದು ಹೊಸಕೋಟೆವರೆಗೂ ನೀರು ಪೂರೈಸುವ ಕಾಮಗಾರಿ ಆರಂಭಿಸಿದೆ.

ತಮಿಳ್ನಾಡು ವಿರೋಧ:

ಆದರೆ ನದಿಗೆ ಅಡ್ಡಲಾಗಿ ಕರ್ನಾಟಕ ಅಣೆಕಟ್ಟು, ಜಲಾಶಯಗಳನ್ನು ನಿರ್ಮಿಸಿದೆ. ಇದರಿಂದ ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ತಿರುವಣ್ಣಾಮಲೈ, ಕಡಲೂರು, ವಿಲ್ಲುಪುರಂನಂತಹ ಪ್ರದೇಶಗಳಿಗೆ ಸಿಗುವ ನೀರಿನ ಪಾಲು ಕ್ಷೀಣಿಸುತ್ತದೆ ಹಾಗೂ 2 ರಾಜ್ಯಗಳ ನಡುವಿನ ನದಿ ರಾಷ್ಟ್ರೀಯ ಸಂಪತ್ತು ಎಂಬುದು ತಮಿಳುನಾಡಿನ ವಾದ. ಇದೇ ಕಾರಣಕ್ಕೆ ತಮಿಳುನಾಡು 2018ರಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ವಿವಾದ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸುವಂತೆ ಕೋರಿತ್ತು. ಆದರೆ ಇದನ್ನು ವಿರೋಧಿಸಿದ್ದ ಕರ್ನಾಟಕ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು.

ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ನಡುವೆ ಸಂಧಾನ ಸಭೆ ನಡೆಸಿತ್ತಾದರೂ ಅದು ಫಲ ಕೊಟ್ಟಿರಲಿಲ್ಲ. ಹೀಗಾಗಿ ಇದೀಗ ಸುಪ್ರೀಂಕೋರ್ಟ್‌ ನ್ಯಾಯಾಧಿಕರಣ ರಚನೆಗೆ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರದ ತೆರಿಗೆ ಪಾಲು ಏರಿಕೆಯಲ್ಲಿ ರಾಜ್ಯ ನಂ.1
ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ